Karnataka news paper

ಸೀಸ, ಯುರೇನಿಯಂ ಪತ್ತೆ ಆತಂಕ: ಬೆಂಗಳೂರು ಗ್ರಾಮಾಂತರ ಜೀವಜಲಕ್ಕೆ ಕುತ್ತು!


ಹೈಲೈಟ್ಸ್‌:

  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂತರ್ಜಲ ಮಲಿನಗೊಳ್ಳುತ್ತಿರುವ ಬಗ್ಗೆ ಪರಿಸರವಾದಿಗಳ ಆತಂಕ
  • ಜಿಲ್ಲೆಯ 3 ಹಳ್ಳಿಗಳ ನೀರಿನ ಮಾದರಿಗಳಲ್ಲಿ ಯುರೇನಿಯಂ ಅಂಶವಿರುವುದನ್ನು ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ
  • ಜಿಲ್ಲೆಯ ತಾಲೂಕುಗಳಲ್ಲಿ ದಶಕಗಳ ಹಿಂದೆ ನಡೆದಿದ್ದ ಮಾದರಿ ಪರೀಕ್ಷೆಯೊಂದು ನೀರಿನಲ್ಲಿ ಸೀಸದ ಅಂಶಗಳಿರುವುದನ್ನು ಖಚಿತಪಡಿಸಿತ್ತು

ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ: ರಾಜಧಾನಿ ಸಮೀಪದಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂತರ್ಜಲ ಮಲಿನಗೊಳ್ಳುತ್ತಿರುವ ಬಗ್ಗೆ ಪರಿಸರವಾದಿಗಳ ಆತಂಕದ ನಡುವೆ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಆತಂಕಕಾರಿ ಅಂಶವೊಂದನ್ನು ತಿಳಿಸಿದೆ. ಜಿಲ್ಲೆಯ 3 ಹಳ್ಳಿಗಳ ನೀರಿನ ಮಾದರಿಗಳಲ್ಲಿ ಯುರೇನಿಯಂ ಅಂಶವಿರುವುದನ್ನು ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ. ರಾಜ್ಯದ 73 ಹಳ್ಳಿಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 3 ಹಳ್ಳಿಗಳಲ್ಲಿ ಹೆಚ್ಚಿನ ಯುರೇನಿಯಂ ಅಂಶ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯ ಆವತಿ ಗ್ರಾಮದ ನೀರಿನ ಮಾದರಿಯಲ್ಲಿ 174ರಿಂದ 942 ಮೈಕ್ರೋಗ್ರಾಮ್ಸ್‌/ಲೀಟರ್‌ ನಷ್ಟು ಯುರೇನಿಯಂ ಅಂಶವಿದ್ದು, ಕೊಡಗುರ್ಕಿಯಲ್ಲಿ ಪ್ರತಿ ಲೀಟರ್‌ ನೀರಿನಲ್ಲಿ 356 ಮೈಕ್ರೋಗ್ರಾಮ್ಸ್‌ ಯುರೇನಿಯಂ ಅಂಶ ಪತ್ತೆಯಾಗಿದೆ. ಜತೆಗೆ, ಗುಡ್ಲಮುದ್ದೇನಹಳ್ಳಿಯಲ್ಲಿಇದೇ ಸ್ಥಿತಿಯಿದ್ದು, ಐಐಎಸ್‌ಸಿ ತೀವ್ರ ಆತಂಕ ವ್ಯಕ್ತಪಡಿಸಿದೆ.

ಜಿಲ್ಲೆಯ ತಾಲೂಕುಗಳಲ್ಲಿ ದಶಕಗಳ ಹಿಂದೆ ನಡೆದಿದ್ದ ಮಾದರಿ ಪರೀಕ್ಷೆಯೊಂದು ನೀರಿನಲ್ಲಿ ಸೀಸದ ಅಂಶಗಳಿರುವುದನ್ನು ಖಚಿತಪಡಿಸಿತ್ತು. ಪ್ರಸ್ತುತ, ಜಿಲ್ಲೆಯ ಅಂತರ್ಜಲದಲ್ಲಿ ಯುರೇನಿಯಂ ಪತ್ತೆಯಾಗಿರುವುದು ಜನರ ಆತಂಕವನ್ನು ಹೆಚ್ಚಿಸುತ್ತಿದ್ದು, ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ತ್ಯಾಜ್ಯ ನೀರಿನ ಗಂಡಾಂತರ
ಈಗಾಗಲೇ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ಹರಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂಇದೇ ರೀತಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ಹರಿಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದ್ದು, ಸೀಸ, ಯೂರೇನಿಯಂ ಅಂಶಗಳು ಹೇರಳವಾಗಿರುವ ಬೆಂಗಳೂರಿನ ಕೈಗಾರಿಕಾ ತ್ಯಾಜ್ಯ ನೀರನ್ನು 2 ಹಂತಗಳಲ್ಲಷ್ಟೇ ಸಂಸ್ಕರಿಸಿ ಜಿಲ್ಲೆಗೆ ಹರಿಸುವುದು ಎಷ್ಟು ಸುರಕ್ಷಿತವೆನ್ನುವ ಪ್ರಶ್ನೆ ಸಾರ್ವಜನಿಕರಲ್ಲಿಆರಂಭವಾಗಿದೆ. ಈಗಾಗಲೇ ಅಂತರ್ಜಲ ಮಲಿನವಾಗಿರುವುದು ಭಾರತೀಯ ವಿಜ್ಞಾನ ಸಂಸ್ಥೆಯ ವರದಿಯಿಂದ ತಿಳಿದುಬಂದಿದ್ದು, ವೈಜ್ಞಾನಿಕ ಹಂತಗಳಲ್ಲಿ ಸಂಸ್ಕರಣೆಗೊಳ್ಳದ ನೀರು ಕೆರೆಗಳಿಗೆ ಹರಿಯುವುದರಿಂದಾಗಿ ಜಿಲ್ಲೆಯ ಅಂತರ್ಜಲ ಮತ್ತಷ್ಟು ಹಾಳಾಗಲಿದೆ ಎನ್ನುವುದು ಪರಿಸರಾಸಕ್ತರ ಆತಂಕ.
ಕುಡಿಯೋ ನೀರಲ್ಲಿ ಯುರೇನಿಯಂ: ರಾಜ್ಯದ 73 ಹಳ್ಳಿಗಳಲ್ಲಿ ಅಧ್ಯಯನ; ಕ್ಯಾನ್ಸರ್‌ಕಾರಕ ವಿಷ ದೃಢ!
ಸಾಮಾನ್ಯರಿಗೆಟುಕದ ಪರೀಕ್ಷೆ
ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಗುಣಮಟ್ಟ, ಅಂತರ್ಜಲದ ಆರೋಗ್ಯದ ಕಡೆಗೆ ಸಾರ್ವಜನಿಕರು ಗಮನ ನೀಡುವುದು ಕಡಿಮೆ. ಆದರೆ, ಸರಕಾರದ ಇಲಾಖೆಗಳ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನ ನೀಡಬೇಕಾದ ಅನಿವಾರ್ಯವಿದೆ. ವಿಶೇಷವಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಕೈಗಾರಿಕೆಗಳ ತ್ಯಾಜ್ಯದಿಂದಾಗಿ ನೀರು ಮಲಿನಗೊಳ್ಳುತ್ತಿದ್ದು, ಅಂತರ್ಜಲ ಮಲಿನಗೊಳ್ಳುತ್ತಿದೆ. ಸಾಮಾನ್ಯ ಜನ ನೀರಿನ ಪರೀಕ್ಷೆಗೆ ಮುಂದಾದರೆ 15ರಿಂದ 20ಸಾವಿರ ಖರ್ಚು ಮಾಡಬೇಕಿದೆ. ಹೀಗಾಗಿ, ಸಾರ್ವಜನಿಕರಿಂದ ಸತ್ಯ ತಿಳಿಯುವುದು ಕಷ್ಟ. ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳು

  • ಕೈಗಾರಿಕಾ ತ್ಯಾಜ್ಯ ಅಂತರ್ಜಲ ಸೇರದಂತೆ ತಡೆಯಬೇಕು.
  • ಅಂತರ್ಜಲ ನೇರ ಬಳಕೆ ತಡೆಗಟ್ಟಬೇಕಿದೆ.
  • ಕೈಗಾರಿಕೆಗಳ ನಿಯಮ ಉಲ್ಲಂಘನೆಗೆ ಹತೋಟಿ.
  • ತ್ಯಾಜ್ಯ ನೀರು ಜಲಮೂಲಗಳನ್ನು ಸೇರುವುದನ್ನು ತಡೆಗಟ್ಟಬೇಕಿದೆ.

ಪ್ರಮುಖಾಂಶಗಳು

  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ 3 ಹಳ್ಳಿಗಳ ಅಂತರ್ಜಲದಲ್ಲಿ ಯುರೇನಿಯಂ ಪತ್ತೆ
  • ಈ ಹಿಂದೆ ಸೀಸದ ಪ್ರಮಾಣವಿದ್ದ ಬಗ್ಗೆ ವಿಜ್ಞಾನಿಗಳ ಎಚ್ಚರಿಕೆ
  • ಪರಿಸ್ಥಿತಿ ಹೀಗೆ ಮುಂದುವರಿದರೆ ತೀವ್ರ ತೊಂದರೆ
  • ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಕಟ್ಟಿಟ್ಟಬುತ್ತಿ

ಬೆಂಗಳೂರಿನ ಸಮೀಪದ ತಾಲೂಕುಗಳಲ್ಲಿನ ಅಂತರ್ಜಲ ನೇರ ಬಳಕೆ ತೀವ್ರ ಅಪಾಯಕಾರಿಯಾಗಿದ್ದು, ಕಿಡ್ನಿ ವೈಫಲ್ಯ, ಕ್ಯಾನ್ಸರ್‌ ಕಾರಣಕ್ಕೂ ಕಾರಣವಾಗಲಿದೆ.
ಡಾ.ಟಿ.ವಿ.ರಾಮಚಂದ್ರ, ಹಿರಿಯ ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆ
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರಿನ ಭಾಗ್ಯ; ಕಾವೇರಿ 5ನೇ ಹಂತದ ಯೋಜನೆಯಲ್ಲಿ ನೀರು ಪೂರೈಕೆ!
ನೆಲಮಂಗಲ, ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರದಲ್ಲಿ ಕೈಗಾರೀಕರಣ ಹೆಚ್ಚುತ್ತಿರುವುದರೊಂದಿಗೆ ಅಂತರ್ಜಲ ಮಲಿನ ಪ್ರಮಾಣದಲ್ಲೂ ಗಣನೀಯ ಏರಿಕೆ ಕಾಣುತ್ತಿದೆ. ಕಳೆದೊಂದು ದಶಕದ ಹಿಂದೆಯೇ ನೆಲಮಂಗಲದ ಸಮೀಪದಲ್ಲಿ ಅಂತರ್ಜಲ ಮಾದರಿಯಲ್ಲಿ ಸೀಸದ ಅಂಶ ಪತ್ತೆಯಾಗಿತ್ತು. ಹೀಗಾಗಿ, ಸರಕಾರ ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಿ, ಅಂತರ್ಜಲ ರಕ್ಷಿಸಬೇಕಾದ ಅಗತ್ಯವಿದೆ.
ಡಾ.ವಿ.ಎಸ್‌.ಪ್ರಕಾಶ್‌, ಹಿರಿಯ ಭೂಜಲ ತಜ್ಞ



Read more