ಹೈಲೈಟ್ಸ್:
- ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ಮಾತ್ರ ಕಳೆದ ಮೂರು ವರ್ಷಗಳಿಂದ ಒಂದೇ ರೀತಿ ಇದ್ದು, ಕೋವಿಡ್ ಕಾಲದಲ್ಲಿ ಬಡವರ ಆಪತ್ಬಾಂಧವ ಎನಿಸಿದೆ
- ಸಾರಿಗೆ ಬಸ್ ಪ್ರಯಾಣ ಕಳೆದೆರಡು ವರ್ಷಗಳಿಂದ ಇದ್ದಷ್ಟೆಯೇ ಇದೆ. ಈಗಲೂ ಬಸ್ ಪ್ರಯಾಣದಲ್ಲಿಒಂದು ಕಿ.ಮೀ. ವೆಚ್ಚ 1 ರೂ. ದಿಂದ 1.28 ಇದೆ
- ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಕರ್ನಾಟಕ ಅಷ್ಟೇ ಅಲ್ಲದೆ, ಗೋವಾ, ಮಹಾರಾಷ್ಟೖದಲ್ಲಿಯೂ ಉತ್ತಮ ಬೇಡಿಕೆ ಹೊಂದಿವೆ
ಕಾರವಾರ: ಪೆಟ್ರೋಲ್, ಡೀಸೆಲ್ ದರ ಏರಿಕೆಯಾದ ಬಳಿಕ ಅಗತ್ಯ ವಸ್ತುಗಳ ಜತೆಗೆ ವಾಹನ ಪ್ರಯಾಣ ಕೂಡ ದುಬಾರಿಯಾಗುತ್ತಿದೆ. ಆದರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ಮಾತ್ರ ಕಳೆದ ಮೂರು ವರ್ಷಗಳಿಂದ ಒಂದೇ ರೀತಿ ಇದ್ದು, ಕೋವಿಡ್ ಕಾಲದಲ್ಲಿ ಬಡವರ ಆಪತ್ಬಾಂಧವ ಎನಿಸಿದೆ.
ಸದ್ಯ ರಾಜ್ಯದಲ್ಲಿ ಯಾವುದೇ ಪ್ರಯಾಣ ಇಷ್ಟೊಂದು ಕಡಿಮೆಯಾಗಿಲ್ಲ. ಒಂದು ಕಾಲದಲ್ಲಿ ಅತ್ಯಂತ ಅಗ್ಗದ ಪ್ರಯಾಣ ವಾಹನವಾಗಿದ್ದ ಬೈಕ್ ಕೂಡ ಈಗ ಬಸ್ ಪ್ರಯಾಣಕ್ಕಿಂತ ದುಬಾರಿಯಾಗಿದೆ. ಹಾಗಾಗಿ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳು ಈಗಿನ ಆರ್ಥಿಕ ಸಂಕಷ್ಟ ಸ್ಥಿತಿಯಲ್ಲಿ ಬಡವರಿಗೆ ಆಶಾಕಿರಣವಾಗಿ ಸೇವೆ ನೀಡುತ್ತಿದೆ. ಈ ಕಾರಣಕ್ಕೆ ಸಾರಿಗೆ ಬಸ್‌ಗಳ ಮೇಲಿನ ಜನರ ಆತ್ಮೀಯತೆಯೂ ಹೆಚ್ಚಾಗುತ್ತಿದೆ.
ಕೋವಿಡ್ ಸೋಂಕು 2019ನೇ ವರ್ಷದಲ್ಲಿ ಪತ್ತೆಯಾಗಿದ್ದರೂ, ಭಾರತದಲ್ಲಿ 2020ರ ಮಾರ್ಚ್ ನಲ್ಲಿ ಕಾಣಿಸಿಕೊಂಡಿದೆ. ಅದಕ್ಕಿಂತ ಒಂದು ತಿಂಗಳು ಮೊದಲು ಅಂದರೆ, 26-2-2020 ರಲ್ಲಿ ಕೊನೆಯದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಅದರ ನಂತರ ಎಲ್ಲ ಸೇವೆ, ಸಾಮಗ್ರಿ ಬೆಲೆ ಏರಿಕೆಯಾದರೂ ಬಸ್ ಪ್ರಯಾಣ ದರ ಏರಿಕೆಯಾಗಿಲ್ಲ.
ಪ್ರತಿಭಟನೆ, ಧರಣಿ ಇನ್ಯಾವುದೇ ಹೋರಾಟ ಸಂದರ್ಭದಲ್ಲಿ ಕಲ್ಲೇಟು ತಿಂದು ಗಾಜು ಪುಡಿ ಮಾಡಿಸಿಕೊಂಡರು ಮಾರನೇ ದಿನವೇ ದುರಸ್ತಿಯಾಗಿ ಸೇವೆಗೆ ನಿಲ್ಲುವ ಬಸ್‌ಗಳ ಮಹತ್ವ ಕೊರೊನಾ ಬಳಿಕ ಮತ್ತಷ್ಟು ಹೆಚ್ಚಾಗುತ್ತಿದೆ. ಸಮಯ ಉಳಿಸಲು ಬೈಕ್ ಪ್ರಯಾಣ ಉಪಯುಕ್ತವಾದರೂ ದೂರದ ಊರುಗಳಿಗೆ ಹೋಗುವ, ದುಡಿಮೆ ಉಳಿಸಿಕೊಳ್ಳುವ ಜನರಿಗೆ ಸಾರಿಗೆ ಬಸ್‌ಗಳು ಆಶ್ರಯದಾತ ಎನ್ನುವಷ್ಟು ಆತ್ಮೀಯವಾಗುತ್ತಿವೆ.
ಮೂರು ವರ್ಷಗಳ ಹಿಂದೆ ಒಂದು ಲೀಟರ್‌ಪೆಟ್ರೋಲ್ ಬೆಲೆ 50 ರೂ. ಆಸು ಪಾಸಿನಲ್ಲಿತ್ತು. ಬೈಕ್ ಒಂದು ಲೀಟರ್‌ಗೆ ಗರಿಷ್ಠ 50 ಕಿ.ಮೀ. ಚಲಿಸಿದರೂ ಒಂದು ಕಿ.ಮೀ. ಪ್ರಯಾಣ ವೆಚ್ಚ 1 ರೂ. ಇತ್ತು. ಈಗ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಅದರಂತೆ ಬೈಕ್ ಪ್ರಯಾಣ ವೆಚ್ಚ ಒಂದು ಕಿ.ಮೀ.ಗೆ 2 ರೂ. ದಾಟಿದೆ. ಕೈ ಸುಡುವ ಪೆಟ್ರೋಲ್ ಚಿಂತೆ ಜತೆಗೆ ಹೆಚ್ಚು ಪ್ರಯಾಣಕ್ಕೂ ಯೋಚನೆ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಸಾರಿಗೆ ಬಸ್ ಪ್ರಯಾಣ ಕಳೆದೆರಡು ವರ್ಷಗಳಿಂದ ಇದ್ದಷ್ಟೆಯೇ ಇದೆ. ಈಗಲೂ ಬಸ್ ಪ್ರಯಾಣದಲ್ಲಿ ಒಂದು ಕಿ.ಮೀ. ವೆಚ್ಚ 1 ರೂ. ದಿಂದ 1.28 ಇದೆ. ಕಾರವಾರ- ಅಂಕೋಲಾ ಬಸ್ ನಿಲ್ದಾಣಗಳ ಮಧ್ಯೆ 38 ಕಿ.ಮೀ. ಇದೆ. ಬಸ್ ಟಿಕೆಟ್ ದರ 44 ರೂ. ಇದೆ. ಅಂದರೆ, ಒಂದು ಕಿ.ಮೀ ಪ್ರಯಾಣ ಬೆಲೆ 1.15 ರೂ. ಆಗುತ್ತದೆ. ಇದು ಕೇವಲ ಈ ಎರಡು ನಗರಗಳ ಬೆಲೆ ಅಷ್ಟೇ ಅಲ್ಲ. ಬಹುತೇಕ ಎಲ್ಲ ಮಾರ್ಗಗಳಲ್ಲಿಯೂ ಬಸ್ ಟಿಕೆಟ್ ಬೆಲೆ ಇದೇ ರೀತಿ ಇದೆ.
ಕೈ ಹಿಡಿಯುವ ಬಸ್
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಕರ್ನಾಟಕ ಅಷ್ಟೇ ಅಲ್ಲದೆ, ಗೋವಾ, ಮಹಾರಾಷ್ಟೖದಲ್ಲಿಯೂ ಉತ್ತಮ ಬೇಡಿಕೆ ಹೊಂದಿವೆ. ಗುಣಮಟ್ಟದ ವ್ಯವಸ್ಥೆಯನ್ನೂ ಹೊಂದಿರುವ ಕಾರಣಕ್ಕೆ ಸದ್ಯ ಲಭ್ಯ ಇರುವ ಸಾರಿಗೆ ಸೇವೆ ಸಾಕಷ್ಟು ಅನುಕೂಲ ಆಗುತ್ತಿದೆ. ಗ್ರಾಮೀಣ ಭಾಗದಲ್ಲಿ ಎಲ್ಲ ಕಡೆಗಳಲ್ಲಿ ಬಸ್ ಸಂಪರ್ಕ ಸರಿಯಾಗಿಲ್ಲ ಎನ್ನುವುದು ಬಿಟ್ಟರೆ, ಉಳಿದ ಕಡೆಗಳಲ್ಲಿ ಸಾರಿಗೆ ಬಸ್‌ಗಳು ಇತರ ಸಾರಿಗೆ ವಾಹನಗಳಿಂದ ಅಗ್ಗವಾಗಿದೆ.
ಇನ್ನೊಂದೆಡೆ ಕೊರೊನಾ ಬಂದ ಬಳಿಕ ಸಾರಿಗೆ ಬಸ್ ಗಳು ತೀರಾ ನಷ್ಟಕ್ಕೆ ಒಳಗಾಗಿವೆ. ಅದರ ಮಧ್ಯೆ ಗಡಿ ಭಾಗದಲ್ಲಿಮತ್ತು ಅನೇಕ ನಡೆದ ನಡೆದ ಪ್ರತಿಭಟನೆ, ಹೋರಾಟದಿಂದಲೂ ಬಸ್‌ಗಳು ಹಾನಿ ಅನುಭವಿಸಿವೆ. ಅಷ್ಟಾದರೂ ಸಾರಿಗೆ ಸೇವೆ ಜನರಿಗೆ ಕೈ ಗೆಟಕುವ ದರದಲ್ಲಿದೆ ಎನ್ನುವುದೇ ವಿಶೇಷ ಎಂದು ಪ್ರಯಾಣಿಕರು ಹರ್ಷ ವ್ಯಕ್ತಪಡಿಸುತ್ತಾರೆ.
ದೇಶದಲ್ಲಿ ಕೊರೊನಾ ಸೋಂಕು ಕಾಲಿಡುವುದಕ್ಕಿಂತ ಮೊದಲು ಬಸ್ ಪ್ರಯಾಣ ದರ ಪರಿಸ್ಕರಣೆ ಆಗಿತ್ತು. ಅದರ ನಂತರ ಮತ್ತೆ ಪರಿಷ್ಕರಣೆ ಆಗಿಲ್ಲ. ಸರಕಾರಿ ಸಾರಿಗೆ ಬಸ್‌ಗಳ ಪ್ರಯಾಣ ಈಗಲೂ ಅತ್ಯಂತ ಕಡಿಮೆಯದ್ದಾಗಿದೆ.
ಸುರೇಶ ನಾಯ್ಕ, ಡಿಟಿಒ, ಶಿರಸಿ ವಿಭಾಗ
Read more
[wpas_products keywords=”deal of the day sale today offer all”]