Karnataka news paper

ವಿಧಾನ ಪರಿಷತ್ ಚುನಾವಣೆ: ಕೊಡಗಿನಲ್ಲಿ ಅರಳಿದ ಕಮಲ; ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು!


ಮಡಿಕೇರಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು ಗೆಲುವಿನ ನಗೆ ಬೀರಿದ್ದಾರೆ.

ಕೊಡಗು ಪುಟ್ಟ ಜಿಲ್ಲೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಏಕಸ್ಥಾನವಿದ್ದು ಈ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಮಾಜಿ ಸಚಿವ ಎ ಮಂಜು ಅವರ ಮಗ ಮಂಥರ್ ಗೌಡ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಮಾಜಿ ಸಚಿವ, ಹಾಲಿ ಬಿಜೆಪಿಯ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸಹೋದರ ಸುಜಾ ಕುಶಾಲಪ್ಪ ಸ್ಪರ್ಧಿಸಿದ್ದರು.

ವಿಧಾನ ಪರಿಷತ್‌ ಚುನಾವಣೆಯ ಮತ ಎಣಿಕೆಯು ಡಿ. 14ರಂದು ನಗರದ ಸಂತ ಜೋಸೆಫರ ಶಾಲೆಯಲ್ಲಿ ನಡೆದಿದ್ದು, ಒಟ್ಟು ಚಲಾವಣೆಯಾದ ಮತಗಳು ಒಟ್ಟು 1325. ಇದರಲ್ಲಿ ಬಿಜೆಪಿ‌ – 705 ಮತಗಳೊಂದಿಗೆ ಗೆದ್ದು ವಿಜಯದ ನಗೆ ಬೀರಿದರೆ, ಕಾಂಗ್ರೆಸ್ – 603ಮತಗಳೊಂದಿಗೆ ಪರಾಭವಗೊಂಡಿದೆ. ಒಟ್ಟು 17 ಮತಗಳು ತಿರಸ್ಕೃತಗೊಂಡಿದ್ದು ಬಿಜೆಪಿ 102 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

ಇನ್ನು ಜಿಲ್ಲೆಯಲ್ಲಿ ಸುಜಾ ಕುಶಾಲಪ್ಪ ಅವರು ಗೆಲುವು ಸಾಧಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ.

ನಿಷೇಧಾಜ್ಞೆ ಜಾರಿ
ಮತ ಎಣಿಕೆ ನಡೆಯುವ ದಿನದಂದು ಕಾನೂನು ಸುವ್ಯವಸ್ಥೆ ಯನ್ನು ಕಾಪಾಡುವ ಸಲುವಾಗಿ ಡಿ. 14 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಡಾ.ಬಿ.ಸಿ.ಸತೀಶ ಆದೇಶ ಹೊರಡಿಸಿದ್ದಾರೆ. ಮತ ಎಣಿಕೆ ಕೇಂದ್ರವಾದ ಮಡಿಕೇರಿಯ ಸಂತ ಜೋಸೆಫರ ಶಾಲೆ ಆವರಣದೊಳಗೆ ಸಂಬಂಧ ಪಡದ / ಅನಧಿಕೃತ ವ್ಯಕ್ತಿಗಳ ಪ್ರವೇಶ ನಿಷೇಧಿಸಿದೆ. ಮತ ಎಣಿಕೆ ನಡೆಯುವ ಕೇಂದ್ರದ 5 ಕಿ.ಮೀ. ವ್ಯಾಪ್ತಿಯಲ್ಲಿ ನಿಯಮಬಾಹಿರ ಒಗ್ಗೂಡುವಿಕೆ, ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಸರ್ಕಾರದ ಕೋವಿಡ್‌-19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ.



Read more