Karnataka news paper

ಹೆದ್ದಾರಿ ಟೋಲ್‌ಗಳಲ್ಲಿ ಶುಲ್ಕ ಸಂಗ್ರಹಕ್ಕಷ್ಟೇ ಆದ್ಯತೆ; ಮೂಲಸೌಕರ್ಯಗಳ ಕೊರತೆ!


ಹೈಲೈಟ್ಸ್‌:

  • ಹೆದ್ದಾರಿ ಟೋಲ್‌ಗಳಲ್ಲಿ ಇಲ್ಲವಾದ ಮೂಲಸೌಕರ್ಯ
  • ಪ್ರತಿನಿತ್ಯ ಕೋಟ್ಯಂತರ ರೂ. ಶುಲ್ಕ ಸಂಗ್ರಹ
  • ಸೇವೆ ನೀಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ

ವಿಜಯ್‌ ಕೋಟ್ಯಾನ್‌ ಮಂಗಳೂರು
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿಗಳನ್ನು ಅಭಿವೃದ್ಧಿಗೊಳಿಸಿ ಲೋಕಾರ್ಪಣೆಗೊಳಿಸಿದ ಬಳಿಕ ಟೋಲ್‌ ಕೇಂದ್ರಗಳನ್ನು ಆರಂಭಿಸಿ ಪ್ರತಿನಿತ್ಯ ಶುಲ್ಕ ಸಂಗ್ರಹಿಸುತ್ತಿದೆ. ಆದರೆ ಈ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳು ಇಲ್ಲ. ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ.

ರಾಜ್ಯದ ಬೆಂಗಳೂರು, ಧಾರವಾಡ, ಕಲಬುರಗಿ, ಹಾಸನ, ತುಮಕೂರು, ಚಿತ್ರದುರ್ಗ, ಮಂಗಳೂರು, ಹೊಸಪೇಟೆ, ರಾಮನಗರದಲ್ಲಿರುವ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಬರುತ್ತವೆ. ಈ ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಟೋಲ್‌ ಸಂಗ್ರಹ ಕೇಂದ್ರಗಳಿವೆ. ಪ್ರತಿನಿತ್ಯ ರಾಜ್ಯ, ಅಂತಾರಾಜ್ಯ ಪ್ರವಾಸ ಕೈಗೊಳ್ಳುವ ವಾಹನಗಳಿಂದ ಕೋಟ್ಯಂತರ ರೂ. ಶುಲ್ಕ ಸಂಗ್ರಹಿಸಲಾಗುತ್ತಿದೆ. ಆದರೆ, ಈ ಟೋಲ್‌ಗೇಟ್‌ಗಳು ಪ್ರಯಾಣಿಕರಿಗೆ ಶುಲ್ಕ ವಸೂಲಿ ಕೇಂದ್ರಗಳಾಗಿವೆಯೇ ಹೊರತು, ಮೂಲಸೌಕರ್ಯ ನೀಡುವಲ್ಲಿ ವಿಫಲವಾಗಿವೆ.

5 ಕಿ.ಮೀಗೊಂದು ಶೌಚಾಲಯ ಇರಲಿ
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್‌ಗೆ ವಿಶೇಷ ಒತ್ತು ನೀಡುತ್ತಿದ್ದಾರೆ. ಆದರೆ, ಹೆದ್ದಾರಿಗಳಲ್ಲಿ ಪೆಟ್ರೋಲ್‌ ಬಂಕ್‌, ಖಾಸಗಿ ಹೋಟೆಲ್‌ಗಳು, ಕೆಲವು ಬಸ್‌ಸ್ಟ್ಯಾಂಡ್‌ಗಳನ್ನು ಹೊರತುಪಡಿಸಿದರೆ ಎಲ್ಲೂ ಶೌಚಾಲಯಗಳೇ ಇಲ್ಲ. ಇನ್ನಾದರೂ ಹೆದ್ದಾರಿ ಪ್ರಾಧಿಕಾರವು ಕನಿಷ್ಠ 5 ಕಿ.ಮೀ.ಗೊಂದು ಶೌಚಾಲಯ ನಿರ್ಮಿಸಬೇಕಿದೆ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ದಿಲ್‌ರಾಜ್‌ ಆಳ್ವ.

”ಟೋಲ್‌ಗೇಟ್‌ಗಳಲ್ಲಿ ಶುಲ್ಕ ಸಂಗ್ರಹಿಸುತ್ತಾರೆಯೇ ಹೊರತು ಪ್ರಯಾಣಿಕರಿಗೆ ಬೇಕಾದ ಮೂಲಸೌಕರ್ಯಗಳನ್ನು ನೀಡುತ್ತಿಲ್ಲ. ಇದಕ್ಕಾಗಿ ಆರ್‌ಟಿಐ ಮಾಹಿತಿ ಕೇಳಿದಾಗ ಟೋಲ್‌ಗೇಟ್‌ನಲ್ಲಿ ಮೂಲಸೌಕರ್ಯ ನೀಡುವ ಬಗ್ಗೆ ಮತ್ತು ರಾಷ್ಟ್ರೀಯ ಹೆದ್ದಾರಿಯ ನಿರ್ಲಕ್ಷ್ಯದ ಸತ್ಯಾಂಶ ಬಯಲಾಗಿದೆ,” ಎಂದು ಆಳ್ವ ಹೇಳಿದ್ದಾರೆ.

ಟೋಲ್‌ಗೇಟ್‌ನಲ್ಲಿ ಏನಿರಬೇಕು?
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಪ್ರತಿಯೊಂದು ಟೋಲ್‌ಗೇಟ್‌ನಲ್ಲಿ ಮಿನಿ ವಿಶ್ರಾಂತಿ ಧಾಮ ಇರಬೇಕು. ಹೆದ್ದಾರಿಯ ಎರಡು ಬದಿಗಳಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಫಾಸ್ಟ್‌ಟ್ಯಾಗ್‌ ವ್ಯವಸ್ಥೆ, ಆಂಬ್ಯುಲೆನ್ಸ್‌ ವ್ಯವಸ್ಥೆಗಳನ್ನು ಒಳಗೊಂಡಿರಬೇಕು. ಆದರೆ ರಾಜ್ಯದ ಟೋಲ್‌ಗೇಟ್‌ಗಳಲ್ಲಿ ಶುಲ್ಕವನ್ನು ನಿಯತ್ತಾಗಿ ಸಂಗ್ರಹಿಸುವುದು ಬಿಟ್ಟರೆ ಮೂಲಸೌಕರ್ಯ ಕಲ್ಪಿಸಲು ಆದ್ಯತೆಯನ್ನೇ ನೀಡಿಲ್ಲ.

ಬಯಲು ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಸಾರ್ವಜನಿಕ ಶೌಚಾಲಯಗಳೇ ಇಲ್ಲ. ಕಲಬುರಗಿ, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ದೂರದ ಊರಿನಿಂದ ಬರುವ ಬಸ್‌ಗಳು, ಟೂರಿಸ್ಟ್‌ ವಾಹನಗಳು ರಾತ್ರಿ ಹೊತ್ತು ನಿರ್ಜನ ಪ್ರದೇಶದಲ್ಲಿ ಬಸ್‌ಗಳನ್ನು ನಿಲ್ಲಿಸಿ ಬಯಲನ್ನೇ ಶೌಚಾಲಯವನ್ನಾಗಿಸಿವೆ. ಮಹಿಳೆಯರು, ಮಕ್ಕಳು, ಪುರುಷರು ಬಯಲು ಪ್ರದೇಶಗಳನ್ನೇ ಬಹಿರ್ದೆಸೆಗೆ ಬಳಸಬೇಕಿದೆ.
-ಮುರಳೀಧರ್‌, ಟೂರಿಸ್ಟ್‌ ಬಸ್‌ ಚಾಲಕ



Read more

[wpas_products keywords=”deal of the day sale today offer all”]