Karnataka news paper

ಗೃಹ ಭಾಗ್ಯ ಯೋಜನೆಗಳಿಗೆ ಮತ್ತೆ ಚಾಲನೆ; ಕೋಲಾರ ಜಿಲ್ಲೆಗೆ 6,170 ಮನೆಗಳ ಬಿಡುಗಡೆ!


ಹೈಲೈಟ್ಸ್‌:

  • ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಗೃಹ ಭಾಗ್ಯ ಯೋಜನೆಗಳಿಗೆ ಸರಕಾರ ಮತ್ತೆ ಚಾಲನೆ ನೀಡಿದೆ
  • ವಸತಿ ಯೋಜನೆಗಳಲ್ಲಿ ನಡೆದ ಅಕ್ರಮಗಳು ಹಾಗೂ ಕೊರೊನಾದಿಂದಾಗಿ ಕಳೆದ ಎರಡು ಮೂರು ವರ್ಷಗಳಿಂದ ವಸತಿ ಯೋಜನೆಗಳು ಜನರಿಗೆ ಸಿಕ್ಕಿರಲಿಲ್ಲ
  • ಕೋಲಾರ ಜಿಲ್ಲೆಯಾದ್ಯಂತ 6,170 ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರಕಾರ ನೀಡಿದೆ

ವೆಂ.ಸುನೀಲ್‌ ಕುಮಾರ್‌ ಕೋಲಾರ
ಕೋಲಾರ: ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಗೃಹ ಭಾಗ್ಯ ಯೋಜನೆಗಳಿಗೆ ಸರಕಾರ ಮತ್ತೆ ಚಾಲನೆ ನೀಡಿದ್ದು, ಜಿಲ್ಲೆಗೆ 6,170 ಮನೆಗಳನ್ನು ಸರಕಾರ ಬಿಡುಗಡೆ ಮಾಡಿದೆ. ಮನೆ ಹಂಚಿಕೆ ವೇಳೆ ಅರ್ಹರಿಗೆ ಆದ್ಯತೆ ಸಿಗಬೇಕಿದೆ. ಗ್ರಾಮೀಣ ಭಾಗದ ವಸತಿ ರಹಿತರು ಹಾಗೂ ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಸರಕಾರದಿಂದ ಅನುದಾನ ನೀಡಲಾಗುತ್ತಿದ್ದು, ಗ್ರಾಮಗಳಲ್ಲಿ ಫಲಾನುಭವಿಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ.

ವಸತಿ ಯೋಜನೆಗಳಲ್ಲಿ ನಡೆದ ಅಕ್ರಮಗಳು ಹಾಗೂ ಕೊರೊನಾದಿಂದಾಗಿ ಕಳೆದ ಎರಡು ಮೂರು ವರ್ಷಗಳಿಂದ ವಸತಿ ಯೋಜನೆಗಳು ಜನರಿಗೆ ಸಿಕ್ಕಿರಲಿಲ್ಲ. ಇದರಿಂದಾಗಿ ಸಾಕಷ್ಟು ಜನರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಅದರಂತೆ ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ನಿವಾಸ್‌ ಯೋಜನೆ (ಗ್ರಾಮೀಣ) ಅಡಿಯಲ್ಲಿ ರಾಜ್ಯದಾದ್ಯಂತ ನಾಲ್ಕು ಲಕ್ಷ ಮನೆಗಳನ್ನು ನಿರ್ಮಿಸಲು ಮುಂದಾಗಿದೆ. ಅದರಂತೆ ಕೋಲಾರ ಜಿಲ್ಲೆಗೆ 6,170 ಮನೆಗಳ ನಿರ್ಮಾಣ ಗುರಿಯನ್ನು ಸರಕಾರ ನೀಡಿದೆ. ಆ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಿದೆ.
ನರೇಗಾ ಯೋಜನೆಯಡಿ ಲಕ್ಷಾಂತರ ರೂ.ದುರ್ಬಳಕೆ; ಕೋಲಾರದಲ್ಲಿ ಎರಡೆರಡು ಕಡೆ ಜಾಬ್ ಕಾರ್ಡ್!
ಗ್ರಾಪಂ ಚುನಾವಣೆಯಲ್ಲಿ ಆಯ್ಕೆಯಾಗಿರುವ ಸದಸ್ಯರು ತಮಗೆ ಬೇಕಾದವರಿಗೆ ಹಾಗೂ ಸಂಬಂಧಿಕರಿಗೆ ಮನೆಗಳನ್ನು ಹಂಚಿಕೆ ಮಾಡಿಸುತ್ತಾರೆಂಬ ಆರೋಪಗಳು ಮೊದಲಿನಿಂದಲೂ ಇದ್ದು, ಕೆಲವು ಕಡೆಗಳಲ್ಲಿ ಈಗಾಗಲೇ ಮನೆ ಹೊಂದಿರುವವರಿಗೆ ಮನೆಗಳನ್ನು ನೀಡಿದ ಪ್ರಕರಣಗಳಿವೆ.

ಆ ಹಿನ್ನೆಲೆಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಗ್ರಾಮಗಳಲ್ಲಿ ನಿಜವಾಗಿಯೂ ವಸತಿ ರಹಿತರು, ಬಡವರನ್ನು ಗುರುತಿಸುವಂತಹ ಕಾರ್ಯಕ್ಕೆ ಸದಸ್ಯರು ಮುಂದಾಗುವ ಮೂಲಕ ಯೋಜನೆ ಸೌಲಭ್ಯ ಬಡವರಿಗೆ ಸಿಗುವಂತೆ ಮಾಡಬೇಕಿದೆ.

ಸದಸ್ಯರಿಗೆ ಅನುಗುಣವಾಗಿ ಮನೆಗಳು
ಗ್ರಾಪಂ ಸದಸ್ಯರಿಗೆ ಅನುಗುಣವಾಗಿ ಸರಕಾರ ಮನೆಗಳನ್ನು ಹಂಚಿಕೆ ಮಾಡಿರುವ ಸರಕಾರವೂ ಗ್ರಾಮ ಪಂಚಾಯಿತಿಗಳನ್ನು ಎ, ಬಿ ಹಾಗೂ ಸಿ ಎಂದು ವಿಗಂಡಿಸಿದೆ. ಅದರಂತೆ ಎ ವರ್ಗದ ಪಂಚಾಯಿತಿಗಳಿಗೆ 50 ಮನೆಗಳು, ಬಿ ವರ್ಗಕ್ಕೆ 40 ಹಾಗೂ ಸಿ ವರ್ಗದ ಪಂಚಾಯಿತಿಗಳಿಗೆ 30 ಮನೆಗಳನ್ನು ಹಂಚಿಕೆ ಮಾಡಿದೆ.
ಬಡವರ ನಿದ್ದೆಗೆಡಿಸಿದ ಮನೆ ಹಂಚಿಕೆ: ಕಂಟಕವಾದ ಆದಾಯ ಮಿತಿ; ಪರಿಷ್ಕರಣೆಯಾಗದ ಅನುದಾನ ಮೊತ್ತ!
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹೇಗೆ?
ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ನಿವಾಸ್‌ ಯೋಜನೆ (ಗ್ರಾಮೀಣ) ಯೋಜನೆಗೆ ಫಲಾನುಭವಿಗಳನ್ನು ವಾರ್ಡ್‌ ಸಭೆ ಹಾಗೂ ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರತಿಯೊಂದು ಗ್ರಾಮಗಳಲ್ಲಿ ಅರ್ಹ ಫಲಾನುಭವಿಗಳನ್ನು ವಾರ್ಡ್‌ ಸಭೆಯಲ್ಲಿ ಆಯ್ಕೆ ಮಾಡಿ ಗ್ರಾಪಂಗಳಿಗೆ ಕಳುಹಿಸಲಾಗುತ್ತದೆ.

ಗ್ರಾಪಂ ವ್ಯಾಪ್ತಿಯ ಎಲ್ಲಗ್ರಾಮಗಳ ವಾರ್ಡ್‌ ಸಭೆಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ಪಟ್ಟಿಯನ್ನು ಗ್ರಾಮಸಭೆಯಲ್ಲಿ ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಜಿಪಂ ಆನ್‌ಲೈನ್‌ ಪೋರ್ಟಲ್‌ಗೆ ಅಗತ್ಯ ದಾಖಲೆಗಳೊಂದಿಗೆ ಅಪ್‌ಲೋಡ್‌ ಮಾಡಲಾಗುತ್ತದೆ. ಅಪ್‌ಲೋಡ್‌ ಮಾಡಿದ ತಿಂಗಳಲ್ಲಿ ಮನೆ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಾದ್ಯಂತ 6,170 ಮನೆಗಳನ್ನು ನಿರ್ಮಿಸುವ ಗುರಿಯನ್ನು ಸರಕಾರ ನೀಡಿದೆ. ಅದರಂತೆ ಎಲ್ಲ ತಾಲೂಕುಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಸೂಚನೆ ನೀಡಲಾಗಿದ್ದು, ವಾರ್ಡ್‌ ಸಭೆ ಹಾಗೂ ಗ್ರಾಮ ಸಭೆಗಳಲ್ಲಿ ಅಂತಿಮವಾಗುವ ಫಲಾನುಭವಿಗಳ ಪಟ್ಟಿಯನ್ನು ಜ.22ರೊಳಗೆ ಅಪ್‌ಲೋಡ್‌ ಮಾಡುವಂತೆ ತಿಳಿಸಲಾಗಿದೆ.
ಸಂಜೀವಪ್ಪ, ವಸತಿ ಯೋಜನೆಗಳ ನೋಡಲ್‌ ಅಧಿಕಾರಿ
ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ; ಚಿಕ್ಕಬಳ್ಳಾಪುರದಲ್ಲಿ ನಗರ ಆಶ್ರಯ ಯೋಜನೆಗೆ ಗ್ರಹಣ!
ತಾಲೂಕುವಾರು ಬಿಡುಗಡೆಯಾದ ಮನೆಗಳು

ತಾಲೂಕು- ನೀಡಲಾದ ಗುರಿ

  • ಮಾಲೂರು -1,120
  • ಕೆಜಿಎಫ್‌ -650
  • ಮುಳಬಾಗಿಲು- 1,160
  • ಕೋಲಾರ -1,420
  • ಶ್ರೀನಿವಾಸಪುರ- 990
  • ಬಂಗಾರಪೇಟೆ- 830



Read more

[wpas_products keywords=”deal of the day sale today offer all”]