Karnataka news paper

ನವೆಂಬರ್‌ನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಂಡ ಏರ್‌ಟೆಲ್‌, ಜಿಯೋ; ವೊಡಾಫೋನ್‌ ಐಡಿಯಾಗೆ ಮತ್ತೆ ನಷ್ಟ!


ನವೆಂಬರ್‌ನಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ನ ವೈರ್‌ಲೆಸ್‌ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ ದಾಖಲಾಗಿದೆ. ಇದೇ ಅವಧಿಯಲ್ಲಿ ವೊಡಾಫೋನ್ ಐಡಿಯಾ (ವಿ) ಭಾರೀ ಸಂಖ್ಯೆಯ ಗ್ರಾಹಕರನ್ನು ಕಳೆದುಕೊಂಡು ನಷ್ಟ ಅನುಭವಿಸಿದೆ. ಈ ಮೂಲಕ ಜುಲೈ ಅಂತ್ಯದಲ್ಲಿ ಪ್ರಿಪೇಯ್ಡ್ ದರಗಳನ್ನು ಏರಿಕೆ ಮಾಡಿದ ನಂತರದ ಪರಿಣಾಮಗಳನ್ನು ಎದುರಿಸಲು ವೊಡಾಫೋನ್‌ ಐಡಿಯಾ ವಿಫಲವಾಗಿದೆ.

ರಿಲಯನ್ಸ್ ಜಿಯೋ ನವೆಂಬರ್‌ನಲ್ಲಿ 20.1 ಲಕ್ಷ ಹೊಸ ಗ್ರಾಹಕರನ್ನು ತನ್ನ ನೆಟ್ವರ್ಕ್‌ಗೆ ಸೇರಿಸಿಕೊಂಡಿದ್ದು, ಕಂಪನಿಯ ಒಟ್ಟು ಮೊಬೈಲ್ ಬಳಕೆದಾರರ ಸಂಖ್ಯೆ 42.86 ಕೋಟಿಗೆ ಏರಿಕೆಯಾಗಿದೆ. ಇದೇ ವೇಳೆ ಭಾರ್ತಿ ಏರ್‌ಟೆಲ್ 13.1 ಲಕ್ಷ ಗ್ರಾಹಕರನ್ನು ಸಂಪಾದಿಸಿದ್ದು, ಕಂಪನಿಯ ನೆಟ್ವರ್ಕ್‌ ಬಳಕೆದಾರರ ಸಂಖ್ಯೆ 35.53 ಕೋಟಿಗೆ ಏರಿಕೆಯಾಗಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಮಂಗಳವಾರ ಬಿಡುಗಡೆ ಮಾಡಿರುವ ಇತ್ತೀಚಿನ ಚಂದಾದಾರರ ಮಾಹಿತಿಯಿಂದ ತಿಳಿದು ಬಂದಿದೆ.

ಇದಕ್ಕೆ ವ್ಯತಿರಿಕ್ತವಾಗಿ, ವೊಡಾಫೋನ್‌ ಐಡಿಯಾ ನವೆಂಬರ್‌ನಲ್ಲಿ 18.9 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು, ಸಂಸ್ಥೆಯ ಒಟ್ಟು ಮೊಬೈಲ್ ಬಳಕೆದಾರರ ಸಂಖ್ಯೆ 26.71 ಕೋಟಿಗೆ ಇಳಿಕೆಯಾಗಿದೆ. ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿರುವ ಟೆಲಿಕಾಂ ಸಂಸ್ಥೆ ಆರ್ಥಿಕವಾಗಿ ಪ್ರಬಲವಾಗಿರುವ ಇಬ್ಬರು ಪ್ರತಿಸ್ಪರ್ಧಿಗಳನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ಸೋಲುತ್ತಿದೆ.

ಜಿಯೋಗೆ ಹೆಚ್ಚಿನ ಗ್ರಾಹಕರನ್ನು ಸಂಪಾದಿಸಲು ದೀಪಾವಳಿಯ ಅವಧಿಯಲ್ಲಿ ಬಿಡುಗಡೆಯಾದ ಕಂಪನಿಯ ಹೊಸ 4G ಮೊಬೈಲ್‌ ಫೋನ್‌ ‘ಜಿಯೋಫೋನ್‌ ನೆಕ್ಸ್ಟ್‌’ ಕೂಡ ಸಹಾಯ ಮಾಡಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಗೂಗಲ್‌ ಜತೆ ಸೇರಿ ಜಿಯೋ ಈ ಕಡಿಮೆ ದರದ ಫೋನ್‌ನ್ನು ಬಿಡುಗಡೆ ಮಾಡಿತ್ತು.

ಜಿಯೋ ಮತ್ತು ಏರ್‌ಟೆಲ್‌ ಗ್ರಾಹಕರ ಸಂಖ್ಯೆಯಲ್ಲಾದ ಹೆಚ್ಚಳದಿಂದ ನವೆಂಬರ್‌ನಲ್ಲಿ ದೇಶದ ಒಟ್ಟಾರೆ ಮೊಬೈಲ್‌ ಬಳಕೆದಾರರ ಸಂಖ್ಯೆ 12 ಲಕ್ಷ ಹೆಚ್ಚಳವಾಗಿದ್ದು 116.7 ಕೋಟಿಗೆ ಏರಿಕೆಯಾಗಿದೆ.

ಜಿಯೋ ಮತ್ತು ಏರ್‌ಟೆಲ್‌ ತಮ್ಮ ಗ್ರಾಮೀಣ ಮೊಬೈಲ್‌ ಬಳಕೆದಾರರ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿವೆ. ಜಿಯೋದ ಗ್ರಾಮೀಣ ಮೊಬೈಲ್‌ ಬಳಕೆದಾರರ ಸಂಖ್ಯೆ 18.59 ಕೋಟಿಗೆ ಏರಿಕೆಯಾಗಿದ್ದರೆ, ಏರ್‌ಟೆಲ್‌ ಬಳಕೆದಾರರ ಸಂಖ್ಯೆ 17.13 ಕೋಟಿಗೆ ಏರಿಕೆಯಾಗಿದೆ. ಇದೇ ವೇಳೆ ವೊಡಾಫೋನ್‌ ಐಡಿಯಾ ಬಳಕೆದಾರರ ಸಂಖ್ಯೆ ನವೆಂಬರ್‌ ಅಂತ್ಯಕ್ಕೆ 13.53 ಕೋಟಿಗೆ ಇಳಿಕೆಯಾಗಿದೆ.

ಟ್ರಾಯ್‌ ವರದಿಯ ಪ್ರಕಾರ ರಿಲಯನ್ಸ್‌ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ ಮಾರುಕಟ್ಟೆಯನ್ನು ತಮ್ಮ ಪಾಲನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿವೆ. ಮಾರುಕಟ್ಟೆಯಲ್ಲಿ ಜಿಯೋ ಪಾಲು ಶೇ. 36.58 ರಿಂದ ಶೇ. 36.71ಕ್ಕೆ ಏರಿಕೆಯಾಗಿದೆ. ಏರ್‌ಟೆಲ್‌ ಪಾಲು ಶೇ. 30.35 ರಿಂದ 30.43ಕ್ಕೆ ಏರಿಕೆಯಾಗಿದೆ. ಇದೇ ವೇಳೆ ವೊಡಾಫೋನ್‌ ಐಡಿಯಾ ಪಾಲು ಶೇ. 23.07ರಿಂದ ಶೇ. 22.88ಕ್ಕೆ ಕುಸಿದಿದೆ.

ವಿಸಿಟರ್‌ ಲೊಕೋಷನ್‌ ರೆಜಿಸ್ಟರ್‌ (ವಿಎಲ್‌ಆರ್‌) ಎಂದು ಕರೆಯಲ್ಪಡುವ ಸಕ್ರಿಯ ಮೊಬೈಲ್‌ ಬಳಕೆದಾರರ ಸಂಖ್ಯೆಯಲ್ಲಿ ಏರ್‌ಟೆಲ್‌ ಮುಂಚೂಣಿಯಲ್ಲಿದೆ. ಏರ್‌ಟೆಲ್‌ನ ಒಟ್ಟು ಬಳಕೆದಾರರಲ್ಲಿ ಶೇ. 97.92ರಷ್ಟು ಸಕ್ರಿಯ ಬಳಕೆದಾರರಾಗಿದ್ದಾರೆ. ವೊಡಾಫೋನ್‌ ಐಡಿಯಾದಲ್ಲಿ ಶೇ. 86.69 ಸಕ್ರಿಯ ಬಳಕೆದಾರರು ಇದ್ದರೆ, ಜಿಯೋದಲ್ಲಿ ಈ ಪ್ರಮಾಣ ಶೇ. 83.9ರಷ್ಟಿದೆ.

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.



Read more

[wpas_products keywords=”deal of the day sale today offer all”]