ಹೈಲೈಟ್ಸ್:
- ಜನವರಿ 20ರಂದು ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆ
- ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಭಗವಂತ್ ಮನ್ ಆಯ್ಕೆ
- ಜನರಿಂದ ಫೋನ್, ವಾಟ್ಸಾಪ್ ಮೂಲಕ ಅಭಿಪ್ರಾಯ ಪಡೆದಿದ್ದ ಎಎಪಿ
- ಭಗವಂತ್ ಮನ್ ಪರ ಶೇ 93ಕ್ಕಿಂತಲೂ ಹೆಚ್ಚು ಮತ ಚಲಾವಣೆ
ಫೋನ್ ಹಾಗೂ ವಾಟ್ಸಾಪ್ ಮೂಲಕ ನಡೆದ ಮತದಾನದಲ್ಲಿ ಭಗವಂತ್ ಮನ್ ಅವರ ಪರ ಶೇ 93ಕ್ಕೂ ಹೆಚ್ಚು ಮತಗಳು ಬಂದಿವೆ ಎಂದು ಅರವಿಂದ್ ಕೇಜ್ರಿವಾಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ನವಜೋತ್ ಸಿಂಗ್ ಸಿಧು ಪರ ಕೂಡ ಶೇ 3ರಷ್ಟು ಮತಗಳು ಬಿದ್ದಿವೆ. ಕೆಲವು ಮತಗಳು ಅರವಿಂದ್ ಕೇಜ್ರಿವಾಲ್ ಅವರ ಪರವೇ ಬಿದ್ದಿದ್ದು, ಅವುಗಳನ್ನು ಅಸಿಂಧು ಎಂದು ಪರಿಗಣಿಸಲಾಗಿದೆ.
‘ಪಂಜಾಬ್ ಚುನಾವಣೆಯಲ್ಲಿ ಎಎಪಿ ಗೆಲ್ಲುವುದು ಈಗ ಬಹಳ ಸ್ಪಷ್ಟವಾಗಿದೆ. ಹೀಗಾಗಿ, ಜನರಿಂದಲೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಯ್ಕೆಯಾಗಿರುವ ವ್ಯಕ್ತಿಯೇ ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಸಂಗ್ರೂರ್ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಭಗವಂತ್ ಮನ್ ಅವರನ್ನು ನಾಟಕೀಯ ರೀತಿಯಲ್ಲಿ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಈ ದೂರವಾಣಿ ಹಾಗೂ ವಾಟ್ಸಾಪ್ ಆಯ್ಕೆ ಪ್ರಕ್ರಿಯೆಯಲ್ಲಿ 21 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಭಗವಂತ್ ಮನ್ ಅವರ ಬೃಹತ್ ಪರದೆಯಲ್ಲಿ ಮೂಡುತ್ತಿದ್ದಂತೆಯೇ ಸಭಾಂಗಣದಲ್ಲಿ ನೆರೆದಿದ್ದ ಎಎಪಿ ಸದಸ್ಯರಿಂದ ಹರ್ಷೋದ್ಗಾರ ಮತ್ತು ಘೋಷಣೆ ಮೊಳಗಿದವು. ‘ನನ್ನ ಮುಖ ನೋಡಿದಾಗ ಜನರು ನಗುತ್ತಿದ್ದರು. ಆದರೆ ಈಗ ಅವರು ಅಳುತ್ತಿದ್ದಾರೆ ಮತ್ತು ನಮ್ಮನ್ನು ಉಳಿಸಿ ಎಂದು ಹೇಳುತ್ತಾರೆ’ ಎಂದು ಮನ್ ತಮಾಷೆಯಾಗಿ ಹೇಳಿದರು. ಮನ್ ಅವರು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದರು.
ಪಂಜಾಬ್ ಚುನಾವಣೆಗೆ ಸಿಎಂ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದ ಮೊದಲ ಪಕ್ಷ ಎನಿಸಿಕೊಂಡಿರುವ ಎಎಪಿ, ಮನ್ ಅವರ ಜನಪ್ರಿಯತೆ ಹಾಗೂ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳಲು ಬಯಸಿದೆ. ‘ಇದೇ ಮೊದಲ ಬಾರಿಗೆ ಪಕ್ಷವೊಂದು ಜನರೇ ತಮ್ಮ ಸಿಎಂ ಅಭ್ಯರ್ಥಿಯ ಆಯ್ಕೆಗೆ ಅವಕಾಶ ನೀಡಿದೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಪಂಜಾಬ್ ಚುನಾವಣೆಯು ಜನವರಿ 20ರಂದು ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.
ಇದಕ್ಕೂ ಮುನ್ನ ರೈತ ಮುಖಂಡ ಬಲ್ಬೀರ್ ರಾಜೇವಾಲ್ ಅವರನ್ನು ಪಕ್ಷಕ್ಕೆ ಸೆಳೆಯಲು ಎಎಪಿ ಪ್ರಯತ್ನಿಸಿತ್ತು. ಆದರೆ ಆ ಮಾತುಕತೆ ವಿಫಲವಾಗಿತ್ತು ಎನ್ನಲಾಗಿದೆ. ‘ಭಗವಂತ್ ಮನ್ ನನಗೆ ಬಹಳ ಆಪ್ತ. ಅವರು ನನ್ನ ತಮ್ಮನಂತೆ. ಅವರು ಎಎಪಿಯ ದೊಡ್ಡ ನಾಯಕ. ಅವರೇ ಸಿಎಂ ಅಭ್ಯರ್ಥಿಯಾಗಬೇಕು ಎಂಬ ಅಭಿಪ್ರಾಯವಿತ್ತು. ಆದರೆ ಅವರು ಬೇಡ, ಜನರೇ ತೀರ್ಮಾನಿಸಲಿ ಎಂದಿದ್ದರು’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
Read more
[wpas_products keywords=”deal of the day sale today offer all”]