ಬೆಂಗಳೂರು: ನಾರಾಯಣ ಗುರುಗಳ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಜಾತಿ ವೈಷಮ್ಯ ಹುಟ್ಟು ಹಾಕುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಮತ್ತು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇರಳ ಕಳುಹಿಸಿದೆ ಎಂಬ ಕಾರಣಕ್ಕೆ ಕೇಂದ್ರ ತಿರಸ್ಕರಿಸಿಲ್ಲ. ನಾರಾಯಣ ಗುರುಗಳ ವಿಚಾರದಲ್ಲಿ ಪ್ರಧಾನಿ ಮತ್ತು ಬಿಜೆಪಿಗೆ ಅತಿ ಹೆಚ್ಚು ಗೌರವವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೋದಿಯವರು ಪ್ರಧಾನಿಯಾದ ಬಳಿಕ 2015 ರ ಡಿ.15 ರಂದು ನಾರಾಯಣ ಗುರುಗಳ ಸಂಕಲ್ಪ ಕೇಂದ್ರವಾದ ಶಿವಗಿರಿಗೆ ಭೇಟಿ ಕೊಟ್ಟಿದ್ದರು. ‘ಒಂದು ಕಾಲದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಕೇರಳದಲ್ಲಿ ಮೇಲು– ಕೀಳು, ಜಾತಿ– ಧರ್ಮಗಳ ತಾರತಮ್ಯದ ನೆಲೆವೀಡಾಗಿದ್ದ ನೆಲದಲ್ಲಿ ನಾರಾಯಣ ಗುರುಗಳು ತಂದ ಸಾಮಾಜಿಕ ಪರಿವರ್ತನೆಯಿಂದಾಗಿ ಕೇರಳದಲ್ಲಿ ಸಮಾನತೆ ಬಂದಿದೆ. ನಾರಾಯಣ ಗುರುಗಳ ಆದರ್ಶವು ಜಗತ್ತಿಗೆ ಬೆಳಕು ನೀಡಬಲ್ಲದು’ ಎಂದು ಹೇಳಿ ನಾರಾಯಣ ಗುರುಗಳ ಭಾವಚಿತ್ರ ಅನಾವರಣ ಮಾಡಿದ್ದರು ಎಂದು ಸುನಿಲ್‌ಕುಮಾರ್ ಹೇಳಿದ್ದಾರೆ.
‘ಹಿಂದೆ ಕಮ್ಯುನಿಸ್ಟ್ ಪಕ್ಷ ನಾರಾಯಣ ಗುರುಗಳ ಮೂರ್ತಿಯನ್ನು ಭಗ್ನ ಮಾಡಿತ್ತು. ಅವರೇ ಈಗ ರಾಜಕೀಯ ಕಾರಣಕ್ಕಾಗಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ವಿಷಯ ತಿಳಿದುಕೊಳ್ಳದೇ ಬೆಂಕಿ ಹಚ್ಚುವ ಕೆಲಸ ಮಾಡುವುದು ಸರಿಯಲ್ಲ. ರಾಜ್ಯದಲ್ಲಿರುವ ನಾರಾಯಣ ಗುರುಗಳ ಭಕ್ತರು ಮತ್ತು ಅನುಯಾಯಿಗಳಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿ ಶಂಕರಾಚಾರ್ಯರ ಸ್ತಬ್ಧ ಚಿತ್ರವನ್ನು ಕಳುಹಿಸುವಂತೆ ಕೇಂದ್ರ ಸರ್ಕಾರ ಹೇಳಿದೆ ಎಂಬುದು ಶುದ್ಧ ಸುಳ್ಳು. ಸಿದ್ದರಾಮಯ್ಯ ಅವರು ಕೊಳಕು ರಾಜಕೀಯದ ಷಡ್ಯಂತ್ರ ಮಾಡುತ್ತಿದ್ದಾರೆ‘ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read more from source
[wpas_products keywords=”deal of the day sale today kitchen”]