Karnataka news paper

5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್‌ ಧಾರಣೆ ಬೇಡ! ಕೋವಿಡ್‌ ಮಾರ್ಗಸೂಚಿ ಪರಿಷ್ಕರಿಸಿದ ಕೇಂದ್ರ!


ಹೈಲೈಟ್ಸ್‌:

  • 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್‌ ಧಾರಣೆ ಬೇಡ
  • ಮಕ್ಕಳ ಕೋವಿಡ್‌ ಮಾರ್ಗಸೂಚಿ ಪರಿಷ್ಕರಿಸಿದ ಕೇಂದ್ರ
  • 6 ರಿಂದ 11 ವರ್ಷದೊಳಗಿನ ಮಕ್ಕಳು ಮಾಸ್ಕ್‌ ಧರಿಸುವುದು ಸೂಕ್ತ

ಹೊಸದಿಲ್ಲಿ: ಓಮಿಕ್ರಾನ್‌ ದಾಳಿಯಿಂದಾಗಿ ದೇಶಾದ್ಯಂತ ಕೊರೊನಾ ಮೂರನೇ ಅಲೆ ಉತ್ತುಂಗ ತಲುಪಿರುವ ನಡುವೆಯೇ ದೇಶಾದ್ಯಂತ ಜಾರಿಯಲ್ಲಿರುವ ಕೋವಿಡ್‌-19 ಮಾರ್ಗಸೂಚಿಯಲ್ಲಿ ಮಹತ್ತರ ಬದಲಾವಣೆಯನ್ನು ಕೇಂದ್ರ ಸರಕಾರ ಘೋಷಿಸಿದೆ. ಮುಖ್ಯವಾಗಿ ಮಕ್ಕಳಿಗೆ ಮಾಸ್ಕ್‌ ಹಾಕುವುದು, ಮಕ್ಕಳಿಗೆ ನೀಡಬೇಕಾದ ಔಷಧಗಳು, ಮಕ್ಕಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾದಾಗ ಪಾಲಿಸಬೇಕಾದ ತುರ್ತು ಕ್ರಮಗಳ ಕುರಿತು ಪೋಷಕರಿಗೆ ಹಾಗೂ ಆರೋಗ್ಯಸೇವೆ ಸಿಬ್ಬಂದಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗದರ್ಶನ ನೀಡಿದೆ.

ಐದು ವರ್ಷದೊಳಗಿನ ಮಕ್ಕಳು ಕೊರೊನಾ ಮುನ್ನೆಚ್ಚರಿಕೆ ನಿಯಮವಾಗಿ ಮಾಸ್ಕ್‌ ಧರಿಸಲೇಬೇಕು ಎಂದಿಲ್ಲ. ಆರು ವರ್ಷದಿಂದ 11 ವರ್ಷದೊಳಗಿನ ಮಕ್ಕಳು ಮಾಸ್ಕ್‌ ಧರಿಸುವುದು ಸೂಕ್ತ. ಆದರೆ, ಪೋಷಕರ ನಿಗಾದಲ್ಲಿ ಮಾಸ್ಕ್‌ಗಳನ್ನು ಸುರಕ್ಷಿತವಾಗಿ ಧರಿಸುವ ಕುರಿತು ಮಕ್ಕಳಿಗೆ ಮಾರ್ಗಸೂಚನೆ ನೀಡಬೇಕು. ಮುಖ್ಯವಾಗಿ 12 ವರ್ಷ ಮೇಲ್ಪಟ್ಟ ಮಕ್ಕಳು ಮಾತ್ರ ವಯಸ್ಕರಂತೆ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಅವರು ಕೂಡ ಕೊರೊನಾ ಸೋಂಕಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆಯಿದೆ ಎಂದು ಸಚಿವಾಲಯ ತಿಳಿಸಿದೆ.

ಒಂದೇ ದಿನ 3.17 ಲಕ್ಷ ಮಂದಿಗೆ ಕೋವಿಡ್: ಎಂಟು ತಿಂಗಳಲ್ಲಿಯೇ ಅತ್ಯಧಿಕ ಪ್ರಕರಣ

ಮಕ್ಕಳಿಗೆ ಕೊರೊನಾ ಸೋಂಕು ತಗುಲಿದಾಗ ಚಿಕಿತ್ಸೆ ನೆಪದಲ್ಲಿ ವೈರಾಣು ನಿರೋಧಕ ಔಷಧಗಳು ಅಥವಾ ಪ್ರತಿಕಾಯಗಳನ್ನು ನೀಡಬಾರದು. 18 ವರ್ಷದೊಳಗಿನ ಮಕ್ಕಳವರೆಗೂ ಇದೇ ನಿಯಮ ಅನ್ವಯವಾಗಲಿದೆ. ವಿಶೇಷವಾಗಿ , ಸೂಕ್ಷ್ಮಜೀವಿಗಳ ನಿರೋಧಕಗಳು ಅಥವಾ ಆ್ಯಂಟಿ ಮೈಕ್ರೊಬಿಯಲ್‌ ಔಷಧಗಳನ್ನು ಸೌಮ್ಯ ರೂಪದ ಕೊರೊನಾ ಸೋಂಕು ತಗುಲಿದ ಮಕ್ಕಳಿಗೆ ನೀಡುವುದು ಬೇಡ. ರೋಗಲಕ್ಷಣ ರಹಿತ ಮತ್ತು ಸೌಮ್ಯ ಲಕ್ಷಣಗಳುಳ್ಳ ಮಕ್ಕಳಿಗೆ ಸ್ಟಿರಾಯ್ಡ್ಸ್‌ಗಳನ್ನು ಮಾತ್ರ ಕೊಡಲೇಬಾರದು. ಇದು ಅಪಾಯಕಾರಿ. ಪೋಷಕರು , ಪಾಲಕರು ಸ್ವಯಂ ವೈದ್ಯ ಕೂಡ ಮಾಡಕೂಡದು. ಅಧಿಕೃತ ಹಾಗೂ ಸ್ಥಳೀಯ ವೈದ್ಯರ ಬಳಿಗೆ ಮಕ್ಕಳನ್ನು ಶೀಘ್ರವಾಗಿ ಕರೆದೊಯ್ಯಬೇಕು ಎಂದು ಸಚಿವಾಲಯವು ಸೂಚಿಸಿದೆ. ಸೋಂಕಿನಿಂದ ಶೀಘ್ರ ಚೇತರಿಕೆ ಕಾಣಲು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಮತ್ತು ಪೋಷಕರಿಂದ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯ ಹೆಚ್ಚಾಗಿ ಆಗಬೇಕಿದೆ ಎಂದು ತಿಳಿಸಲಾಗಿದೆ.

ಕೋವಿಡ್ ಪ್ರಕರಣಗಳಲ್ಲಿ ಶೇ 9ರಷ್ಟು ಹೆಚ್ಚಳ: ಮೂರೂವರೆ ಲಕ್ಷ ಸಮೀಪ ಕೇಸ್

4 ಕೋಟಿ ಲಸಿಕೆ ಸಾಧನೆ: 15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ನಿರೋಧಕ ಲಸಿಕೆ ನೀಡುವ ಅಭಿಯಾನದ ಅಡಿಯಲ್ಲಿ ಇದುವರೆಗೂ 4 ಕೋಟಿಗೂ ಹೆಚ್ಚು ಡೋಸ್‌ ನೀಡಲಾಗಿದೆ. ಕೇವಲ 19 ದಿನಗಳಲ್ಲಿ ಈ ಸಾಧನೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯ ತಿಳಿಸಿದ್ದಾರೆ.

6 ಮಂದಿ ನೋಂದಣಿ: ಕೊರೊನಾ ಲಸಿಕೆ ಪಡೆಯಲು ಅಗತ್ಯ ನೋಂದಣಿ ಮಾಡಿಕೊಳ್ಳಬೇಕಿರುವ ‘ಕೋವಿನ್‌’ ವೆಬ್‌ಸೈಟ್‌ನಲ್ಲಿ ಇನ್ಮುಂದೆ ಒಂದೇ ಮೊಬೈಲ್‌ ಸಂಖ್ಯೆ ಬಳಸಿಕೊಂಡು ಒಟ್ಟು ಆರು ಜನರು ನೋಂದಣಿಯಾಗಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೂ 4 ಜನರಿಗೆ ಮಾತ್ರವೇ ಅವಕಾಶವಿತ್ತು. ಜತೆಗೆ ರೇಸ್‌ ಆ್ಯನ್‌ ಇಶ್ಯೂ ಎಂಬ ಹೊಸ ವಿಭಾಗವನ್ನು ಕೋವಿನ್‌ ವೆಬ್‌ಸೈಟ್‌ನಲ್ಲಿ ನೀಡಲಾಗಿದ್ದು, ಜನರು ತಮ್ಮ ಲಸಿಕೆ ಸಂಬಂಧಿತ ಮಾಹಿತಿಯ (ಒಂದು ಡೋಸ್‌ ಪೂರ್ಣ, ಎರಡನೇ ಡೋಸ್‌ ಬಾಕಿ) ಪರಿಷ್ಕರಣೆಗೆ ಬಳಸಬಹುದಾಗಿದೆ.



Read more

[wpas_products keywords=”deal of the day sale today offer all”]