Karnataka news paper

ಕೋವಿಡ್-19: ಹಾಸನ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಅತಿಹೆಚ್ಚು; ಅಧಿಕಾರಿಗಳಿಗೆ ಚಿಂತೆ


The New Indian Express

ಹಾಸನ: ಹಾಸನ ಜಿಲ್ಲೆಯಲ್ಲಿ ಸೋಂಕಿತರ ಜೊತೆಗೆ ಪಾಸಿಟಿವಿಟಿ ದರ ಕೂಡ ಹೆಚ್ಚಾಗುತ್ತಿದ್ದು, ಈ ಬೆಳವಣಿಗೆಗೆ ಜಿಲ್ಲಾಡಳಿತ ಮಂಡಳಿ ಆತಂಕ ವ್ಯಕ್ತಪಡಿಸುತ್ತಿದೆ. 

ಜಿಲ್ಲೆಯಲ್ಲಿ ಶೇ.39.39ರಷ್ಟು ಪಾಸಿಟಿವಿಟಿ ದರವಿದ್ದು, ಇದರೊಂದಿಗೆ ರಾಜ್ಯದಲ್ಲಿ ಅತೀ ಹೆಚ್ಚು ಪಾಸಿಟಿವಿಟಿ ದರ ಹೊಂದಿರುವ ಜಿಲ್ಲೆಗಳ ಪೈಕಿ ಹಾಸನ ಅಗ್ರ ಸ್ಥಾನ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಮಂಗಳವಾರ 1527 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. 

ಮೂಲಗಳ ಪ್ರಕಾರ ಜಿಲ್ಲೆಯಲ್ಲಿ 415 ವಿದ್ಯಾರ್ಥಿಗಳು, 132 ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಕೋವಿಡ್ ವಾಕ್ ಇನ್ ಟೆಸ್ಟ್ ಗೆ ಸಚಿವ ಅಶ್ವಥ್ ನಾರಾಯಣ ಚಾಲನೆ

ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪರೀಕ್ಷೆಗಳನ್ನು ಪರಿಣಾಮಕಾರಿ ರೀತಿಯಲ್ಲಿ ನಡೆಸುತ್ತಿದ್ದು, ಕಳೆದ ಎರಡು ದಿನಗಳಿಂದ ಪ್ರತೀನಿತ್ಯ 5,000ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿದೆ. 

ಈ ನಡುವೆ ಮನೆಗಳಲ್ಲಿ ಐಸೋಲೇಷನ್ ಒಳಗಾಗಿರುವ ಸೋಂಕಿತರ ಮನೆ ಬಾಗಿಲಿಗೆ ಕೋವಿಡ್ ಕಿಟ್‌ಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ. 

ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಸಿಬ್ಬಂದಿ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ಜಿಲ್ಲಾಪಂಚಾಯತ್‌ನ ವಿವಿಧ ಅಧಿಕಾರಿಗಳು, ಪೊಲೀಸ್ ಪೇದೆಗಳು ಮತ್ತು ಪೊಲೀಸ್ ಇಲಾಖೆಗಳ ಹೆಡ್ ಕಾನ್‌ಸ್ಟೆಬಲ್‌ಗಳಲ್ಲಿಯೂ ಸೋಂಕು ಪತ್ತೆಯಾಗಿದೆ. 

ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಹಾಸನದಲ್ಲಿ ಕೋವಿಡ್ 19 ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರು, ಆಲೂರು ಮತ್ತು ಹಾಸನದ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. 

ಜಿಲ್ಲೆಯ ಶಾಲಾ ಮಕ್ಕಳಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಕೋವಿಡ್-19: ಹೋಮ್ ಟೆಸ್ಟಿಂಗ್ ಕಿಟ್ ಬದಲು ಆರ್‌ಟಿ-ಪಿಸಿಆರ್‌ಗೆ ಬಿಬಿಎಂಪಿ ಹೆಚ್ಚು ಒತ್ತು!

ಜಿಲ್ಲೆಯ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳುವಂತೆ ಸಚಿವರು ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಇಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಸಾಧ್ಯತೆ ಇದೆ.

ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಭಾಯಿಸಲು ಸಕಲ ಸಿದ್ಧತೆ ನಡೆಸಿದ್ದು, ಆಮ್ಲಜನಕ ಬೆಡ್‌ಗಳು, ಆಮ್ಲಜನಕ ಜನರೇಟರ್‌ಗಳು ಮತ್ತು ಕೋವಿಡ್ ಕೇರ್ ಸೆಂಟರ್‌ಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳು ಅಧಿಕವಾಗಿದ್ದರೂ, ಸೋವಿನ ಪ್ರಮಾಣ ಕಡಿಮೆಯಿದೆ ಎಂದು ಗಿರೀಶ್ ಅವರು ಹೇಳಿದ್ದಾರೆ. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ಮಾತನಾಡಿ, ಕೆಮ್ಮು, ಜ್ವರ, ನೆಗಡಿಯಿಂದ ಆಸ್ಪತ್ರೆಗೆ ಬರುವವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಗೊಳಗಾಗುತ್ತಿರುವವರ ಪೈಕಿ ಶೇ.30ರಷ್ಟು ಜನರಲ್ಲಿ ಸೋಂಕು ಕಂಡು ಬರುತ್ತಿದೆ. ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರ ಆರೋಗ್ಯದ ಮೇಲೆ ಇಲಾಖೆ ನಿಗಾ ವಹಿಸಿದೆ. ಜನವರಿ ಅಂತ್ಯದ ವೇಳೆಗೆ ಕೊರೋನಾ ಮೂರನೇ ಆಲೆ ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ.



Read more

[wpas_products keywords=”deal of the day”]