PTI
ಬೆಳಗಾವಿ: ಹೌರಾಗೆ ತೆರಳುತ್ತಿದ್ದ ಅಮರಾವತಿ ಎಕ್ಸ್ ಪ್ರೆಸ್ ರೈಲು ಗೋವಾದ ದೂದ್ ಸಾಗರ ಬಳಿ ಹಳಿ ತಪ್ಪಿದ್ದು, ಪ್ರಯಾಣಿಕರು, ರೈಲ್ವೇ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ವಾಸ್ಕೋ-ಡ-ಗಾಮಾ-ಹೌರಾ ಅಮರಾವತಿ ಎಕ್ಸ್‌ಪ್ರೆಸ್‌ನ ಪ್ರಮುಖ ಇಂಜಿನ್‌ನ ಮುಂಭಾಗದ ಜೋಡಿ ಚಕ್ರಗಳು ಮಂಗಳವಾರ ಬೆಳಿಗ್ಗೆ ದೂಧಸಾಗರ ಮತ್ತು ಕಾರಂಜೋಲ್ ನಡುವೆ ಹಳಿತಪ್ಪಿವೆ. ಮೂಲಗಳ ಪ್ರಕಾರ ರೈಲು ಬೆಳಗ್ಗೆ 6.30ಕ್ಕೆ ವಾಸ್ಕೋ-ಡ-ಗಾಮಾದಿಂದ ಹೊರಟು 8.50ಕ್ಕೆ ದೂಧಸಾಗರ್ ದಾಟಿತ್ತು. ಈ ವೇಳೆ ರೈಲಿನ ಎಂಜಿನ ಮುಂಭಾಗದ ಎರಡು ಗಾಲಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಯಾವುದೇ ರೀತಿಯ ಸಾವುನೋವು ಅಥವಾ ಗಾಯಗಳ ಬಗ್ಗೆ ಇದುವರೆಗೆ ವರದಿಯಾಗಿಲ್ಲ. “ರೈಲಿನ ಸಂಪೂರ್ಣ ರೇಕ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಪಘಾತ ಪರಿಹಾರ ರೈಲು (ಎಆರ್ ಟಿ) ಬೆಂಬಲದೊಂದಿಗೆ ಇದನ್ನು ಸರಿ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನ ಇಂಜಿನ್ ನಲ್ಲಾದ ಸಮಸ್ಯೆಯಿಂದಾಗಿ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ಪಟನಾದಿಂದ ಗುವಾಹಟಿಗೆ ಹೊರಟಿದ್ದ ಬಿಕನೇರ್ ಎಕ್ಸ್ ಪ್ರೆಸ್ ಅಪಘಾತಕ್ಕೀಡಾಗಿ 9 ಮಂದಿ ಸಾವಿಗೀಡಾಗಿದ್ದರು. ಆ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ರೈಲು ಹಳಿ ತಪ್ಪಿದ ತಕ್ಷಣ ಎಆರ್ ಟಿ ಮತ್ತು ವೈದ್ಯಕೀಯ ಸಲಕರಣೆಗಳ ವ್ಯಾನ್ ಕ್ಯಾಸಲ್ ರಾಕ್ ನಿಂದ ಬೆಳಗ್ಗೆ 9.45ಕ್ಕೆ ಹೊರಟು 10.35ಕ್ಕೆ ಸ್ಥಳಕ್ಕೆ ತಲುಪಿದೆ ಎಂದು ರೈಲ್ವೇಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಹುಬ್ಬಳಿಯ ಡಿಆರ್ ಎಂ ಅರವಿಂದ್ ಮಾಳಖೇಡೆ ಹಾಗೂ ಹಿರಿಯ ಅಧಿಕಾರಿಗಳ ವಿಭಾಗೀಯ ತಂಡ ಬೆಳಗ್ಗೆ 9.50ಕ್ಕೆ ಸ್ವಯಂ ಚಾಲಿತ ಎಆರ್ ಟಿಯ ಮೂಲಕ ಹುಬ್ಬಳ್ಳಿಯಿಂದ ತೆರಳಿ ಸ್ಥಳಕ್ಕೆ ಧಾವಿಸಿದ್ದಾರೆ. ರೈಲು ಅವಗಢದಿಂದ ಆಘಾತಕ್ಕೆ ಈಡಾಗಿದ್ದ ಎಲ್ಲಾ ಪ್ರಯಾಣಿಕರಿಗೆ ನೀರು ಮತ್ತು ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಪಶ್ಚಿಮ ಬಂಗಾಳದಲ್ಲಿ ನಡೆದ ರೈಲು ಅಫಘಾತದ ಬಳಿಕ ಸ್ಥಳಕ್ಕೆ ಧಾವಿಸಿದ್ದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಇಂಜಿನ್ ನ ಬಿಡಿಭಾಗಗಳನ್ನು ಬೇರೆ ಬೇರೆ ಮಾಡಿ ತನಿಖೆಗೆ ಒಳಪಡಿಸಿದ ಬಳಿಕವೇ ಇಂಜಿನ್ ನ ಯಾವ ಭಾಗದಲ್ಲಿ ಸಮಸ್ಯೆಯಾಗಿದೆ ಎನ್ನುವುದನ್ನು ತಿಳಿಯಲು ಸಾಧ್ಯ ಎಂದು ಹೇಳಿದ್ದರು. ಅದೇ ವೇಳೆ ಆಸ್ಪತ್ರೆಗೆ ದಾಖಲಾಗಿದ್ದ 45ಕ್ಕೂ ಅಧಿಕ ಪ್ರಯಾಣಿಕರನ್ನು ಅವರು ಭೇಟಿ ಮಾಡಿ ಸಾಂತ್ವನ ಹೇಳಿದ್ದರು.
ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ನೇತೃತ್ವದ ಹಿರಿಯ ಅಧಿಕಾರಿಗಳು, ಹೆಚ್ಚುವರಿ ಜನರಲ್ ಮ್ಯಾನೇಜರ್ ಪಿ ಕೆ ಮಿಶ್ರಾ, ಎಸ್‌ಪಿಎಸ್ ಗುಪ್ತಾ, ಪ್ರಧಾನ ಮುಖ್ಯ ಎಂಜಿನಿಯರ್, ಅಲೋಕ್ ತಿವಾರಿ, ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಮತ್ತು ಇಲಾಖೆಗಳ ಪ್ರಧಾನ ಮುಖ್ಯಸ್ಥರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
Read more
[wpas_products keywords=”deal of the day”]