Karnataka news paper

ಚಿಂತಕರ ಚಾವಡಿ ಶ್ರೀಮಂತರ ಚಾವಡಿ ಆಗುತ್ತಿದೆ – ಕೆ.ಎಸ್ ಈಶ್ವರಪ್ಪ ಬೇಸರ


ಹೈಲೈಟ್ಸ್‌:

  • ಚಿಂತಕರ ಚಾವಡಿ ಇಂದು ಶ್ರೀಮಂತರ ಚಾವಡಿ ಆಗುತ್ತಿದೆ
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಬೇಸರ
  • ಎಲ್ಲ ರಾಜಕೀಯ ಪಕ್ಷದವರು ಚಿಂತನೆ ಮಾಡಿ ವಿಧಾನ ಪರಿಷತ್ ಬೇಕೋ ಬೇಡವೋ ಎಂಬ ನಿಟ್ಟಿನಲ್ಲಿ ಚರ್ಚೆ ಮಾಡಬೇಕು ಎಂದ ಈಶ್ವರಪ್ಪ

ಬೆಳಗಾವಿ: ಚಿಂತಕರ ಚಾವಡಿ ಶ್ರೀಮಂತರ ಚಾವಡಿ ಆಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ಸುವರ್ಣಸೌಧದಲ್ಲಿ ಮಂಗಳವಾರ ಮಾತನಾಡಿದ ಅವರು, ಎಲ್ಲ ರಾಜಕೀಯ ಪಕ್ಷದವರು ಚಿಂತನೆ ಮಾಡಿ ವಿಧಾನ ಪರಿಷತ್ ಬೇಕೋ ಬೇಡವೋ ಎಂಬ ನಿಟ್ಟಿನಲ್ಲಿ ಚರ್ಚೆ ಮಾಡಬೇಕು ಎಂದು ಅವರು ಹೇಳಿದರು.

ರಾಜಕಾರಣ ಬೇಕು ನಿಜ. ಆದರೆ ನನ್ನ ಜೀವನದಲ್ಲಿ ಇಂತಹ ಚುನಾವಣೆ ನೋಡಿಲ್ಲ. ಈ ಬಗ್ಗೆ ಚರ್ಚೆ ಆಗಬೇಕು. ಚುನಾವಣೆ ಆಯೋಗ ಸತ್ತಿದ್ಯೂ ಬದುಕಿದ್ಯೋ ಎಂಬ ಪರಿಸ್ಥಿತಿ ಬಂದಿದೆ ಎಂಬ ಚರ್ಚೆ ನಡೆಯುತ್ತಿದೆ ಎಂದರು.

Karnataka MLC Election Results Live: ಬೀದರ್‌ನಲ್ಲಿ ವಿಜಯದ ನಗೆ ಬೀರಿದ ಕಾಂಗ್ರೆಸ್‌; ರಿಸಲ್ಟ್ ಕುರಿತ ಕ್ಷಣಕ್ಷಣದ ಮಾಹಿತಿ ಇಲ್ಲಿದೆ
ಯಾವುದೇ ಚುನಾವಣೆಯೂ ಮುಂದಿನ ಚುನಾವಣೆಗೆ ದಿಕ್ಸೂಚಿ ಅಲ್ಲ. ಒಂದೊಂದು ಚುನಾವಣೆಗೆ ಒಂದೊಂದು ರೂಪ ಇರುತ್ತದೆ. ಪರಿಷತ್ ಚುನಾವಣೆ ಗಮನಿಸಿದಾಗ, ಪ್ರಜಾಪ್ರಭುತ್ವಕ್ಕೆ ಅಪಮಾನದ ರೀತಿಯಲ್ಲಿ ನಡೆದಿದೆ. ಅಭ್ಯರ್ಥಿಗಳು ಪಕ್ಷದ ವಿಚಾರ, ಸಾಧನೆ ಬಗ್ಗೆ ಹೇಳದೆ, ನೀನು ಎಷ್ಟು ದುಡ್ಡು ಕೊಡ್ತಿಯಾ? ನಾನು ಇಷ್ಟು ಕೊಡುತ್ತೇನೆ ಎನ್ನುತ್ತಾರೆ. ಇಷ್ಟು ಕೆಟ್ಟದಾಗಿ ನಡೆದ ಚುನಾವಣೆ ಪ್ರಜಾಪ್ರಭುತ್ವಕ್ಕೆ ಅಪಮಾನ ಎಂದರು.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಧಾನ ಪರಿಷತ್ ಇರಬೇಕೋ? ಬೇಡವೋ? ಎಂಬ ಬಗ್ಗೆ ಚರ್ಚೆ ಆಗಬೇಕು. ಎಲ್ಲ ರಾಜಕೀಯ ಪಕ್ಷಗಳು ಚರ್ಚೆ ಮಾಡಬೇಕು ಎಂದು ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

ಬೆಳಗಾವಿ ಅಧಿವೇಶನಕ್ಕೆ ಶಾಸಕರ ನಿರಾಸಕ್ತಿ, ಮೊದಲ ದಿನ ಕೇವಲ 80 ಶಾಸಕರಷ್ಟೇ ಹಾಜರ್!
ಮಂಗಳವಾರ ಮುಂಜಾನೆಯಿಂದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಫಲಿತಾಂಶ ಹೊರಬೀಳಲು ಆರಂಭವಾಗಿದೆ. ಕೊಡಗಿನಲ್ಲಿ ಬಿಜೆಪಿಯ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ. ಕನಿಷ್ಠ 15 ಸೀಟು ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. ವಿಧಾನ ಪರಿಷತ್‌ನಲ್ಲೂ ಕೂಡಾ ಪೂರ್ಣ ಬಹುಮತ ಗಳಿಸುವ ವಿಶ್ವಾಸ ಇದೆ ಎಂದರು.

ಬೆಳಗಾವಿ ಬಂದ್‌ಗೆ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಕರೆ ನೀಡಿರುವ ವಿಚಾರವಾಗಿ ಮಾತನಾಡಿ,ಮಹಾಜನ್ ವರದಿ ಬಂದ ಬಳಿಕವೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಜನ‌ ಇವರು. ಬಂದ್ ಕರೆಯನ್ನು ಬೆಳಗಾವಿಯ ಜನ‌ ತಿರಸ್ಕಾರ ಮಾಡಿದ್ದಾರೆ. ಜೀವಂತವಾಗಿ ಇದ್ದೇವೆ ಎಂದು ತೋರಿಸಿಕೊಳ್ಳಲು ಎಂಇಎಸ್ ಬಂದ್ ಕರೆ ಕೊಟ್ಟಿದೆ ಎಂದು ಲೇವಡಿ ಮಾಡಿದರು.



Read more