Karnataka news paper

ಗಡಿ ಕಾಯುವ ಸೈನಿಕರ ಹೊಸ ಸಮವಸ್ತ್ರ, ಉತ್ಪಾದನೆಯ ಗುತ್ತಿಗೆಗೆ ಶುರುವಾಗಿದೆ ಗುದ್ದಾಟ


ಹೈಲೈಟ್ಸ್‌:

  • ದೇಶದ 13 ಲಕ್ಷ ಸೈನಿಕರಿಗೆ 2023ರ ವೇಳೆಗೆ ನೂತನ ಸಮವಸ್ತ್ರ ನೀಡುವ ಗುರಿ ಇಟ್ಟುಕೊಂಡ ಕೇಂದ್ರ ಸರಕಾರ
  • ಖಾಸಗಿ ಕಂಪನಿಗಳಿಗೆ ಉತ್ಪಾದನೆಯ ಗುತ್ತಿಗೆ ನೀಡಲು ಸರಕಾರ ಚಿಂತನೆ
  • ಇದರ ನಡುವೆ ಸರಕಾರಿ ಸ್ವಾಮ್ಯದ ಸಶಸ್ತ್ರ ಪಡೆಯ ಬಟ್ಟೆ ಕಾರ್ಖಾನೆಗಳಿಗೆ ಗುತ್ತಿಗೆ ನೀಡಬೇಕೆಂದು ನೌಕರರ ಪಟ್ಟು

ಹೊಸದಿಲ್ಲಿ: ದೇಶದ ಸೈನಿಕರಿಗಾಗಿ ನೂತನ ಸಮವಸ್ತ್ರ ಪರಿಚಯಿಸಿದ ಬೆನ್ನಲ್ಲೇ ಅವುಗಳ ಉತ್ಪಾದನೆಯ ಗುತ್ತಿಗೆಗೆ ಗುದ್ದಾಟ ಶುರುವಾಗಿದೆ. ಕೇಂದ್ರ ಸರಕಾರವು ಖಾಸಗಿ ಕಂಪನಿಗಳಿಗೆ ಉತ್ಪಾದನೆಯ ಗುತ್ತಿಗೆ ನೀಡಲು ಚಿಂತನೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದು, ಸರಕಾರಿ ಸ್ವಾಮ್ಯದ ಸಶಸ್ತ್ರ ಪಡೆಯ ಬಟ್ಟೆ ಕಾರ್ಖಾನೆ (ಒಸಿಎಫ್‌)ಗಳಿಗೆ ಗುತ್ತಿಗೆ ನೀಡಬೇಕೆಂದು ಒಸಿಎಫ್‌ ನೌಕರರು ಪಟ್ಟು ಹಿಡಿದಿದ್ದಾರೆ.

ದೇಶದ 13 ಲಕ್ಷ ಸೈನಿಕರಿಗೆ 2023ರ ವೇಳೆಗೆ ನೂತನ ಸಮವಸ್ತ್ರ ನೀಡುವ ಗುರಿಯನ್ನು ಕೇಂದ್ರ ಸರಕಾರ ಇಟ್ಟುಕೊಂಡಿದ್ದು, ಗುಣಮಟ್ಟದ ಸಮವಸ್ತ್ರದ ಉತ್ಪಾದನೆಗಾಗಿ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲು ಒಲವು ತೋರಿದೆ ಎಂದು ತಿಳಿದುಬಂದಿದೆ.

ಆದರೆ, ಸರಕಾರಿ ಸ್ವಾಮ್ಯದ, ಅದರಲ್ಲೂ ಅವಡಿ ಕಾರ್ಖಾನೆಯ ಉದ್ಯೋಗಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಸರಕಾರಿ ಸ್ವಾಮ್ಯದ ಕಾರ್ಖಾನೆಗಳಿಗೆ ಬೇಡಿಕೆಗಳ ಕೊರತೆ ಇದೆ. ಹಾಗಾಗಿ, ಕೇಂದ್ರ ಸರಕಾರವು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡುವ ಬದಲು ಸಶಸ್ತ್ರ ಬಟ್ಟೆ ಕಾರ್ಖಾನೆಗಳಿಗೆ ಗುತ್ತಿಗೆ ನೀಡಿದರೆ ಕಾರ್ಖಾನೆಗಳ ಏಳಿಗೆಯೂ ಆಗುತ್ತದೆ,” ಎಂದು ಉದ್ಯೋಗಿಗಳು ಹೇಳಿದ್ದಾರೆ.

ಮತ್ತೊಂದೆಡೆ, ಬರೀ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡುವುದು ಕೇಂದ್ರ ಸರಕಾರದ ಉದ್ದೇಶವಾಗಿಲ್ಲ ಎಂದು ತಿಳಿದುಬಂದಿದೆ. ”ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಸರಕಾರದ ಹಾಗೂ ಖಾಸಗಿ ಕಂಪನಿಗಳಿಗೆ ಗುತ್ತಿಗೆ ಆಹ್ವಾನ ನೀಡಲಾಗುತ್ತದೆ. ಬಳಿಕ ಪ್ರಕ್ರಿಯೆ ಹಾಗೂ ಗುಣಮಟ್ಟದ ಆಧಾರದ ಮೇಲೆ ಯಾರಿಗೆ ಗುತ್ತಿಗೆ ನೀಡಬೇಕು ಎಂಬುದನ್ನು ನಿರ್ಧರಿಸುತ್ತದೆ’ ಎಂದು ತಿಳಿದುಬಂದಿದೆ.

ಹೊಸ ಬಗೆಯ ಸಮವಸ್ತ್ರ ಧರಿಸಿ ಪರೇಡ್‌

ಭಾರತೀಯ ಸೈನಿಕರಿಗೆ ಹೊಸ ಬಗೆಯ ಸಮವಸ್ತ್ರ ನೀಡಲಾಗುತ್ತಿದ್ದು, ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಪ್ಯಾರಾಚೂಟ್‌ ರೆಜಿಮೆಂಟ್‌ನ ಕಮಾಂಡೋಗಳು ಇದೇ ಮೊದಲ ಬಾರಿಗೆ ನವೀನ ಬಗೆಯ ಸಮವಸ್ತ್ರ ಧರಿಸಿ ಪರೇಡ್‌ ಕೂಡ ನಡೆಸಿದ್ದಾರೆ. ದಶಕಗಳ ಹಳೆಯ ಸಮವಸ್ತ್ರಗಳನ್ನು ಹೊಸದಾಗಿ ಮಾರ್ಪಡಿಸಿದ್ದು, ಇದೇ ಆಗಸ್ಟ್‌ನಲ್ಲಿ ಸೈನಿಕರಿಗೆ ಈ ಹೊಸ ಸಮವಸ್ತ್ರಗಳನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.



Read more…

[wpas_products keywords=”deal of the day”]