ರಾಯಚೂರು: ಕೆಪಿಎಸ್ ಸಿ ನಡೆಸುತ್ತಿರುವ ಲೋಕೋಪಯೋಗಿ ಇಲಾಖೆಯ ಎಇ ಪರೀಕ್ಷೆ ಬರೆಯುವುದಕ್ಕೆ ಮಂಗಳವಾರ ಬೆಳಿಗ್ಗೆ 6ಗಂಟೆಗೆ ಕಲಬುರ್ಗಿ ತಲುಪಬೇಕಿದ್ದ ಅಭ್ಯರ್ಥಿಗಳು, 9 ಗಂಟೆಯಾದರೂ ರಾಯಚೂರಿನಲ್ಲೇ ಉಳಿಯುವಂತಾಗಿದೆ. ರೊಚ್ಚಿಗೆದ್ದ ಉದ್ಯೋಗ ಆಕಾಂಕ್ಷಿಗಳು ಹಾಸನ-ಸೊಲ್ಲಾಪುರ ರೈಲು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸುಮಾರು 800ಕ್ಕೂ ಹೆಚ್ಚು ಆಕಾಂಕ್ಷಿಗಳು ಕೆಪಿಎಸ್ ಸಿ ವಿರುದ್ಧ ಘೋಷಣೆ ಕೂಗುತ್ತಿದ್ದು, ಪರೀಕ್ಷೆ ದಿನವನ್ನು ಮತ್ತೊಮ್ಮೆ ನಿಗದಿ ಮಾಡಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ದಕ್ಷಿಣ ಭಾಗದ ಜಿಲ್ಲೆಗಳ ಅರ್ಜಿದಾರರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಅದಲು ಬದಲು ಮಾಡಿ ಪರೀಕ್ಷಾ ಕೇಂದ್ರ ನೀಡಲಾಗಿತ್ತು. ಹೀಗಾಗಿ ಮೈಸೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಿಂದ ಹಾಸನ-ಸೊಲ್ಲಾಪುರ ರೈಲಿನಲ್ಲಿ ಬರುತ್ತಿದ್ದರು. ಈಗ ಅದೇ ರೈಲು ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಸುಮಾರು ಮೂರು ಸಾವಿರ ಮಂದಿ ಪರೀಕ್ಷೆಗೆ ಹೊರಟಿದ್ದರು. ಎಲ್ಲರದ್ದು ಪರೀಕ್ಷೆ ಕೈ ತಪ್ಪಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನು ಚದುರಿಸುವುದಕ್ಕೆ ಪ್ರಯತ್ನಿಸುತ್ತಿದ್ದರೂ ಪರೀಕ್ಷಾರ್ಥಿಗಳು ಜಾಗ ಬಿಟ್ಟು ಕದಲುತ್ತಿಲ್ಲ.