ಹೈಲೈಟ್ಸ್:
- ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯಲ್ಲಿ ಘಟನೆ
- ಮಿರಾಮ್ ತರೊನ್ ಎಂಬ 17 ವರ್ಷದ ಬಾಲಕನ ಅಪಹರಣ
- ಅಪಹರಣದ ಬಗ್ಗೆ ಸಂಸದ ತಾಪಿರ್ ಗಾವೊ ಟ್ವಿಟ್ಟರ್‌ನಲ್ಲಿ ಮಾಹಿತಿ
- ಪ್ರಧಾನಿಯ ಮೌನವೇ ಅವರ ಹೇಳಿಕೆ- ರಾಹುಲ್ ಗಾಂಧಿ ವಾಗ್ದಾಳಿ
ಮಿರಾಮ್ ತರೊನ್ ಎಂಬ ಹೆಸರಿನ ಈ ತರುಣನನ್ನು ಮಂಗಳವಾರ ಸಿಯುಂಗ್ಲಾ ಪ್ರದೇಶದಲ್ಲಿನ ಲುಂಗ್ತಾ ಜೊರ್ ಎಂಬಲ್ಲಿಂದ ಪಿಎಲ್‌ಎ ಅಪಹರಿಸಿದೆ ಎಂದು ಅರುಣಾಚಲ ಪ್ರದೇಶ ಸಂಸದ ತಾಪಿರ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
‘ಚೀನಾದ ಪಿಎಲ್‌ಎ ಜಿಡೊ ಗ್ರಾಮದ ಮಿರಾಮ್ ತರೊನ್ ಎಂಬ 17 ವರ್ಷದ ಬಾಲಕನನ್ನು ಅಪಹರಣ ಮಾಡಿದೆ. ಜನವರಿ 18ರಂದು ಭಾರತದ ಭೂಪ್ರದೇಶದ ಒಳಗಿನ, ಅಪ್ಪರ್ ಸಿಯಾಂಗ್ ಜಿಲ್ಲೆಯ ಸಿಯುಂಗ್ಲಾ ಪ್ರದೇಶದ (ಬಿಶಿಂಗ್ ಗ್ರಾಮ) ಲುಂಗ್ತಾ ಜೊರ್ ಸ್ಥಳದಿಂದ (ಚೀನಾ 2018ರಲ್ಲಿ ಭಾರತದ ಒಳಗೆ 3-4 ಕಿಮೀ ರಸ್ತೆ ನಿರ್ಮಿಸಿದೆ) ಅಪಹರಿಸಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಪಹೃತ ಬಾಲಕನ ಚಿತ್ರವನ್ನು ಹಂಚಿಕೊಂಡು ಮತ್ತೊಂದು ಟ್ವೀಟ್ ಮಾಡಿರುವ ತಾಪಿರ್, ‘ಬಾಲಕನ ಶೀಘ್ರ ಬಿಡುಗಡೆಗೆ ಭಾರತ ಸರ್ಕಾರದ ಎಲ್ಲ ಸಂಸ್ಥೆಗಳೂ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ತರೊನ್‌ನ ಸ್ನೇಹಿತ ಜಾನಿ ಯೈಯಿಂಗ್, ಪಿಎಲ್‌ಎ ಸೈನಿಕರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ಅಪಹರಣ ಘಟನೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇಬ್ಬದೂ ಜಿಡೋ ಗ್ರಾಮದವರಾಗಿದ್ದು, ಸ್ಥಳೀಯ ಬೇಟೆಗಾರರಾಗಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ತ್ಸಾಂಗ್ಪೋ ನದಿ (ಚೀನಾ ಹೆಸರು) ಭಾರತಕ್ಕೆ ಪ್ರವೇಶಿಸುವ ಸ್ಥಳದಲ್ಲಿ ಈ ಘಟನೆ ನಡೆದಿದೆ ಎಂದು ಸಂಸದ ತಾಪಿರ್ ಹೇಳಿದ್ದಾರೆ. ತ್ಸಾಂಗ್ಪೋ ನದಿಗೆ ಅರುಣಾಚಲ ಪ್ರದೇಶದಲ್ಲಿ ಸಿಯಾಂಗ್ ನದಿ ಎಂದು ಕರೆಯಲಾಗುತ್ತದೆ. ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂಬ ಹೆಸರಿದೆ.
ಸೇನಾ ಪಡೆಗಳು ಹಾಟ್‌ಲೈನ್ ಮೂಲಕ ಚೀನಾ ಪಡೆಗಳನ್ನು ಸಂಪರ್ಕಿಸಿದ್ದು, ಶಿಷ್ಟಾಚಾರದ ಪ್ರಕಾರ ಆತನ ಸ್ಥಳದ ಮಾಹಿತಿ ನೀಡುವಂತೆ ಹಾಗೂ ಆತನನ್ನು ಮರಳಿಸಲು ಸಹಕರಿಸುವಂತೆ ಹೇಳಿದೆ. ಗಿಡಮೂಲಿಕೆಗಳನ್ನು ಸಂಗ್ರಹಿಸಲು ಮತ್ತು ಬೇಟೆಗಾಗಿ ತೆರಳಿದ್ದಾಗ ಬಾಲಕ ದಾರಿ ತಪ್ಪಿರುವುದಾಗಿ ಸೇನೆ ತಿಳಿಸಿದೆ.
ರಾಹುಲ್ ಗಾಂಧಿ ವಾಗ್ದಾಳಿ
ಚೀನಾ ಅತಿಕ್ರಮಣದ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಅವರನ್ನು ಟೀಕಿಸಿದ್ದಾರೆ.
‘ಗಣರಾಜ್ಯ ದಿನದ ಕೆಲವೇ ದಿನ ಮೊದಲು, ಭಾರತದ ಭವಿಷ್ಯವಾದ, ಬಾಲಕನನ್ನು ಚೀನಾ ಅಪಹರಣ ಮಾಡಿದೆ. ಮಿರಾಮ್ ತರೊನ್ ಕುಟುಂಬದ ಜತೆ ನಾವಿದ್ದೇವೆ ಮತ್ತು ನಮ್ಮ ಭರವಸೆಯನ್ನು ಬಿಡುವುದಿಲ್ಲ. ಸೋಲು ಒಪ್ಪಿಕೊಳ್ಳುವುದಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ‘ಪ್ರಧಾನಿ ಅವರ ಮೌನವೇ ಅವರ ಹೇಳಿಕೆ… ಅವರು ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
2020ರ ಸೆಪ್ಟೆಂಬರ್‌ನಲ್ಲಿ ಪಿಎಲ್‌ಎ ಅಪ್ಪರ್ ಸುಬಾನ್ಸಿರಿ ಜಿಲ್ಲೆಯಿಂದ ಐವರನ್ನು ಅಪಹರಣ ಮಾಡಿತ್ತು. ಭಾರತೀಯ ಸೇನೆ ಮಧ್ಯಪ್ರವೇಶ ಮಾಡಿದ ಬಳಿಕ, ಒಂದು ವಾರದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅದಕ್ಕೂ ಮುನ್ನ ಮಾರ್ಚ್‌ನಲ್ಲಿ 21 ವರ್ಷದ ಯುವಕನನ್ನು ಅದೇ ಸ್ಥಳದಲ್ಲಿ ಅಪಹರಿಸಿ, ಬಿಡುಗಡೆ ಮಾಡಲಾಗಿತ್ತು.
‘ನಮ್ಮ ದೇಶದೊಳಗೆ ಚೀನಾ ಅಕ್ರಮ ಸೇತುವೆ ನಿರ್ಮಿಸುತ್ತಿದೆ. ಪ್ರಧಾನಿಯ ಮೌನದ ಕಾರಣ ಚೀನಾದ ಉತ್ಸಾಹ ಹೆಚ್ಚುತ್ತಿದೆ. ಈಗ ಈ ಸೇತುವೆಯನ್ನು ಕೂಡ ಉದ್ಘಾಟನೆ ಮಾಡಲು ಪ್ರಧಾನಿಗೆ ತೆರಳಲು ಸಾಧ್ಯವಾಗದಿರಬಹುದು ಎಂಬುದು ಭಯ ಮೂಡಿಸಿದೆ’ ಎಂದು ರಾಹುಲ್ ಗಾಂಧಿ ಬುಧವಾರ ಟ್ವೀಟ್ ಮಾಡಿದ್ದರು.
ಪ್ಯಾಂಗಾಂಗ್ ತ್ಸೋ ಸರೋವರದ ಮೇಲೆ ಚೀನಾ ಸೇತುವೆ ನಿರ್ಮಿಸುತ್ತಿರುವುದು, ಅದು ಸುಮಾರು 60 ವರ್ಷಗಳಿಂದ ಅಕ್ರಮವಾಗಿ ಅತಿಕ್ರಮಿಸಿರುವ ಪ್ರದೇಶದಲ್ಲಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಂಗಳ ಆರಂಭದಲ್ಲಿ ಹೇಳಿತ್ತು.
Read more
[wpas_products keywords=”deal of the day sale today offer all”]