ಬೆಂಗಳೂರು: ರಾಜ್ಯದ ಪದವಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಗೆ ಬಲವಂತ ಮಾಡಬಾರದು. ಅವರ ಇಚ್ಛೆಯ ಭಾಷೆ ಕಲಿಯಲು ಅವಕಾಶ ನೀಡಬೇಕೆಂದು ನೀಡಿರುವ ಮಧ್ಯಂತರ ಆದೇಶಗಳನ್ನು ವಿವಿಗಳು ಪಾಲನೆ ಮಾಡುತ್ತಿಲ್ಲ ಎಂದು ಅರ್ಜಿದಾರರು ಹೈಕೋರ್ಟ್‌ನಲ್ಲಿ ಗುರುವಾರ ಆರೋಪಿಸಿದರು.
ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯದ ಆದೇಶ ಪ್ರಶ್ನಿಸಿದ ಸಂಸ್ಕೃತ ಭಾರತಿ ಟ್ರಸ್ಟ್ ಮಹಾ ವಿದ್ಯಾಲಯ, ಸಂಸ್ಕೃತ ಪ್ರಾಧ್ಯಾಪಕರ ಸಂಘ ಹಾಗೂ ಮತ್ತಿತರ ಸಂಘಟನೆಗಳು, ಸಂಸ್ಕೃತ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದವು. ಸಂಸ್ಕೃತ ಭಾರತಿ ಟ್ರಸ್ಟ್ ಪರ ಹಿರಿಯ ವಕೀಲ ಎಸ್. ಎಸ್. ನಾಗಾನಂದ್, ‘ವಿದ್ಯಾರ್ಥಿಗಳು ತಮ್ಮ ಇಚ್ಛೆಯ ಭಾಷೆಯನ್ನು ಕಲಿಯುವುದಕ್ಕೆ ನಿರ್ಬಂಧ ವಿಧಿಸಬಾರದು ಎಂದು ಹೈಕೋರ್ಟ್ ಈ ಹಿಂದೆ ನಿರ್ದೇಶನ ನೀಡಿದೆ. ಅದರಂತೆ, ಈ ಆದೇಶದ ಕುರಿತು ಸರಕಾರವು ವಿಶ್ವ ವಿದ್ಯಾಲಯಗಳಿಗೆ ಮಾಹಿತಿ ನೀಡಬೇಕಿತ್ತು. ಆದರೆ, ಸರಕಾರ ನಮಗೆ ಮಾಹಿತಿ ನೀಡಿಲ್ಲ ಎಂದು ವಿಶ್ವ ವಿದ್ಯಾಲಯಗಳಿಗೆ ಸೇರಿದ ಕಾಲೇಜುಗಳು ಹೇಳುತ್ತಿವೆ. ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ’ ಎಂದು ವಿವರಿಸಿದರು. ಸಂಸ್ಕೃತ ವಿ.ವಿ.ಗೆ ₹359 ಕೋಟಿ ನೀಡುವ ಸರ್ಕಾರಕ್ಕೆ ಕನ್ನಡ ವಿ.ವಿ.ಗೆ ₹2 ಕೋಟಿ ನೀಡಲು ಹಣವಿಲ್ಲವೇ?; ಸಿಡಿದೆದ್ದ ಕನ್ನಡಿಗರು ವಿದ್ಯಾರ್ಥಿಗಳ ಪರ ವಾದಿಸಿದ ವಕೀಲ ಶ್ರೀಧರ್ ಪ್ರಭು, ‘ಪದವಿ ತರಗತಿಗಳ ಸೆಮಿಸ್ಟರ್ ಪರೀಕ್ಷೆಗಳು ಫೆಬ್ರವರಿ 15ರಿಂದ ಆರಂಭವಾಗಲಿವೆ. ಹೀಗಾಗಿ, ಅರ್ಜಿ ವಿಲೇವಾರಿ ಮಾಡಬೇಕು. ಆದಕ್ಕಾಗಿ ಶೀಘ್ರ ದಿನಾಂಕ ನಿಗದಿಪಡಿಸಬೇಕು’ ಎಂದು ಕೋರಿದರು. ವಿಜಯ ಕಾಲೇಜಿನ ಪರ ವಕೀಲ ಕೆ ಎಂ ಪ್ರಕಾಶ್, ಅರ್ಜಿಯಲ್ಲಿ ಮಧ್ಯ ಪ್ರವೇಶಕ್ಕೆ ಮನವಿ ಮಾಡಿ ಅರ್ಜಿ ಸಲ್ಲಿಸಲಾಗಿದ್ದು, ಅದನ್ನು ಪುರಸ್ಕರಿಸಬೇಕು’ ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ವಕೀಲ ನಾಗಾನಂದ್, ‘ಇದೊಂದು ಪ್ರಮುಖ ವಿಚಾರವಾಗಿದೆ. ಯಾರು ಮಧ್ಯಂತರ ಅರ್ಜಿ ಸಲ್ಲಿಸಿ, ಪಕ್ಷಗಾರರಾಗಲು ಬಯಸಿದ್ದಾರೋ ಅವರೆಲ್ಲರನ್ನೂ ಮಧ್ಯ ಪ್ರವೇಶಕಾರರನ್ನಾಗಿ ಪರಿಗಣಿಸಿ ವಾದ ಆಲಿಸಬೇಕು. ಇಲ್ಲವಾದರೆ ಇಡೀ ವಿಚಾರಣೆಯು ಹಾದಿ ತಪ್ಪುವ ಸಾಧ್ಯತೆಯಿದೆ’ ಎಂದು ತಿಳಿಸಿದರು.
ಬಳಿಕ ನ್ಯಾಯಪೀಠ, ಅರ್ಜಿ ಸಂಬಂಧ ಎಲ್ಲರ ವಾದ ಆಲಿಸಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನು ಜ.31ಕ್ಕೆ ಮುಂದೂಡಿತು.