Karnataka news paper

ಇದೇ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ. ದಾಟಿದ ಎಸ್‌ಐಪಿ ಹೂಡಿಕೆ ಹರಿವು


ವ್ಯವಸ್ಥಿತ ಹೂಡಿಕೆ ಯೋಜನೆಗಳಿಂದ (ಎಸ್‌ಐಪಿ) ಸಂಚಿತ ಒಳಹರಿವು ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ 1 ಲಕ್ಷ ಕೋಟಿ ರೂ.ವನ್ನು ದಾಟಿದೆ ಎಂದು ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ (ಎಎಂಎಫ್‌ಐ) ದಾಖಲೆಗಳು ಹೇಳಿವೆ.

ಚಿಲ್ಲರೆ ಹೂಡಿಕೆದಾರರ ನಿರಂತರ ಬೆಂಬಲದಿಂದ ಉತ್ತೇಜಿತವಾಗಿ ದೇಶೀಯ ಹೂಡಿಕೆ ಹರಿವು ಹೆಚ್ಚಿದ್ದು, ವಿದೇಶಿ ಬಂಡವಾಳ ಹೂಡಿಕೆದಾರರಿಂದ (ಎಫ್‌ಪಿಐ) ಸೃಷ್ಟಿಯಾಗಿರುವ ಮಾರಾಟದ ಒತ್ತಡವನ್ನು ಭಾಗಶಃ ಸರಿದೂಗಿಸಿದೆ. ಈ ಹಿಂದೆ 2019ರಲ್ಲಿ ಎಸ್‌ಐಪಿ ಹರಿವು ರೂ. 98,612 ಕೋಟಿ ಇದ್ದಿದ್ದೇ ಈವರೆಗಿನ ದಾಖಲೆ ಆಗಿತ್ತು.

ಎಸ್‌ಐಪಿ ಒಳಹರಿವಿನಿಂದ ಉತ್ತೇಜಿತವಾಗಿ ದೇಶೀಯ ನಿಧಿಗಳು ಈಕ್ವಿಟಿ ಮಾರುಕಟ್ಟೆಯಲ್ಲಿ 63,439 ಕೋಟಿ ರೂ.ಗಳನ್ನು ನಿಯೋಜಿಸಿದರೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2021ರ ಮೊದಲ ಹನ್ನೊಂದು ತಿಂಗಳುಗಳಲ್ಲಿ 43,193 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಇದರ ಪರಿಣಾಮವಾಗಿ, ಒಟ್ಟು ಸಾಂಸ್ಥಿಕ ಈಕ್ವಿಟಿ ಎಯುಎಂ (ನಿರ್ವಹಣೆಯ ಅಡಿಯಲ್ಲಿ ಸ್ವತ್ತುಗಳು, ಅಂದರೆ ಹೂಡಿಕೆಯ ಒಟ್ಟು ಮಾರುಕಟ್ಟೆ ಮೌಲ್ಯ) ನಲ್ಲಿ ಸ್ಥಳೀಯ ನಿಧಿಗಳ ಪಾಲು ನವೆಂಬರ್‌ನಲ್ಲಿ ಶೇ. 16.8ಕ್ಕೆ ಏರಿಕೆ ಕಂಡಿದೆ. ಫೆಬ್ರವರಿ 2020ರ ಬಳಿಕ ಇದು ಅತೀ ಹೆಚ್ಚಿನ ಪ್ರಮಾಣವಾಗಿದೆ ಎಂದು ಎನ್‌ಎಸ್‌ಡಿಎಲ್‌ ದಾಖಲೆಗಳು ಹೇಳಿವೆ.

ಮ್ಯೂಚುವಲ್‌ ಫಂಡ್‌ ಸಿಪ್‌ ಮೂಲಕ ಹೂಡಿಕೆ ಹೇಗೆ?
ಮಾಸಿಕ ಎಸ್‌ಐಪಿ ಹೂಡಿಕೆಯು ನವೆಂಬರ್‌ವರೆಗಿನ ಏಳು ತಿಂಗಳುಗಳಲ್ಲಿ ಬೆಳೆಯುತ್ತಾ ಬಂದಿದ್ದು, ಕಳೆದ ಮೂರು ತಿಂಗಳಲ್ಲಿ ಮಾಸಿಕ ಹರಿವು 10,000 ಕೋಟಿ ರೂ.ಗಿಂತ ಹೆಚ್ಚಿತ್ತು. ಇದರ ಪರಿಣಾಮ 2021 ರಲ್ಲಿ ತಿಂಗಳಿಗೆ ಸರಾಸರಿ 9,337 ಕೋಟಿ ರೂ.ನಂತೆ ಎಸ್‌ಐಪಿ ಹೂಡಿಕೆ ಹರಿದು ಬಂದಿದೆ. ದೀರ್ಘಾವಧಿಯ ಸರಾಸರಿ 7,028 ಕೋಟಿ ರೂ.ಗಳಿಗೆ ಹೋಲಿಸಿದರೆ ಇದು ತುಂಬಾ ಹೆಚ್ಚಾಗಿದೆ.

ಹಣಕಾಸಿನ ಗುರಿ ಮುಟ್ಟಲು ಮ್ಯೂಚುವಲ್‌ ಫಂಡ್‌; ರಿಸ್ಕ್ ಇಲ್ಲದೆ ಉತ್ತಮ ರಿಟರ್ನ್ಸ್!
ವ್ಯವಸ್ಥಿತ ಹೂಡಿಕೆ ಯೋಜನೆಗಳ ಪ್ರಭಾವಶಾಲಿ ಆದಾಯಗಳು ಮತ್ತು ಉತ್ತಮ ಹೂಡಿಕೆಯ ಪರ್ಯಾಯಗಳ ಕೊರತೆಯ ಪರಿಣಾಮ ಚಿಲ್ಲರೆ ಹೂಡಿಕೆದಾರರ ನಿರಂತರವಾಗಿ ಎಸ್‌ಐಪಿಗಳ ಮೇಲೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಸೆನ್ಸೆಕ್ಸ್ ಷೇರುಗಳಲ್ಲಿನ ಹೂಡಿಕೆಯ ಆಧಾರದ ಮೇಲೆ ಮೂರು ವರ್ಷಗಳ ಮತ್ತು ಐದು ವರ್ಷಗಳ ಎಸ್‌ಐಪಿ ಆದಾಯವು ಕ್ರಮವಾಗಿ ಶೇ. 26.3 ಮತ್ತು ಶೇ. 19.4ರ ಪ್ರಮಾಣದಲ್ಲಿದ್ದು, ಇದು 12 ವರ್ಷಗಳಲ್ಲೇ ಗರಿಷ್ಠ ಮಟ್ಟವಾಗಿದೆ.

ನಿರ್ವಹಣೆಯಲ್ಲಿರುವ ಈಕ್ವಿಟಿ ಆಸ್ತಿಗಳು (ಎಯುಎಂ) ಎರಡು ವರ್ಷಗಳ ಸಂಯುಕ್ತ ವಾರ್ಷಿಕ ದರದಲ್ಲಿ ಶೇ. 25ರಷ್ಟು ಬೆಳವಣಿಗೆ ಕಂಡಿದ್ದು, ನವೆಂಬರ್‌ನಲ್ಲಿ 17.43 ಲಕ್ಷ ಕೋಟಿ ರೂ.ಗೆ ಏರಿದೆ. ಈಕ್ವಿಟಿ ಫಂಡ್‌ಗಳ ಒಟ್ಟು ಸಂಖ್ಯೆಯು 7.8 ಕೋಟಿಗೆ ತಲುಪಿದೆ ಇದರಲ್ಲಿ ಶೇ. 20ರಷ್ಟು ಫಂಡ್‌ಗಳು ಈ ವರ್ಷದಲ್ಲಿ ಸೇರ್ಪಡೆಯಾದವು ಎಂಬುದು ವಿಶೇಷ.

ಅಕ್ಟೋಬರ್ 2021 ರಲ್ಲಿ ವ್ಯಕ್ತಿಗಳು ಒಟ್ಟು ಮ್ಯೂಚುಯಲ್ ಫಂಡ್‌ಗಳ ಸ್ವತ್ತುಗಳಲ್ಲಿ ಸುಮಾರು ಶೇ. 54.9 ರಷ್ಟು ಪಾಲನ್ನು ಹೊಂದಿದ್ದಾರೆ. ಇದು ವರ್ಷದ ಹಿಂದೆ ಶೇ. 51.7ರಷ್ಟಿತ್ತು ಎಂದು ಎಎಂಎಫ್‌ಐ ದಾಖಲೆಗಳು ಹೇಳಿವೆ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ‘ಎಕನಾಮಿಕ್ ಟೈಮ್ಸ್’ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.



Read more…