ಹೈಲೈಟ್ಸ್:
- ಜನರ ಸಹಕಾರದಿಂದ ಸಿನಿಮೀಯ ರೀತಿಯಲ್ಲಿ ಚೇಸ್
- ಪೊಲೀಸ್ ಸಿಬ್ಬಂದಿಗೆ ನಗದು ಬಹುಮಾನ
- ಕೊಪ್ಪಿಕರ ರಸ್ತೆಯಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಹಣ ಲೂಟಿ
ವಿಜಯಪುರ ಮೂಲದ ಹಾಗೂ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ ಕುಮಾರ್ ಬಂಧಿತ ವ್ಯಕ್ತಿ. ಮಂಗಳವಾರ ಮಧ್ಯಾಹ್ನ 2.15ರ ಸುಮಾರಿಗೆ ಇಲ್ಲಿಯ ಕೊಪ್ಪಿಕರ ರಸ್ತೆಯಲ್ಲಿನ ಬ್ಯಾಂಕ್‌ಗೆ ಮಂಕಿ ಕ್ಯಾಪ್ ಹಾಕಿಕೊಂಡು ಒಳ ಬಂದ ಪ್ರವೀಣ ಕುಮಾರ್, ಕ್ಯಾಶಿಯರ್ ಹಾಗೂ ಮ್ಯಾನೇಜರ್‌ಗೆ ಚಾಕು ತೋರಿಸಿ ಕ್ಯಾಶ್ ಕೌಂಟರ್‌ನಲ್ಲಿದ್ದ 6,39,125 ರೂ.ಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಪರಾರಿಯಾಗಲು ಯತ್ನಿಸಿದ್ದ. ಅಲ್ಲದೇ, ಈ ಸಂದರ್ಭದಲ್ಲಿ ಯಾರಾದರೂ ಕೂಗುವುದು, ಓಡಲು ಯತ್ನಿಸಿದರೆ, ಚಾಕು ಹಾಕುವುದಾಗಿ ಬೆದರಿಸಿದ್ದ.
ಈ ವೇಳೆ ಬ್ಯಾಂಕ್ ಮತ್ತು ಹೊರ ಭಾಗದಲ್ಲಿ ಸಾರ್ವಜನಿಕರು ತಡೆಯಲು ಮುಂದಾದ ವೇಳೆ ಅವರನ್ನು ಬೆದರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಕರ್ತವ್ಯ ನಿರತ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ ಉಮೇಶ ಬಂಗಾರಿ ಹಾಗೂ ಉಪನಗರ ಠಾಣೆಯ ಮಂಜುನಾಥ ಹಾಲವರ, ಆತನನ್ನು ಬೆನ್ನಟ್ಟಿ ಸಾರ್ವಜನಿಕರ ಸಹಾಯದಿಂದ ಬ್ಯಾಂಕ್‌ನ 200 ಮೀ. ಅಂತರದಲ್ಲಿ ಹಿಡಿದಿದ್ದಾರೆ. ಅಲ್ಲದೇ, ಆತನ ಬಳಿಯಿಂದ ಹಣ ಮತ್ತು ಕೃತ್ಯಕ್ಕೆ ಬಳಸಿದ ಚಾಕು ಜಪ್ತಿ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಲಾಬೂರಾಮ್, ಪೊಲೀಸ್ ಸಿಬ್ಬಂದಿ ಸಮಯ ಪ್ರಜ್ಞೆ ಹಾಗೂ ಸಾರ್ವಜನಿಕರ ಸಹಕಾರದಿಂದ ಹಾಡಹಗಲೇ ಬ್ಯಾಂಕ್ ದರೋಡೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸಾರ್ವಜನಿಕರು ಸಹ ಉತ್ತಮ ಸಹಕಾರ ನೀಡಿದ್ದರಿಂದ ಪರಾರಿಯಾಗುತ್ತಿದ್ದವನನ್ನು ಪೊಲೀಸರು ಬಂಧಿಸಲು ಸಾಧ್ಯವಾಗಿದೆ. ಈತನ ಹೆಚ್ಚಿನ ತನಿಖೆಗೆ ವಿಚಾರಣೆಗೆ ಒಳಪಡಿಸಲಾಗಿದ್ದು, ಎರಡು ದಿನಗಳ ಹಿಂದೆ ಹುಬ್ಬಳ್ಳಿಗೆ ಬಂದು ಲಾಡ್ಜ್‌ನಲ್ಲಿ ವಾಸವಾಗಿದ್ದ ಎಂಬ ಮಾಹಿತಿ ದೊರೆತಿದೆ. ಆತನ ಹಿನ್ನೆಲೆ ಬಗ್ಗೆ ಇನ್ನಷ್ಟು ವಿಚಾರಣೆ ಮಾಡಲಾಗುತ್ತಿದೆ ಎಂದರು.
ಕಾರ್ಯಾಚರಣೆಯಲ್ಲಿದ್ದ ಸಿಬ್ಬಂದಿಗೆ ಆಯುಕ್ತರು ತಲಾ 25 ಸಾವಿರ ರೂ. ನಗದು ಬಹುಮಾನ ಘೋಷಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ವಿಭಾಗ ಎಸಿಪಿ ಆರ್. ಕೆ. ಪಾಟೀಲ, ಶಹರ ಠಾಣೆ ಪಿಐ ಆನಂದ ಒನಕುದ್ರೆ, ಉಪನಗರ ಠಾಣೆ ಪಿಐ ಡಿ. ಬಿ. ರವಿಚಂದ್ರ ಸೇರಿದಂತೆ ಇತರರು ಇದ್ದರು.
ಮಾಹಿತಿ ಸಂಗ್ರಹ
ಸದ್ಯ ಆರೋಪಿ ಮದುವೆ ನಿಶ್ಚಿಯವಾಗಿತ್ತು ಎಂದು ಹೇಳುತ್ತಿದ್ದಾನೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಅಲ್ಲದೇ, ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆಯಲಾಗುತ್ತಿದೆ. ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತ ಲಾಬೂರಾಮ್ ತಿಳಿಸಿದರು.
ಸಿಬ್ಬಂದಿಗೆ ಓಕೆ.. ಪಬ್ಲಿಕ್‌ಗೆ ಯಾಕಿಲ್ಲ..?
ಹಣ ದೋಚಿ ಪರಾರಿಗೆ ಯತ್ನಿಸಿದವನನ್ನು ಸೆರೆ ಹಿಡಿಯುವಲ್ಲಿ ಸಾರ್ವಜನಿಕರೇ ಮಹತ್ತರ ಪಾತ್ರ ವಹಿಸಿದ್ದನ್ನು ಸ್ವತಃ ಹೇಳಿಕೊಂಡ ಕಮಿಷನರ್ ಲಾಬೂರಾಮ್, ಸಿಬ್ಬಂದಿಗಷ್ಟೇ ನಗದು ಬಹುಮಾನ ಘೋಷಿಸಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಆರೋಪಿ ಹಿಡಿಯುವ ಕಾರ್ಯಾಚರಣೆಯಲ್ಲಿದ್ದ ಸಾರ್ವಜನಿಕರಿಗೆ ಕನಿಷ್ಠ ಪಕ್ಷ ಪ್ರಶಂಸಾ ಪತ್ರ ನೀಡಬಹುದಿತ್ತು ಎಂಬ ಮಾತು ಕೇಳಿ ಬಂದಿವೆ.
Read more
[wpas_products keywords=”deal of the day sale today offer all”]