Karnataka news paper

ಈ ವಾರ ವೀಕೆಂಡ್ ಕರ್ಫ್ಯೂ ಇರುತ್ತೋ ಇಲ್ವೋ..? ಹಲವರ ಅಪಸ್ವರದ ನಡುವೆ ಸಿಎಂ ನಿರ್ಧಾರಕ್ಕೆ ಕ್ಷಣಗಣನೆ..!


ಹೈಲೈಟ್ಸ್‌:

  • ಉದ್ಯಮ, ವ್ಯಾಪಾರ ವಲಯ ಮಾತ್ರವಲ್ಲ, ಬಿಜೆಪಿ ಸಚಿವರು, ನಾಯಕರಿಂದಲೂ ಬೇಡಿಕೆ
  • ಶಾಲೆಗಳ ಮರು ಆರಂಭಕ್ಕೂ ಹೆಚ್ಚಿದ ಆಗ್ರಹ
  • ಸಿಎಂ ನೇತೃತ್ವದ ಸಭೆಯಲ್ಲಿ ಶುಕ್ರವಾರ ತೀರ್ಮಾನ

ಬೆಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ವೀಕೆಂಡ್‌ ಕರ್ಫ್ಯೂ ಮತ್ತು ನೈಟ್‌ ಕರ್ಫ್ಯೂವನ್ನು ಕೊನೆಗೊಳಿಸಬೇಕು ಎಂಬ ಒತ್ತಡ ಜೋರಾಗಿದೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದು ನಿಜವಾದರೂ ಸೋಂಕು ಅಪಾಯಕಾರಿಯಾಗಿಲ್ಲ. ಹೀಗಾಗಿ ನಿರ್ಬಂಧಗಳ ಹೆಸರಿನಲ್ಲಿ ಜನಜೀವನವನ್ನು ಸಂಕಷ್ಟದಲ್ಲಿ ಸಿಲುಕಿಸುವುದು, ಉದ್ಯಮಗಳು ನೆಲ ಕಚ್ಚುವಂತೆ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಎಲ್ಲ ಕಡೆಯಿಂದ ಕೇಳಿಬಂದಿದೆ. ಉದ್ಯಮ, ವ್ಯಾಪಾರ ವಲಯ ಮಾತ್ರವಲ್ಲ ಸಚಿವರೂ ಸೇರಿದಂತೆ ಬಿಜೆಪಿ ನಾಯಕರೇ ಕರ್ಫ್ಯೂ ರದ್ದತಿಗೆ ಒತ್ತಡ ಹಾಕುತ್ತಿದ್ದಾರೆ.

ಮೂರನೇ ಅಲೆ ಆರಂಭಗೊಂಡು ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನವರಿ 5 ರಿಂದ ರಾತ್ರಿ ಕರ್ಫ್ಯೂ ವಿಧಿಸಲಾಗಿತ್ತು. ಮುಂದಿನ ಎರಡು ವಾರ ವೀಕೆಂಡ್‌ ಕರ್ಫ್ಯೂ ನಡೆದಿದೆ. ಮೂರನೇ ಅಲೆಯನ್ನು ಎದುರಿಸಲು ಕರ್ಫ್ಯೂ ಅಗತ್ಯವಿಲ್ಲ ಎಂಬ ಅಭಿಪ್ರಾಯ ಬಲವಾಗುತ್ತಿದೆ. ಹೀಗಾಗಿ, ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸುವುದಕ್ಕಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ಶುಕ್ರವಾರ ನಡೆಯಲಿದೆ. ಇದರಲ್ಲಿ ವೀಕೆಂಡ್‌ ಕರ್ಫ್ಯೂ ಮುಂದುವರಿಸಬೇಕೇ ಬೇಡವೇ ಎಂಬುದು ನಿರ್ಧಾರವಾಗಲಿದೆ.

ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆಯುವ ಸಭೆಯಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಆರ್‌. ಅಶೋಕ್‌, ಡಾ. ಸಿ. ಎನ್‌. ಅಶ್ವತ್ಥ ನಾರಾಯಣ, ಬಿ. ಶ್ರೀರಾಮುಲು, ಡಾ. ಕೆ. ಸುಧಾಕರ್‌, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಸೇರಿದಂತೆ ಉನ್ನತ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ತಾಂತ್ರಿಕ ಸಲಹಾ ಸಮಿತಿಯ ವರದಿ, ನಾನಾ ವಲಯಗಳ ಪ್ರಮುಖರ ಒತ್ತಾಯ, ಸಾರ್ವಜನಿಕರ ನಿರೀಕ್ಷೆ, ಕೋವಿಡ್‌ ಸ್ಥಿತಿಗತಿ, ಆಸ್ಪತ್ರೆಗೆ ದಾಖಲಾತಿ – ಸಾವಿನ ಪ್ರಮಾಣ, ಕೇಂದ್ರ ಸರಕಾರದ ಮಾನದಂಡ ಸೇರಿದಂತೆ ಇತರೆ ಅಂಶಗಳನ್ನು ಪರಾಮರ್ಶಿಸಿ ಸಿಎಂ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಕೋವಿಡ್ ಲಕ್ಷಣ ಇದ್ದವರಿಗೆ ಆಂಟಿಜೆನ್‌ ಪರೀಕ್ಷೆಗೆ ಆರೋಗ್ಯ ಇಲಾಖೆ ಸೂಚನೆ: 7 ದಿನ ಕ್ವಾರಂಟೈನ್ ಕಡ್ಡಾಯ..
ಆಸ್ಪತ್ರೆ ದಾಖಲಾತಿ ಸಂಖ್ಯೆ ಕಡಿಮೆ

ರಾಜ್ಯದಲ್ಲಿ ಜನವರಿ 25ರ ಹೊತ್ತಿಗೆ ಕೋವಿಡ್‌ ಗರಿಷ್ಠಕ್ಕೆ ತಲುಪಿ ನಂತರ ಕ್ರಮೇಣ ಕ್ಷೀಣಿಸುವುದಾಗಿ ತಜ್ಞರು ವರದಿ ನೀಡಿದ್ದಾರೆ ಎಂದು ಸರಕಾರ ಈಗಾಗಲೇ ಹೇಳಿದೆ. ಕೋವಿಡ್‌ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಳಿತವಾಗುತ್ತಿದೆ. ಬೆಂಗಳೂರಿನಲ್ಲಿ ಇದೇ ರೀತಿಯ ಸ್ಥಿತಿಯಿದ್ದರೂ ಆಸ್ಪತ್ರೆಗಳಲ್ಲಿ ದಾಖಲೀಕರಣ ಕಡಿಮೆಯಿರುವುದು ಸರಕಾರಕ್ಕೆ ತುಸು ನಿರಾಳತೆ ಮೂಡಿಸಿದಂತಿದೆ.

ಸಿಎಂ ಮೇಲೆ ಎಲ್ಲ ಕಡೆಯಿಂದ ಒತ್ತಡ

ಸದ್ಯ ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣದಲ್ಲಿರುವಂತಹ ಸ್ಥಿತಿಯಿರುವುದರಿಂದ ವಾರಾಂತ್ಯ ಕರ್ಫ್ಯೂ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ. ಮುಖ್ಯವಾಗಿ ಹೋಟೆಲ್‌ ಉದ್ಯಮ ಸೇರಿದಂತೆ ಸಣ್ಣ – ಪುಟ್ಟ ವ್ಯಾಪಾರ – ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು, ಆಟೋ, ಟ್ಯಾಕ್ಸಿ, ಕ್ಯಾಬ್‌ ಚಾಲಕರು ಸೇರಿದಂತೆ ಇತರೆ ವರ್ಗದವರು ವಾರಾಂತ್ಯ ಕರ್ಫ್ಯೂ ವಿನಾಯಿತಿಗೆ ಒತ್ತಡ ಹೇರುತ್ತಿದ್ದಾರೆ.

ಸ್ವಪಕ್ಷೀಯರಿಂದಲೇ ಅಪಸ್ವರ: ಇದಕ್ಕೆ ಪೂರಕವೆಂಬಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಸಂಸದ ಪ್ರತಾಪ ಸಿಂಹ ಅವರು ಬಹಿರಂಗವಾಗಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲ ಸಚಿವರು, ಶಾಸಕರು ಸಹ ಇದೇ ರೀತಿಯ ಅಭಿಪ್ರಾಯವನ್ನು ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಕರ್ನಾಟಕ ರಾಜ್ಯಾದ್ಯಂತ ಗುರುವಾರ 47,754 ಕೊರೊನಾ ಹೊಸ ಕೇಸ್..! ಬೆಂಗಳೂರಲ್ಲೇ 30,540 ಪ್ರಕರಣ..!
ಶಾಲೆ ತೆರೆಯಲು ಸಿದ್ಧ ಎಂದ ಸಚಿವರು

ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಕೊರೊನಾ ಮಕ್ಕಳ ಮೇಲೆ ತೀವ್ರ ಪರಿಣಾಮಗಳನ್ನು ಉಂಟು ಮಾಡದೆ ಇರುವುದರಿಂದ ಇಂಥ ಕ್ರಮ ಅಗತ್ಯವಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಮಾತ್ರವಲ್ಲ, ಎಲ್ಲ ಕಡೆ ಶಾಲೆಗಳ ಮರು ಆರಂಭಕ್ಕೆ ಒತ್ತಡ ಬಂದಿದೆ. ಈ ನಡುವೆ, ಶುಕ್ರವಾರದ ಸಭೆಯಲ್ಲಿ ಅನುಮತಿ ಸಿಕ್ಕಿದರೆ ಬಂದ್‌ ಆಗಿರುವ ಶಾಲೆಗಳ ಮರು ಆರಂಭಕ್ಕೆ ಸಿದ್ಧ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್‌ ಹೇಳಿದ್ದಾರೆ.

‘ಶಾಲೆಯಿಂದ ಯಾವುದೇ ಮಕ್ಕಳಿಗೆ ಸೋಂಕು ಹರಡಿಲ್ಲ. ಬದಲಿಗೆ, ಕುಟುಂಬ ಸದಸ್ಯರು ಅಥವಾ ಸಮುದಾಯದಿಂದ ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿರುವುದು ತಿಳಿದು ಬಂದಿದೆ. ಆದ್ದರಿಂದ ಮಕ್ಕಳಿಗೆ ಶಾಲೆಗಳು ಹೆಚ್ಚು ಸುರಕ್ಷಿತ ಎಂಬುದು ನನ್ನ ಅಭಿಪ್ರಾಯವಾಗಿದೆ’ ಎಂದು ನಾಗೇಶ್‌ ಹೇಳಿದ್ದಾರೆ.

‘ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರುವ ವೀಕೆಂಡ್‌ ಹಾಗೂ ರಾತ್ರಿ ಕರ್ಫ್ಯೂ ಮುಂದುವರಿಕೆ ಅಗತ್ಯವಿಲ್ಲ. ಜನರಲ್ಲಿ ಜಾಗೃತಿ ಮೂಡಿದೆ. ಸರಕಾರ ಲಸಿಕೆ, ಚಿಕಿತ್ಸೆಗೆ ಗಮನ ಕೊಡಲಿ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಐ. ಎಸ್‌. ಪ್ರಸಾದ್‌ ತಿಳಿಸಿದ್ದಾರೆ.

‘ವಾರಾಂತ್ಯ ಕರ್ಫ್ಯೂ ಸಡಿಲಿಸಿ ಶೇ. 50ರಷ್ಟು ಗ್ರಾಹಕರೊಂದಿಗೆ ಹೋಟೆಲ್‌ ತೆರೆಯಲು ಅವಕಾಶ ನೀಡಿದರೆ ಆತಿಥ್ಯ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುವುದನ್ನು ತಡೆಯಬಹುದು’ ಎನ್ನುತ್ತಾರೆ, ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ. ಸಿ. ರಾವ್‌.

‘ಕರ್ಫ್ಯೂ ರದ್ದತಿಯಿಂದ ಮಾರುಕಟ್ಟೆ, ಮಾಲ್‌ಗಳಲ್ಲಿ ಜನದಟ್ಟಣೆ ತಪ್ಪಿಸಬಹುದು. ರಾತ್ರಿ 1 ಗಂಟೆಯವರೆಗೂ ಹೋಟೆಲ್‌ಗೆ ಅವಕಾಶ ಕೊಡಲಿ. ಇದರಿಂದ ಉದ್ಯೋಗ ಅವಕಾಶ ಹೆಚ್ಚಲಿವೆ’ ಎನ್ನುತ್ತಾರೆ, ಕೆಡ್ರಾಯ್‌ ಬೆಂಗಳೂರು ಅಧ್ಯಕ್ಷ ಭಾಸ್ಕರ್‌ ಟಿ. ನಾಗೇಂದ್ರಪ್ಪ.

ಅರ್ಧ ಲಕ್ಷದ ಸನಿಹ ಕೊರೊನಾ

ಗುರುವಾರ ರಾಜ್ಯದಲ್ಲಿ 47,754 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 29 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2.93 ಲಕ್ಷಕ್ಕೆ ತಲುಪಿದೆ.

ಜನರ ಜೀವ, ಜೀವನ ಎರಡೂ ಮುಖ್ಯ: ವೀಕೆಂಡ್ ಕರ್ಫ್ಯೂ ಬಗ್ಗೆ ಶುಕ್ರವಾರ ತೀರ್ಮಾನ: ಸಚಿವ ಆರ್‌. ಅಶೋಕ್‌



Read more

[wpas_products keywords=”deal of the day sale today offer all”]