ಹೈಲೈಟ್ಸ್:
- ಕರೀನಾ ಕಪೂರ್ ಹಾಗೂ ಅಮೃತಾ ಅರೋರಾಗೆ ಕೊರೊನಾ ವೈರಸ್ ಸೋಂಕು
- ಪಾರ್ಟಿಯಲ್ಲಿ ಭಾಗವಹಿಸಿದ್ದ ಸೀಮಾ, ಮಹೀಪ್ ಕಪೂರ್‌ಗೂ ಕೋವಿಡ್-19 ಪಾಸಿಟಿವ್
- ಕರೀನಾ ಕಪೂರ್, ಕರಣ್ ಜೋಹರ್ ಮನೆಯನ್ನ ಸೀಲ್‌ಡೌನ್ ಮಾಡಿದ ಬಿಎಂಸಿ
ವರದಿಗಳ ಪ್ರಕಾರ, ‘ಕಭೀ ಖುಷಿ ಕಭೀ ಘಮ್’ ಸಿನಿಮಾ ಬಿಡುಗಡೆಯಾಗಿ 20 ವರ್ಷಗಳು ತುಂಬಿದ ಸಂಭ್ರಮವನ್ನು ಆಚರಿಸಲು ತಮ್ಮ ಮನೆಯ ಗೆಟ್-ಟು-ಗೆದರ್ ಪಾರ್ಟಿಯನ್ನ ಫಿಲ್ಮ್ ಮೇಕರ್ ಕರಣ್ ಜೋಹರ್ ಆಯೋಜಿಸಿದ್ದರು. ಈ ಗೆಟ್-ಟು-ಗೆದರ್ ಪಾರ್ಟಿಯಲ್ಲಿ ಅರ್ಜುನ್ ಕಪೂರ್ (Arjun Kapoor), ಮಲೈಕಾ ಅರೋರಾ (Malaika Arora), ಆಲಿಯಾ ಭಟ್ (Alia Bhatt), ಕರೀನಾ ಕಪೂರ್ ಖಾನ್ (Kareena Kapoor Khan), ಕರೀಷ್ಮಾ ಕಪೂರ್ (Karishma Kapoor), ಅಮೃತಾ ಅರೋರಾ (Amrita Arora), ಸೀಮಾ (Seema), ಮಹೀಪ್ ಕಪೂರ್ (Maheep Kapoor) ಭಾಗವಹಿಸಿದ್ದರು.
ಪಾರ್ಟಿಯಲ್ಲಿ ಭಾಗವಹಿಸಿದ ಬಳಿಕ ಕರೀನಾ ಕಪೂರ್ ಖಾನ್ ಹಾಗೂ ಅಮೃತಾ ಅರೋರಾ ಅವರಿಗೆ ಕೊರೊನಾ ವೈರಸ್ ಸೋಂಕು (Covid 19 positive) ತಗುಲಿದೆ. ಇದೀಗ ಪಾರ್ಟಿಯಲ್ಲಿ ಭಾಗವಹಿಸಿದ ಸೀಮಾ ಹಾಗೂ ಮಹೀಪ್ ಕಪೂರ್ ಅವರಿಗೂ ಕೊರೊನಾ ವೈರಸ್ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ.
ಹೌದು, ನಟ ಸಂಜಯ್ ಕಪೂರ್ ಪತ್ನಿ ಮಹೀಪ್ ಕಪೂರ್ ಅವರಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಹಾಗಂತ ಸ್ವತಃ ನಟ ಸಂಜಯ್ ಕಪೂರ್ ಖಚಿತ ಪಡಿಸಿದ್ದಾರೆ. ‘’ಮಹೀಪ್ ಕಪೂರ್‌ಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಅವರನ್ನು ಐಸೊಲೇಟ್ ಮಾಡಲಾಗಿದೆ. ತೀವ್ರ ರೋಗ ಲಕ್ಷಣಗಳು ಕಂಡುಬಂದಿಲ್ಲ. ಮಹೀಪ್ ಕಪೂರ್ ಅವರ ಆರೋಗ್ಯ ಸ್ಥಿರವಾಗಿದೆ’’ ಅಂತ ಪತಿ ಸಂಜಯ್ ಕಪೂರ್ ತಿಳಿಸಿದ್ದಾರೆ.
ಹಾಗ್ನೋಡಿದ್ರೆ, ಪಾರ್ಟಿಯಲ್ಲಿ ಭಾಗವಹಿಸಿದ ಬಳಿಕ ಮೊದಲು ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು ಸೀಮಾ ಅವರಿಗೆ. ಕೂಡಲೆ ಅವರು ಕೋವಿಡ್ ಪರೀಕ್ಷೆಗೆ ಒಳಗಾದರು. ಡಿಸೆಂಬರ್ 11 ರಂದು ಬಂದ ವರದಿಯಲ್ಲಿ ಸೀಮಾ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಇದಾದ ಬಳಿಕ ಕರೀನಾ ಕಪೂರ್ ಖಾನ್ ಹಾಗೂ ಅಮೃತಾ ಅರೋರಾ ಕೂಡ ಕೋವಿಡ್ ಪರೀಕ್ಷೆಗೆ ಒಳಗಾದರು. ಅವರ ವರದಿಯಲ್ಲಿಯೂ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಇದೀಗ, ಪಾರ್ಟಿಯಲ್ಲಿ ಭಾಗವಹಿಸಿದ ಎಲ್ಲಾ ಸೆಲೆಬ್ರಿಟಿಗಳಿಗೂ ಆತಂಕ ಹೆಚ್ಚಾಗಿದೆ. ಪಾರ್ಟಿ ಹೋಸ್ಟ್ ಮಾಡಿದ್ದ ಕರಣ್ ಜೋಹರ್ ಹಾಗೂ ಕುಟುಂಬಕ್ಕೂ ಕೊರೊನಾ ಭೀತಿ ಎದುರಾಗಿದೆ.
ಸ್ಯಾನಿಟೈಸೇಷನ್ ಪ್ರಕ್ರಿಯೆ
ಒಮಿಕ್ರಾನ್ ಭೀತಿ ಇರುವುದರಿಂದ ಮುಂಬೈನಲ್ಲಿ ಬಿಎಂಸಿ ಕಟ್ಟೆಚ್ಚರ ವಹಿಸುತ್ತಿದೆ. ಈಗಾಗಲೇ ಕರಣ್ ಜೋಹರ್, ಕರೀನಾ ಕಪೂರ್ ಖಾನ್ ಮನೆಯನ್ನು ಬಿಎಂಸಿ ಸ್ಯಾನಿಟೈಸೇಷನ್ ಮಾಡಿದೆ. ಕರೀನಾ ಕಪೂರ್ ಖಾನ್ ಹಾಗೂ ಅಮೃತಾ ಅರೋರಾ ಮನೆಯನ್ನು ಬಿಎಂಸಿ ಸೀಲ್ ಡೌನ್ ಮಾಡಿದೆ. ಪಾರ್ಟಿಯಲ್ಲಿ ಭಾಗವಹಿಸಿದ ಎಲ್ಲರೂ ಹಾಗೂ ಅವರವರ ಸಂಪರ್ಕದಲ್ಲಿದ್ದವರನ್ನು ಕೋವಿಡ್-19 ಪರೀಕ್ಷೆಗೆ ಬಿಎಂಸಿ ಒಳಪಡಿಸಿದೆ. ಸೋಂಕು ವ್ಯಾಪಿಸದಂತೆ ಸಕಲ ಕ್ರಮಗಳನ್ನು ಬಿಎಂಸಿ ಕೈಗೊಂಡಿದೆ.