ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಅಸ್ವಾಭಾವಿಕವಾಗಿ ಸಾವನ್ನಪ್ಪಿದ ವಿಚಾರಣಾಧೀನ ಕೈದಿಗಳ ಅವಲಂಬಿತರಿಗೆ ಪರಿಹಾರ ನೀಡಿರುವ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಬುಧವಾರ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಹೈಕೋರ್ಟ್ 2017ರಲ್ಲಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ‘ವಿಚಾರಣಾಧೀನ ಕೈದಿಗಳು ಅಸ್ವಾಭಾವಿಕ ಸಾವನ್ನಪ್ಪಿದ್ದಲ್ಲಿ ಅವರ ಅವಲಂಬಿತರಿಗೆ ಪರಿಹಾರ ನೀಡಲಾಗುತ್ತಿದೆ. 2020ರ ನಂತರದ ಪ್ರಕರಣಗಳಲ್ಲಿ ಯಾರಿಗೆ ಎಷ್ಟು ಪರಿಹಾರ ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಎರಡು ವಾರ ಕಾಲಾವಕಾಶ ಬೇಕು’ ಎಂದು ಸರಕಾರಿ ವಕೀಲರು ಕೋರಿದರು. ಜನದಟ್ಟಣೆ ಸೇರುವ ಎಲ್ಲಾ ರೀತಿಯ ಕಾರ್ಯಕ್ರಮ ನಿಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ಇದನ್ನು ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆ. 8ಕ್ಕೆ ಮುಂದೂಡಿತು. 2020ರ ಜ.27ರಂದು ಹೈಕೋರ್ಟ್ ವಿಚಾರಣಾಧೀನ ಕೈದಿಗಳ ಅಸ್ವಾಭಾವಿಕ ಸಾವು ಪ್ರಕರಣಗಳಲ್ಲಿ ಅವಲಂಬಿತರಿಗೆ ಪರಿಹಾರ ನೀಡುವ ಸಂಬಂಧ ಜಿಲ್ಲಾಧಿಕಾರಿಗಳನ್ನು ಸಕ್ಷಮ ಪ್ರಾಧಿಕಾರವನ್ನಾಗಿ ನೇಮಿಸುವಂತೆ ಆದೇಶ ನೀಡಿತ್ತು. ಅದರಂತೆ, ಸರಕಾರ ಜಿಲ್ಲಾಧಿಕಾರಿಗಳನ್ನು ಸಕ್ಷಮ ಪ್ರಾಧಿಕಾರವನ್ನಾಗಿ ನೇಮಕ ಮಾಡಿದೆ. ಆಯಾ ಜಿಲ್ಲೆಗಳ ಕಾರಾಗೃಹಗಳಲ್ಲಿ ಸಂಭವಿಸಿದ ವಿಚಾರಣಾಧೀನ ಕೈದಿಗಳ ಅಸ್ವಾಭಾವಿಕ ಸಾವು ಪ್ರಕರಣಗಳಲ್ಲಿ ಪರಿಶೀಲಿಸಿ ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ 2012 ರ ಜ.1 ರಿಂದ 2019 ರ ಮೇ 31 ರವರೆಗೆ 60 ಅಸ್ವಾಭಾವಿಕ ಸಾವು ಪ್ರಕರಣಗಳಲ್ಲಿ ತಂದೆ- ತಾಯಿ, ಹೆಂಡತಿ, ಮಕ್ಕಳು, ಸಹೋದರರು ಮತ್ತಿತರ ಅವಲಂಬಿತರಿಗೆ 1.61 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು 2020ರ ಮಾ.13 ರಂದು ಹೈಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಸರಕಾರ ಮಾಹಿತಿ ನೀಡಿತ್ತು.