Karnataka news paper

ಬೆಂಗಳೂರಲ್ಲಿ ಟೆಸ್ಲಾ ಘಟಕ ಸ್ಥಾಪಿಸಿ: ಎಲಾನ್‌ ಮಸ್ಕ್‌ಗೆ ಆಹ್ವಾನ ನೀಡಿದ ಸಚಿವ ಮುರುಗೇಶ್‌ ನಿರಾಣಿ


ಹೈಲೈಟ್ಸ್‌:

  • ಬೆಂಗಳೂರಿನಲ್ಲಿ ಟೆಸ್ಲಾ ಘಟಕ ಸ್ಥಾಪಿಸಲು ಎಲಾನ್‌ ಮಸ್ಕ್‌ಗೆ ಆಹ್ವಾನ
  • ಟ್ವಿಟ್ಟರ್‌ನಲ್ಲಿ ಆಹ್ವಾನ ನೀಡಿದ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ
  • ತಿಂಗಳ ಹಿಂದಷ್ಟೇ ಟೆಸ್ಲಾ ಸ್ಥಾಪಿಸಲು ಅಡಚಣೆಗಳಿವೆ ಎಂದು ಹೇಳಿದ್ದ ಎಲಾನ್‌ ಮಸ್ಕ್‌

ಬೆಂಗಳೂರು: ಟೆಸ್ಲಾ ಕಂಪನಿ ಭಾರತದಲ್ಲಿ ಸ್ಥಾಪನೆ ಮಾಡಲು ಹಲವು ತೊಡಕುಗಳಿವೆ ಎಂದು ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್ ಹೇಳಿದ ಬೆನ್ನಲ್ಲೇ, ಇದೀಗ ಟೆಸ್ಲಾ ಘಟಕ ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು ಕರ್ನಾಟಕ ಸರ್ಕಾರ ಎಲಾನ್‌ ಮಸ್ಕ್‌ಗೆ ಆಹ್ವಾನ ನೀಡಿದೆ.

ಮಧ್ಯಮ ಹಾಗೂ ಬೃಹತ್‌ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಅವರು ಬೆಂಗಳೂರಿನಲ್ಲಿ ಟೆಸ್ಲಾ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಎಲಾನ್‌ ಮಸ್ಕ್‌ಗೆ ಟ್ವಿಟ್ಟರ್‌ ಮೂಲಕ ಅಹ್ವಾನ ನೀಡಿದ್ದಾರೆ.

‘400 ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು (R&D Centers ), 45 ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ವೆಹಿಕಲ್‌ (EV) ಸ್ಟಾರ್ಟ್‌ ಅಪ್‌ಗಳು ಮತ್ತು ಬೆಂಗಳೂರಿನ ಸಮೀಪವಿರುವ ಎಲೆಕ್ಟ್ರಾನಿಕ್ ವೆಹಿಕಲ್‌ ಕ್ಲಸ್ಟರ್‌ನೊಂದಿಗೆ ಕರ್ನಾಟಕವು ಭಾರತದ ಎಲೆಕ್ಟ್ರಾನಿಕ್ ವೆಹಿಕಲ್‌ ಹಬ್ ಆಗಿ ಹೊರಹೊಮ್ಮಿದೆ. ಹೀಗಾಗಿ ಎಲಾನ್ ಮಸ್ಕ್ ರವರು ತಮ್ಮ ಟೆಸ್ಲಾ ಸ್ಥಾವರವನ್ನು ಸ್ಥಾಪಿಸಲು ಕರ್ನಾಟಕವು ಸೂಕ್ತ ತಾಣವಾಗಿದೆ. ಈಗಾಗಲೇ ಬೆಂಗಳೂರು ಟೆಸ್ಲಾದ ಮೊದಲ ತಾಣವಾಗಿದೆ’ ಎಂದು ಮುರುಗೇಶ್ ನಿರಾಣಿ ಅವರು ಎಲಾನ್ ಮಸ್ಕ್‌ ಹಾಗೂ ಟೆಸ್ಲಾಗೆ ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದಾರೆ.

ಭಾರತದಲ್ಲಿ ‘ಟೆಸ್ಲಾ’ ಆರಂಭಿಸಲು ಅನೇಕ ಸವಾಲುಗಳಿವೆ ಎಂದ ಎಲಾನ್ ಮಸ್ಕ್

ಕಳೆದ ತಿಂಗಳಷ್ಟೇ ಭಾರತದಲ್ಲಿ ಟೆಸ್ಲಾ ಸ್ಥಾಪಿಸಲು ಅಡಚಣೆಗಳಿವೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಮುರುಗೇಶ್‌ ನಿರಾಣಿಯವರು ಬೆಂಗಳೂರಿನಲ್ಲಿ ಟೆಸ್ಲಾದ ಉತ್ಪಾದನಾ ಘಟಕ ಸ್ಥಾಪಿಸಲು ಎಲಾನ್‌ ಮಸ್ಕ್‌ ಅವರಿಗೆ ಆಹ್ವಾನ ನೀಡಿದ್ದಾರೆ.

ಈಗಾಗಲೇ ಟೆಸ್ಲಾ ಕಂಪನಿ ಬೆಂಗಳೂರಿನಲ್ಲಿ ನೋಂದಾಯಿಸಿಕೊಂಡಿದೆ. ಟೆಸ್ಲಾ ಇಂಡಿಯಾ ಮೋಟರ್ಸ್‌ ಆಂಡ್‌ ಎನರ್ಜಿ ಪ್ರೈವೆಟ್‌ ಲಿಮಿಟೆಡ್‌ ಎನ್ನುವ ಹೆಸರಿನಲ್ಲಿ ನೋಂದವಣೆಯಾಗಿದೆ. ಒಟ್ಟು 1 ಲಕ್ಷ ಪೈಡ್‌ ಅಪ್‌ ಕ್ಯಾಪಿಟಲ್‌ ಇದೆ ಎಂದು ನೋಂದಣಿ ವೇಳೆ ಹೇಳಿಕೊಂಡಿದೆ.

ಬೆಂಗಳೂರಿನಲ್ಲಿ ಟೆಸ್ಲಾ ತನ್ನ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲಿದೆ ಎಂದು 2021ರ ಫೆಬ್ರವರಿಯಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದರು. ಈ ವರೆಗೂ ಅದಕ್ಕೆ ಕಾಲ ಕೂಡಿ ಬಂದಿಲ್ಲ. ಟೆಸ್ಲಾ ಎಲೆಕ್ಟ್ರಿಕ್‌ ವಾಹನವಾಗಿದ್ದು, ಇದಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಕಂಪನಿ ಕೋರಿಕೊಂಡಿತ್ತು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟ್ಟರ್ ಖಾತೆ ಹ್ಯಾಕ್: ಎಲಾನ್ ಮಸ್ಕ್ ಹೆಸರಲ್ಲಿ ಟ್ವೀಟ್!
ಆದರೆ ಹೀಗೆ ತೆರಿಗೆ ವಿನಾಯಿತಿ ನೀಡುವ ಯಾವುದೇ ಅವಕಾಶ ಇಲ್ಲ ಎಂದು ಕೇಂದ್ರ ಸರ್ಕಾರ ಟೆಸ್ಲಾದ ಮನವಿಯನ್ನು ತಳ್ಳಿ ಹಾಕಿತ್ತು. ಒಂದು ವೇಳೆ ಟೆಸ್ಲಾಗೆ ಮಾತ್ರ ವಿನಾಯಿತಿ ನೀಡಿದರೆ, ಈಗಾಗಲೇ ಲಕ್ಷಾಂತರ ಕೋಟಿ ಬಂಡವಾಳ ಹಾಕಿರುವ ಹಲವು ಕಂಪನಿಗಳಿಗೆ ತಪ್ಪು ಸಂದೇಶ ರವಾನೆ ಆಗಲಿದೆ ಎಂದು ಸರ್ಕಾರ ಹೇಳಿತ್ತು.

ಈಗಾಗಲೇ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾದ ಕಾರುಗಳ ಆಮದಿಗೆ ಕೇಂದ್ರ ಸರ್ಕಾರ ಶೇ.60 ರಿಂದ ಶೇ. 100 ರಷ್ಟು ತೆರಿಗೆ ವಿಧಿಸುತ್ತಿದೆ. ಕಾರುಗಳ ಎಂಜಿನ್‌ ಗಾತ್ರ, ಕಾರುಗಳ ಬೆಲೆ, ವಿಮೆ ಹಾಗೂ ಸಾಗಣಿಕೆ ವೆಚ್ಚ ಮುಂತಾದವುಗಳ ಮೇಲೆ ವಿವಿಧ ಸ್ತರದಲ್ಲಿ ಕೇಂದ್ರ ಸರ್ಕಾರ ತೆರಿಗೆ ವಿಧಿಸುತ್ತಿದೆ.



Read more

[wpas_products keywords=”deal of the day sale today offer all”]