Karnataka news paper

ತಂದೆಯ ವಿಲ್ ಇಲ್ಲದ ಸ್ವಯಾರ್ಜಿತ ಆಸ್ತಿ ಹಕ್ಕು ಮಗಳಿಗೆ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು


ಹೈಲೈಟ್ಸ್‌:

  • ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು
  • ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್
  • ವಿಲ್ ಇಲ್ಲದೆ ಮೃತಪಟ್ಟ ತಂದೆಯ ಆಸ್ತಿ ಮೇಲೆ ಹೆಣ್ಣುಮಗಳಿಗೆ ಅಧಿಕಾರ
  • ಅವಿಭಕ್ತ ಕುಟುಂಬವಿದ್ದರೂ ಆ ಆಸ್ತಿ ಹಕ್ಕು ಸಹೋದರರ ಮಕ್ಕಳಿಗೆ ಸಿಗುವುದಿಲ್ಲ

ಹೊಸದಿಲ್ಲಿ: ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಆದ್ಯತೆ ನೀಡುವ ಮಹತ್ವದ ತೀರ್ಪೊಂದನ್ನು ಸುಪ್ರೀಂಕೋರ್ಟ್ ಗುರುವಾರ ನೀಡಿದೆ. ಉಯಿಲನ್ನು (Will) ಬರೆದಿಡದೆ ಸಾಯುವ ಹಿಂದೂ ವ್ಯಕ್ತಿಯ ಸ್ವಯಾರ್ಜಿತ ಹಾಗೂ ವಿಭಜನೆಯಿಂದ ಬಂದ ಆಸ್ತಿಗಳು ಹೆಣ್ಣುಮಕ್ಕಳಿಗೆ ಆನುವಂಶಿಕವಾಗಿ ಸಿಗಬೇಕಾಗುತ್ತದೆ ಮತ್ತು ಅವರು ಕುಟುಂಬದ ಇತರೆ ಸದಸ್ಯರಿಗಿಂತ ಆದ್ಯತೆ ಪಡೆಯಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಹಿಂದೂ ಉತ್ತರಾಧಿಕಾರ ಕಾಯ್ದೆ ಅಡಿ ಹಿಂದೂ ಮಹಿಳೆಯರು ಹಾಗೂ ವಿಧವೆಯರ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಮನವಿಯ ವಿಚಾರಣೆ ಸಂದರ್ಭದಲ್ಲಿ ಈ ತೀರ್ಪು ಪ್ರಕಟಿಸಲಾಗಿದೆ.
ಮಾವನ ಆಸ್ತಿ ಮೇಲೆ ಅಳಿಯನಿಗೆ ಹಕ್ಕಿದೆಯೇ? ಕೇರಳ ಹೈಕೋರ್ಟ್​ ತೀರ್ಪು ಹೀಗಿದೆ!
‘ಹಿಂದೂ ಪುರುಷ ಉಯಿಲು ಬರೆದಿಡದೆ ಮೃತಪಟ್ಟರೆ, ಅವರ ಸ್ವಯಾರ್ಜಿತ ಆಸ್ತಿ ಅಥವಾ ಜಂಟಿ ಮಾಲೀಕತ್ವ ಅಥವಾ ಕೌಟುಂಬಿಕ ಆಸ್ತಿಯ ವಿಭಜನೆಯಿಂದ ಪಡೆದುಕೊಂಡ ಆಸ್ತಿಯನ್ನು ಹಾಗೆಯೇ ವಂಶಪಾರಂಪರ್ಯವಾಗಿ ಹಂಚಿಕೆ ಮಾಡಲಾಗುತ್ತದೆಯೇ ವಿನಾ, ಉಳಿಯುವಿಕೆಯ ಆಧಾರದಲ್ಲಿ ಅಲ್ಲ. ಅಂತಹ ಹಿಂದೂ ಪುರುಷರ ಹೆಣ್ಣುಮಕ್ಕಳು ಕುಟುಂಬದ ಇತರೆ ಸದಸ್ಯರಿಗಿಂತ (ಮೃತ ತಂದೆಯ ಸಹೋದರರ ಗಂಡುಮಕ್ಕಳು ಅಥವಾ ಹೆಣ್ಣುಮಕ್ಕಳು) ಆ ಆಸ್ತಿಯನ್ನು ಆನುವಂಶಿಕವಾಗಿ ಪಡೆದುಕೊಳ್ಳಲು ಅರ್ಹತೆ ಪಡೆದಿರುತ್ತಾರೆ’ ಎಂದು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ ತೀರ್ಪು ನೀಡಿದೆ.

ತನ್ನ ತಂದೆಯ ಸ್ವಯಾರ್ಜಿತ ಆಸ್ತಿಗೆ ಬೇರೆ ಯಾವುದೇ ವಾರಸುದಾರರು ಇಲ್ಲದ ಕಾರಣ ಅದರ ಮೇಲಿನ ಹಕ್ಕು ಪಡೆದುಕೊಳ್ಳುವ ಪ್ರಯತ್ನದಲ್ಲಿ ಹೆಣ್ಣುಮಗಳು ಎದುರಿಸುತ್ತಿದ್ದ ಕಾನೂನು ತೊಡಕಿನ ಪ್ರಕರಣವನ್ನು ನ್ಯಾಯಪೀಠ ವಿಚಾರಣೆ ನಡೆಸಿದೆ.

ವಿಲ್ ಇಲ್ಲದೆ ಮೃತಪಟ್ಟ ತಂದೆಯ ಆಸ್ತಿಯು ಅವರ ಹೆಣ್ಣುಮಗಳಿಗೆ ವಂಶಪಾರಂಪರ್ಯವಾಗಿ ಹೋಗುತ್ತದೆಯೇ ಅಥವಾ ಉಳಿದಿರುವ ತಂದೆಯ ಸಹೋದರನ ಮಗನಿಗೆ ಹಂಚಿಕೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ನ್ಯಾಯಪೀಠ 51 ಪುಟಗಳ ತೀರ್ಪು ನೀಡಿದೆ.
ಮಕ್ಕಳಿಂದಲೇ ಮೋಸ ಹೋದ ತಾಯಿಗೆ ಕಾನೂನಿನ ಆಸರೆ..! ವೃದ್ಧೆಯ ಆಸ್ತಿ ವಾಪಸ್..!
‘ಉಯಿಲು ಬರೆಯದೆ ಮೃತಪಟ್ಟ ಹಿಂದೂ ಪುರುಷನ ಸ್ವಯಾರ್ಜಿತ ಆಸ್ತಿ ಅಥವಾ ಜಂಟಿ ಮಾಲೀಕತ್ವದ ಹಂಚಿಕೆಯ ವೇಳೆ ಪಡೆದ ಪಾಲಿನ ಮೇಲಿನ ವಿಧವೆ ಅಥವಾ ಹೆಣ್ಣುಮಗಳ ಹಕ್ಕನ್ನು ಹಳೆಯ ಸಾಂಪ್ರದಾಯಿಕ ಹಿಂದೂ ಕಾನೂನಿನ ಅಡಿಯಲ್ಲಿ ಮಾತ್ರವಲ್ಲದೆ, ವಿವಿಧ ನ್ಯಾಯಾಂಗ ತೀರ್ಪುಗಳ ಆಧಾರದಲ್ಲಿ ಪರಿಗಣಿಸಲಾಗಿದೆ’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಹಿಂದೂ ಮಹಿಳೆ ಯಾವುದೇ ಉಯಿಲು ಇಲ್ಲದೆ ಮೃತಪಟ್ಟರೆ, ಆಕೆ ತನ್ನ ತಂದೆ ಅಥವಾ ತಾಯಿಯಿಂದ ವಂಶಪಾರಂಪರ್ಯವಾಗಿ ಪಡೆದ ಆಸ್ತಿಯು ಆಕೆಯ ತಂದೆಯ ಉತ್ತರಾಧಿಕಾರಿಗಳಿಗೆ ಹೋಗುತ್ತದೆ. ಹಾಗೆಯೇ ಆಕೆಯ ಗಂಡ ಅಥವಾ ಮಾವನ ಕಡೆಯಿಂದ ಬಂದ ಆಸ್ತಿಯು ಗಂಡನ ಉತ್ತರಾಧಿಕಾರಿಗಳಿಗೆ ಸೇರುತ್ತದೆ ಎಂದು ಕೋರ್ಟ್ ಹೇಳಿದೆ.

ಕುಟುಂಬವು ಅವಿಭಕ್ತವಾಗಿದ್ದರೂ, ತಂದೆ ಉಯಿಲು ಬರೆದಿಡದೆ ಮೃತಪಟ್ಟಾಗ ಅವರ ಸ್ವಯಾರ್ಜಿತ ಆಸ್ತಿಯ ಹಕ್ಕು, ಆ ವ್ಯಕ್ತಿಯ ವಂಶಸ್ಥೆಯಾಗಿರುವ ಮಗಳಿಗೆ ಸಿಗುತ್ತದೆಯೇ ಹೊರತು ಅವರ ಸಹೋದರರ ಮಕ್ಕಳಿಗೆ ಹಂಚಿಕೆಯಾಗುವುದಿಲ್ಲ ಎನ್ನುವ ಮೂಲಕ ಸುಪ್ರೀಂಕೋರ್ಟ್, ಮದ್ರಾಸ್ ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ವಜಾಗೊಳಿಸಿದೆ.



Read more

[wpas_products keywords=”deal of the day sale today offer all”]