Karnataka news paper

ಅಮೆಜಾನ್‌ – ಅಂಬಾನಿ ಸ್ಪರ್ಧೆಯಲ್ಲಿ ಬಡವಾದ ಫ್ಯೂಚರ್‌ ಗ್ರೂಪ್‌, ಕಂಪನಿಗೆ ದಿವಾಳಿಯ ಆತಂಕ!


ಸಾಲದ ಕಂತು ಕಟ್ಟಲು ವಿಫಲವಾಗಿರುವ ಫ್ಯೂಚರ್‌ ಗ್ರೂಪ್‌, ಸುಸ್ತಿದಾರನಾಗುವುದನ್ನು ತಪ್ಪಿಸಲು ತಮಗೆ ಸಾಲ ನೀಡಿದವರ ವಿರುದ್ಧವೇ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದೆ. ಪಾಲುದಾರ ಅಮೆಜಾನ್‌ನೊಂದಿಗೆ ನಡೆಯುತ್ತಿರುವ ವಿವಾದವನ್ನು ಉಲ್ಲೇಖಿಸಿ ಸುಸ್ತಿದಾರನಾಗುವುದನ್ನು ತಪ್ಪಿಸಲು ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಮೂರು ಮೂಲಗಳು ಗುರುವಾರ ರಾಯಿಟರ್ಸ್‌ಗೆ ತಿಳಿಸಿವೆ.

ದೇಶದ ಎರಡನೇ ಅತಿದೊಡ್ಡ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾಗಿರುವ ಫ್ಯೂಚರ್ ಗ್ರೂಪ್‌ಗೆ, ಅಮೆಜಾನ್‌ನ ಕಾನೂನು ಸವಾಲುಗಳ ಕಾರಣದಿಂದಾಗಿ 3.4 ಬಿಲಿಯನ್ ಡಾಲರ್‌ ಮೌಲ್ಯದ ಚಿಲ್ಲರೆ ಆಸ್ತಿಯನ್ನು ರಿಲಯನ್ಸ್‌ ರಿಟೇಲ್‌ಗೆ ಮಾರಾಟ ಮಾಡಲು ಸಾಧ್ಯವಾಗಿಲ್ಲ. 2020ರಿಂದಲೂ ಈ ಮಾರಾಟ ಅರ್ಧದಲ್ಲೇ ಬಾಕಿಯಾಗಿದೆ. ಒಪ್ಪಂದದ ನಿಯಮಗಳನ್ನು ಫ್ಯೂಚರ್‌ ಗ್ರೂಪ್‌ ಉಲ್ಲಂಘಿಸಿದೆ ಎಂಬುದು ಅಮೆಜಾನ್‌ನ ವಾದವಾದರೆ, ಇದನ್ನು ಫ್ಯೂಚರ್‌ ಗ್ರೂಪ್‌ ನಿರಾಕರಿಸುತ್ತಲೇ ಬಂದಿದೆ.

ಅಮೆಜಾನ್‌ನೊಂದಿಗಿನ ವಿವಾದದಿಂದಾಗಿ ಕೆಲವು ಸಣ್ಣ ಮಳಿಗೆಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಕಾರಣ ಡಿಸೆಂಬರ್ 31 ರಂದು ತನ್ನ ಸಾಲದಾತರಿಗೆ ನೀಡಬೇಕಾಗಿದ್ದ 3,500 ಕೋಟಿ ರೂ. ($470 ಮಿಲಿಯನ್) ಪಾವತಿಸಲು ಸಾಧ್ಯವಾಗಿಲ್ಲ ಎಂದು ಫ್ಯೂಚರ್ ಗ್ರೂಪ್‌ ಈ ತಿಂಗಳು ಭಾರತೀಯ ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ಪರಿಸ್ಥಿತಿಯನ್ನು ಪರಿಹರಿಸಲು 30 ದಿನಗಳ ಗ್ರೇಸ್ ಅವಧಿಯನ್ನು ಬಳಸಲು ಅದು ಬಯಸಿದೆ.

ಅಮೆಜಾನ್‌ನ ತಕರಾರುಗಳನ್ನು ರದ್ದುಗೊಳಿಸಲು ಸಿಸಿಐ ಆದೇಶ ಬಳಸಲು ಮುಂದಾದ ಫ್ಯೂಚರ್‌ ಗ್ರೂಪ್‌
ಆದರೆ, ಕಾನೂನಿನಂತೆ ಫ್ಯೂಚರ್‌ ಗ್ರೂಪ್‌ನ ಖಾತೆಗಳನ್ನು ‘ನಿರ್ವಹಣೆಯಿಲ್ಲದ ಆಸ್ತಿ’ ಅಥವಾ ಎನ್‌ಪಿಎ ಎಂದು ವರ್ಗೀಕರಿ, ಸುಸ್ತಿದಾರ ಎಂದು ಬ್ಯಾಂಕುಗಳು ಘೋಷಿಸಲೇಬೇಕಿವೆ. ಒಂದೊಮ್ಮೆ ಸುಸ್ತಿದಾರ ಎಂದು ಘೋಷಣೆಯಾದರೆ ಕಂಪನಿಯ ಸಾಲದ ಹೊರೆಯು ಮತ್ತಷ್ಟು ಸಂಕೀರ್ಣಗೊಳ್ಳುತ್ತವೆ.

ಸಾಲದಾತರು ತಮ್ಮ ವಿರುದ್ಧ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಂತೆ ಹಾಗೂ ಸಣ್ಣ ಮಳಿಗೆಗಳನ್ನು ಮಾರಾಟ ಮಾಡಿ, ಸಾಲದ ಬಾಕಿಯನ್ನು ಪಾವತಿಸಲು ಹೆಚ್ಚಿನ ಸಮಯ ನೀಡುವಂತೆ ಇನ್ನು ಕೆಲವೇ ದಿನಗಳಲ್ಲಿ ಫ್ಯೂಚರ್‌ ಗ್ರೂಪ್‌ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ಫ್ಯೂಚರ್‌ನ 1,700 ಮಳಿಗೆಗಳಲ್ಲಿ ಸರಿ ಸುಮಾರು 900 ಸಣ್ಣ ಗಾತ್ರದ ಮಳಿಗೆಗಳಾಗಿವೆ. ಉಳಿದವು ದೊಡ್ಡ ಸ್ವರೂಪದ ಹೈಪರ್‌ಮಾರ್ಕೆಟ್‌ಗಳು ಮತ್ತು ಫ್ಯಾಷನ್ ಔಟ್‌ಲೆಟ್‌ಗಳಾಗಿವೆ.

ಇದಲ್ಲದೆ, 30 ದಿನಗಳ ರೆಗ್ಯುಲೇಟರಿ ಗ್ರೇಸ್ ಅವಧಿಯನ್ನು ವಿಸ್ತರಿಸುವಂತೆ ಆರ್‌ಬಿಐಗೆ ನಿರ್ದೇಶನ ನೀಡಿ ಎಂದೂ ಫ್ಯೂಚರ್ ಗ್ರೂಪ್‌ ನ್ಯಾಯಾಧೀಶರನ್ನು ಕೇಳುವ ಸಾಧ್ಯತೆಯಿದೆ. ಮತ್ತು ಸದ್ಯಕ್ಕೆ ಕಂಪನಿಯನ್ನು ಎನ್‌ಪಿಎ ಎಂದು ಘೋಷಿಸದಂತೆ ಬ್ಯಾಂಕ್‌ಗಳಿಗೆ ಮನವಿ ಮಾಡುವ ಸಾಧ್ಯತೆಯಿದೆ ಎಂದು ಮೂಲವೊಂದು ಹೇಳಿದೆ.

ಫ್ಯೂಚರ್ ಗ್ರೂಪ್‌ಗೆ ಸಾಲ ನೀಡಿರುವ ಬ್ಯಾಂಕ್‌ಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ಬ್ಯಾಂಕ್‌ಗಳಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಆರ್‌ಬಿಐ ಪ್ರತಿಕ್ರಿಯಿಸಿಲ್ಲ. ಫ್ಯೂಚರ್‌ ಗ್ರೂಪ್‌ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಂಪನಿಯ ಯೋಜನೆಗಳು ಫ್ಯೂಚರ್‌ ಗ್ರೂಪ್‌ನಲ್ಲಿರುವ ಸಂಕೀರ್ಣ ಹಣಕಾಸು ಪರಿಸ್ಥಿತಿಯನ್ನು ತೋರಿಸುತ್ತಿವೆ. ಒಂದೊಮ್ಮೆ ತನ್ನ ಫ್ಯೂಚರ್‌ ರಿಟೇಲ್‌ನ್ನು ರಿಲಯನ್ಸ್ ಇಂಡಸ್ಟ್ರೀಸ್‌ಗೆ ಮಾರಾಟ ಮಾಡಲು ಸಾಧ್ಯವಾಗದೇ ಇದ್ದಲ್ಲಿ ಕಂಪನಿ ದಿವಾಳಿಯಾಗಲಿದೆ ಮತ್ತು 27,000ಕ್ಕೂ ಹೆಚ್ಚು ಉದ್ಯೋಗಗಳು ತೊಂದರೆಗೆ ಸಿಲುಕಲಿವೆ ಎಂದು ಫ್ಯೂಚರ್‌ ಗ್ರೂಪ್‌ ಆತಂಕ ವ್ಯಕ್ತಪಡಿಸಿದೆ.

ಫ್ಯೂಚರ್‌ ಗ್ರೂಪ್‌ ಬಗ್ಗೆ ತಿಳಿದಿರುವ ಬ್ಯಾಂಕರ್‌ ಒಬ್ಬರು ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಲಯದ ಆದೇಶದ ಹೊರತಾಗಿ ಬ್ಯಾಂಕ್‌ಗಳಿಗೆ ಬೇರೆ ಆಯ್ಕೆಗಳಿಲ್ಲ. ಹಣ ಪಾವತಿಸದೇ ಇರುವುದರಿಂದ ಅವು ಮುಂದಿನ ಕ್ರಮವನ್ನು ತೆಗೆದುಕೊಳ್ಳಲೇಬೇಕಾಗುತ್ತದೆ ಎಂಬರ್ಥದ ಪ್ರತಿಕ್ರಿಯೆ ನೀಡಿದ್ದಾರೆ.

ಫ್ಯೂಚರ್‌ ಗ್ರೂಪ್‌ 2019ರ ಒಪ್ಪಂದದ ನಿಬಂಧನೆಗಳನ್ನು ಮುರಿದಿದೆ ಎಂದು ಅಮೆಜಾನ್‌ ವಾದಿಸುತ್ತಾ ಬಂದಿದೆ. ಆ ಸಂದರ್ಭದಲ್ಲಿ ಫ್ಯೂಚರ್‌ ಗ್ರೂಪ್‌ನ ಸಂಸ್ಥೆಯೊಂದರಲ್ಲಿ ಅಮೆಜಾನ್‌ 200 ಮಿಲಿಯನ್‌ ಡಾಲರ್‌ ಹಣ ಹೂಡಿಕೆ ಮಾಡಿತ್ತು. ಅಮೆಜಾನ್‌ನ ವಾದಕ್ಕೆ ಸಿಂಗಾಪುರ ನ್ಯಾಯಾಲಯ ಮತ್ತು ಭಾರತದ ನ್ಯಾಯಾಲಯಗಳಲ್ಲಿ ಗೆಲುವು ಸಿಕ್ಕಿದೆಯಾದರೂ, 2019ರ ಒಪ್ಪಂದವನ್ನೇ ಇದೀಗ ಭಾರತೀಯ ಸ್ಪರ್ಧಾತ್ಮಕ ಆಯೋಗ ರದ್ದುಗೊಳಿಸಿದ್ದು, ಈ ಹಗ್ಗಜಗ್ಗಾಟ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ.

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.



Read more

[wpas_products keywords=”deal of the day sale today offer all”]