The New Indian Express
ಬೆಂಗಳೂರು: ಜಾರಿಯಲ್ಲಿರುವ ಯೋಜನೆಗಳಿಗೆ ತ್ವರಿತ ಪರಿಸರ ಅನುಮತಿ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಅಂತರರಾಜ್ಯ ನದಿ ನೀರು ವಿವಾದಗಳಲ್ಲಿ ಕೆಲವು ಕಾನೂನು ನಿಬಂಧನೆಗಳನ್ನು ತೆಗೆದುಹಾಕಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಒತ್ತಾಯಿಸಿದರು.
ಕೇಂದ್ರ ಮೇಲ್ಮೈ ಸಾರಿಗೆ, ಹೆದ್ದಾರಿಗಳು ಮತ್ತು ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯ ದಕ್ಷಿಣ ವಲಯ ಸಮ್ಮೇಳನದಲ್ಲಿ ಪಾಲ್ಗೊಂಡ ಬೊಮ್ಮಾಯಿಯವರು ಈ ಕುರಿತು ಮಾತನಾಡಿದರು.
ಮೇಕೆದಾಟು ಯೋಜನೆಗೆ ಪರಿಸರ ಅನುಮತಿ ಇನ್ನೂ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ಮಹದಾಯಿ ಯೋಜನೆಗೂ ಈ ಹೇಳಿಕೆ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಯಾವ ಪಕ್ಷದ ವಿರೋಧವೂ ಇಲ್ಲ, ಹಾಗಿರುವಾಗ ಪಾದಯಾತ್ರೆ ಮಾಡಿದ್ದೇ ತಪ್ಪು: ಗೃಹ ಸಚಿವ ಆರಗ ಜ್ಞಾನೇಂದ್ರ
ಪರಿಸರ ಹಾಗೂ ಅರಣ್ಯ ಇಲಾಖೆ ಅನುಮೋದನೆಗಳು, ಆರ್ಥಿಕ ವಲಯದಲ್ಲಿ ಕೆಲವು ಕಾನೂನುಗಳನ್ನು ಸರಳೀಕರಿಸುವ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ಸಾಧ್ಯ. ಅಂತರ ರಾಜ್ಯ ಜಲ ವಿವಾದಗಳಿಂದ ನೀರಾವರಿ ಯೋಜನೆಗಳಲ್ಲಿ ವಿಳಂಬವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನು ಮಧ್ಯಸ್ಥಿಕೆಗಳ ಅಗತ್ಯವೂ ಇದ್ದು, ಅವುಗಳ ಬಗ್ಗೆ ಮತ್ತೊಮ್ಮೆ ಗಮನಹರಿಸಬೇಕು ಎಂದು ಹೇಳಿದರು.
ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲಾ ಅಂಶಗಳು ರಾಜ್ಯದಲ್ಲಿದ್ದು, ರಸ್ತೆ, ರೈಲ್ವೇ, ಬಂದರುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಐದು ವಿಮಾನ ನಿಲ್ದಾಣಗಳು, ಒಳನಾಡು ಜಲಸಾರಿಗೆ, ಕೆೃರೈಡ್ ಮುಂತಾದವುಗಳನ್ನು ಹೊಂದಿದೆ.
ರೈಲು ಉತ್ಪಾದನೆಯಲ್ಲಿ 50-50 ಪಾಲುದಾರಿಕೆಯನ್ನು ಹೊಂದಿದ ಮೊದಲ ರಾಜ್ಯ. ರೈಲ್ವೇ ಯೋಜನೆಗಳಿಗೆ ಭೂ ಸ್ವಾಧೀನ ಮತ್ತು ಬಂಡವಾಳ ಮೂಲಕ ರಾಜ್ಯ ಸರ್ಕಾರ ಸಹಕಾರ ನೀಡುತ್ತಿದೆ. ಈ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕಿದೆ. ಬೆಂಗಳೂರು-ಮೈಸೂರು-ಹೈದರಾಬಾದ್’ಗೆ ಹೈಸ್ಪೀಡ್ ರೈಲು ಪ್ರಮುಖ ಯೋಜನೆಯಾಗಿದೆ. 453 ಕಿ.ಮೀ ಉದ್ದದ ಈ ಯೋಜನೆಯನ್ನು ಮೇಲ್ದರ್ಜೆಗೇರಿಸುವುದರಿಂದ ಎರಡೂ ರಾಜ್ಯಗಳ ನಡುವಿನ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಿಂದ ರಾಜ್ಯದಲ್ಲಿ ಕೊರೋನಾ ಹೆಚ್ಚಳ: ಆರೋಗ್ಯ ಸಚಿವ ಸುಧಾಕರ್
ಕರ್ನಾಟಕ ರಾಜ್ಯ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಐತಿಹಾಸಿಕವಾಗಿ ರಾಜ್ಯ ಮೊದಲಿನಿಂದಲೂ ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ಹೊಂದಿದ್ದು, ಕೇಂದ್ರ ಮತ್ತು ಅಂತರ ರಾಜ್ಯ ಸಹಕಾರದಲ್ಲಿ ಕರ್ನಾಟಕ ಸದಾ ಸಮನ್ವಯ ಸಾಧಿಸಿದೆ ಎಂದು ಹೇಳಿದರು.
Read more
[wpas_products keywords=”deal of the day”]