Karnataka news paper

‘ಯಾಣ’ ಅಂತಾರಾಷ್ಟ್ರೀಯ ಮಟ್ಟದ ಸ್ಥಳ, ಆದಷ್ಟು ಬೇಗ ಅಲ್ಲಿ ರೂಪ್‌ವೇ ಆಗಬೇಕು: ನಟ ಅನಿರುದ್ಧ


ಹೈಲೈಟ್ಸ್‌:

  • ಮೇಘಾ ಶೆಟ್ಟಿ, ಅನಿರುದ್ಧ ನಟನೆಯ ‘ಜೊತೆ ಜೊತೆಯಲಿ’ ಧಾರಾವಾಹಿ
  • ‘ಜೊತೆ ಜೊತೆಯಲಿ’ ಧಾರಾವಾಹಿ ಶೂಟಿಂಗ್ ಯಾಣ, ಸವದತ್ತಿಯಲ್ಲಿ ನಡೆದಿದೆ
  • ಯಾಣದಲ್ಲಿ ಆದಷ್ಟು ಬೇಗ ರೂಪ್‌ವೇ ಆಗಬೇಕು, ಬೆಳಕಿನ ವ್ಯವಸ್ಥೆ ಆಗಬೇಕು: ನಟ ಅನಿರುದ್ಧ
  • ಯಾಣದಲ್ಲಿನ ಸ್ವಚ್ಛತೆ ಕಂಡು ಅನಿರುದ್ಧ ಮೆಚ್ಚುಗೆ

ನಟ ಅನಿರುದ್ಧ, ಮೇಘಾ ಶೆಟ್ಟಿ ಅಭಿನಯದ ‘ಜೊತೆ ಜೊತೆಯಲಿ’ ಧಾರಾವಾಹಿ ಚಿತ್ರೀಕರಣವು ಉತ್ತರ ಕನ್ನಡ ಜಿಲ್ಲೆಯ ಯಾಣ, ಸವದತ್ತಿ ಬಳಿ ನಡೆದಿದೆ. ಈಗಾಗಲೇ ಈ ಚಿತ್ರೀಕರಣದ ಎಪಿಸೋಡ್‌ಗಳು ಪ್ರಸಾರವಾಗುತ್ತಿದ್ದು, ಯಾಣದಲ್ಲಿ ನಡೆದ ಶೂಟಿಂಗ್ ಅನುಭವದ ಬಗ್ಗೆ ನಟ ಅನಿರುದ್ಧ ಅವರು ‘ವಿಜಯ ಕರ್ನಾಟಕ ವೆಬ್’ ಜೊತೆಗೆ ಹಂಚಿಕೊಂಡಿದ್ದಾರೆ.

ಅನಿರುದ್ಧ ಹೇಳಿದ್ದೇನು?

ಒಂದು ದಿನ ಕುಮಟಾದಲ್ಲಿ ಶೂಟಿಂಗ್ ಮಾಡಿದ್ದೇವೆ. ಕುಮಟಾದಲ್ಲಿ ಉಳಿದುಕೊಂಡು ಯಾಣದಲ್ಲಿ ಶೂಟಿಂಗ್ ಮಾಡಿದ್ದೇವೆ. 19 ವರ್ಷ ನಾನು ಧಾರಾವಾಡದಲ್ಲಿದ್ದರೂ ಕೂಡ ಯಾಣಕ್ಕೆ ಹೋಗಲು ಆಗಿರಲಿಲ್ಲ. ಚಿಕ್ಕ ವಯಸ್ಸಿನಿಂದಲೂ ಯಾಣ ಬಗ್ಗೆ ಕೇಳಿದ್ದರೂ ಯಾಣಕ್ಕೆ ಹೋಗಲು ಆಗಿರಲಿಲ್ಲ. ನಮ್ಮ ಕರ್ನಾಟಕದಲ್ಲಿ ಇರುವ ಅದ್ಭುತವಾದ ಜಾಗ, ಹೆಮ್ಮೆ ಪಡುವಂತಹ ಸ್ಥಳ. ಅಲ್ಲಿನ ಜನತೆ ನಮಗೆ ತುಂಬ ಪ್ರೀತಿ ಕೊಟ್ಟಿದೆ, ನಮ್ಮನ್ನು ಅಲ್ಲಿನ ಜನರು ಭೇಟಿ ಮಾಡಿ ಫೋಟೋ ತೆಗೆಸಿಕೊಂಡರು, ಏನೂ ಸ್ವಾರ್ಥವಿಲ್ಲದೆ ನಮಗೆ ಪ್ರೀತಿ, ಅಭಿಮಾನ ತೋರಿಸಿದ್ದಾರೆ. ನಾನು ರಸ್ತೆಯಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ಒಬ್ಬರು ಅವರ ಮನೆಯಿಂದ ಟೀ ಮಾಡಿಕೊಂಡು ಬಂದು ಕೊಟ್ಟರು.

ಮಕ್ಕಳ ಜೊತೆಗೆ ವೈಷ್ಣೋ ದೇವಿ ದರ್ಶನ ಪಡೆದ ‘ಜೊತೆ ಜೊತೆಯಲಿ’ ಖ್ಯಾತಿಯ ನಟ ಅನಿರುದ್ಧ

ಶೂಟಿಂಗ್ ಮಾಡುವಾಗ ಮಳೆಯೇ ಬಂದಿರಲಿಲ್ಲ. ಯಾಣಕ್ಕೆ 300ಕ್ಕೂ ಅಧಿಕ ಮೆಟ್ಟಿಲು ಹತ್ತಿ ಹೋದೆವು. ಅಲ್ಲಿನ ಪೊಲೀಸರು ರೂಪ್‌ವೇ ಮಾಡುವ ಹಂತದಲ್ಲಿದೆ ಅಂತ ಹೇಳಿದರು. ಈಗಾಗಲೇ ಈ ಕಾರ್ಯ ಅನುಷ್ಠಾನದಲ್ಲಿದ್ದರೆ ಆದಷ್ಟು ಬೇಗ ಕೆಲಸ ಮಾಡಿ ಅಂತ ನಾನು ಈ ಮೂಲಕ ಕೇಳಿಕೊಳ್ಳುವೆ. ಏಕೆಂದರೆ ಯಾಣ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸ್ಥಳ. ನಾವು ವಾಪಾಸ್ ಬರುವಾಗ ವಿದ್ಯುತ್ ಇರಲಿಲ್ಲ, ಆಗಲು ಬ್ಯಾಟರಿ ಬಳಸಿ ಬಂದೆವು. ಸೋಲಾರ್ ಬಳಸಿ ಅಲ್ಲಿನ ಬೆಳಕಿನ ವ್ಯವಸ್ಥೆ ಮಾಡೋದು ಉತ್ತಮ, ಇಲ್ಲದಿದ್ದರೆ ಕಷ್ಟ ಆಗತ್ತೆ. ಪ್ರವಾಸಿಗರು ಬಂದು ಹೋಗುವ ಸ್ಥಳವಾಗಿದ್ದರೂ ಕೂಡ ಸ್ವಚ್ಛತೆಯಿದೆ. ಅಲ್ಲಲ್ಲಿ ಕಸದ ಬುಟ್ಟಿ ಇಡಲಾಗಿದೆ, ಬೆಂಚ್ ಇಡಲಾಗಿದೆ, ಶೌಚಾಲಯ ವ್ಯವಸ್ಥೆ ಮಾಡಿರೋದು ಕಂಡು ಖುಷಿಯಾಯ್ತು. ಮಣ್ಣಿನ ರಸ್ತೆ ಇದ್ದು, ಸಾಧ್ಯವಾದರೆ ಇನ್ನಷ್ಟು ಸುಧಾರಣೆ ಮಾಡಬಹುದು.

ಆ ಪಾರ್ಟಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹೆಣ್ಣುಮಕ್ಕಳನ್ನು ಹೊಗಳಿದ್ರು: ಅನಿರುದ್ಧ

ನಾನು ನೋಡಿರುವ ಸ್ಥಳ ನೋಡಿದರೆ ಸ್ವಚ್ಛತೆ ಚೆನ್ನಾಗಿದೆ. ಕುಮಟಾದ ಬೀಚ್ ಬಳಿ ನಾವು ಉಳಿದುಕೊಂಡಿದ್ದೆವು, ಆದರೆ ಶೂಟಿಂಗ್ ಮಾಡಿರಲಿಲ್ಲ. ಸವದತ್ತಿಗೆ ಹೋದೆವು, ಆ ರಸ್ತೆ ತುಂಬ ಹಾಳಾಗಿದೆ, ಅದರ ಸುಧಾರಣೆ ಆಗಬೇಕು. ಸವದತ್ತಿ ದೇವಸ್ಥಾನದವರು ಶೂಟಿಂಗ್ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಅಲ್ಲಿನ ಸಿಬ್ಬಂದಿಗಳು, ಡಿಸಿಗೆ ಧನ್ಯವಾದ ತಿಳಿಸುವೆ. ಕುಮಟಾ ನಗರದಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ತುಂಬ ಜನ ಬಂದು ಫೋಟೋ ತೆಗೆಸಿಕೊಂಡರೂ ಕೂಡ ಚಿತ್ರೀಕರಣಕ್ಕೆ ಯಾವುದೇ ಸಮಸ್ಯೆ ಕೊಡಲಿಲ್ಲ. ಕುಮಟಾದಲ್ಲಿ ಕುಟುಂಬ – ಕುಟುಂಬವಾಗಿ ಜನ ಬಂದರೂ ಕೂಡ ಏನೂ ತೊಂದರೆ ಕೊಡದೆ ಪ್ರೀತಿಯಿಂದ ಮಾತನಾಡಿಸಿಕೊಂಡು ಫೋಟೋ ತೆಗೆಸಿಕೊಂಡು ಹೋದೆವು. ಈ ಎರಡು ದಿನಗಳ ಶೂಟಿಂಗ್ ನನಗೆ ತುಂಬ ಖುಷಿ ಪಟ್ಟಿದೆ.

ದೊಡ್ಡ ತಾರಾಗಣ
‘ಜೊತೆ ಜೊತೆಯಲಿ’ ಧಾರಾವಾಹಿಗೆ ಆರೂರು ಜಗದೀಶ್ ನಿರ್ದೇಶನ ಮಾಡುತ್ತಿದ್ದಾರೆ. ಆರಂಭದ ದಿನದಿಂದಲೂ ಈ ಸೀರಿಯಲ್ ಅದ್ದೂರಿಯಾಗಿ ಮೂಡಿ ಬರುತ್ತಿದೆ. ವಿಜಯಲಕ್ಷ್ಮೀ ಸಿಂಗ್, ವೆಂಕಟೇಶ್, ಶಿವಾಜಿ ಜಾಧವ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಈ ಧಾರಾವಾಹಿ ಮೂಲಕ ನಟ ಅನಿರುದ್ಧ ಅವರು ಕನ್ನಡ ಕಿರುತೆರೆಗೆ ಇನ್ನಷ್ಟು ಹತ್ತಿರ ಆಗಿದ್ದಾರೆ.



Read more