Karnataka news paper

ಸಂಪುಟ ಪುನರ್‌ರಚನೆ ಸದ್ಯಕ್ಕಿಲ್ಲ, ಆದರೆ ಅದಕ್ಕೆ ಸಿದ್ಧರಾಗಿರಿ!: ಹೈಕಮಾಂಡ್ ಸಂದೇಶ


ಹೈಲೈಟ್ಸ್‌:

  • ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಮುಂದುವರಿದ ಬಿಜೆಪಿ ಕಸರತ್ತು
  • ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ಚುನಾವಣೆಯಲ್ಲಿ ಹೈಕಮಾಂಡ್ ಬಿಜಿ
  • ಐದಾರು ಸಚಿವರಿಗೆ ಕೊಕ್ ಸಾಧ್ಯತೆ, ಉತ್ಸಾಹಿಗಳಿಗೆ ಮಣೆ ಹಾಕುವ ನಿರೀಕ್ಷೆ
  • ವಿವಿಧ ಕಾರಣಗಳಿಂದ ಮುಂದೂಡಿಕೆಯಾಗುತ್ತಿರುವ ಸಂಪುಟ ಪುನಾರಚನೆ

ಬೆಂಗಳೂರು: ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ರಚನೆ ಸದ್ಯಕ್ಕಿಲ್ಲ. ಆದರೆ, ಈ ಪ್ರಕ್ರಿಯೆಗೆ ಸಿದ್ಧವಾಗಿರುವಂತೆ ಹೈಕಮಾಂಡ್‌ನಿಂದ ಸಂದೇಶ ಬಂದಿರುವುದು ಕುತೂಹಲ ಕೆರಳಿಸಿದೆ. ಈ ನಡುವೆ, ಐದಾರು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪುಟ ಪುನರ್‌ರಚನೆ ಮುಂದೂಡಿಕೆಯಾಗಿದೆ. ಮಾರ್ಚ್ ಮೊದಲ ವಾರದ ಬಳಿಕವೇ ಈ ಕುರಿತ ಚಟುವಟಿಕೆ ಪ್ರಾರಂಭವಾಗಬಹುದು ಎಂದು ಹೇಳಲಾಗಿದೆ. ಬಿಜೆಪಿ ವರಿಷ್ಠರು ಕೂಡ ಪಂಚರಾಜ್ಯಗಳ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವುದರಲ್ಲಿ ವ್ಯಸ್ತರಾಗಿದ್ದಾರೆ. ಅದರಲ್ಲೂ ಉತ್ತರ ಪ್ರದೇಶ ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದು. ಉತ್ತರ ಪ್ರದೇಶದಲ್ಲಿ ಪುನಃ ಅಧಿಕಾರಕ್ಕೆ ಬರುವುದು ಬಿಜೆಪಿ ಆದ್ಯತೆ. ಹಾಗಾಗಿ ಹೈಕಮಾಂಡ್‌ ಆ ಕಡೆ ಲಕ್ಷ್ಯ ಹರಿಸಿದೆ. ಈ ನಡುವೆಯೂ ಸಂಪುಟದಿಂದ ಯಾರನ್ನು ಬಿಡುಗಡೆಗೊಳಿಸಬಹುದು, ಹೊಸದಾಗಿ ಯಾರನ್ನು ಸೇರಿಸಿಕೊಳ್ಳಬಹುದು ಎಂಬ ಬಗ್ಗೆ ಸಂಭಾವ್ಯರ ಪಟ್ಟಿ ರವಾನಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಬಿಜೆಪಿಗೆ ವರಿಷ್ಠರು ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ.
ಸಂಪುಟ ಪುನಾರಚನೆ: ಶೀಘ್ರದಲ್ಲೇ ದೆಹಲಿಗೆ ಬಸವರಾಜ ಬೊಮ್ಮಾಯಿ!
ರಾಜ್ಯ ಸಂಪುಟದಲ್ಲಿ ಮಹತ್ವದ ಬದಲಾವಣೆ ಮಾಡಲು ಹೈಕಮಾಂಡ್‌ ಈಗಾಗಲೇ ಯೋಚಿಸಿದೆ. ಹಾಲಿ ಸಚಿವರ ಪೈಕಿ 5ರಿಂದ 6 ಮಂದಿಯನ್ನು ಕೈಬಿಟ್ಟು ಪಕ್ಷದ ಸಂಘಟನೆಗೆ ನಿಯೋಜಿಸಲು ಉದ್ದೇಶಿಸಲಾಗಿದೆ. ಹಾಗೆಯೇ ಖಾಲಿಯಿರುವ 4 ಸ್ಥಾನ ಭರ್ತಿಗೆ ತೀರ್ಮಾನ ಕೈಗೊಳ್ಳಲಾಗಿದೆ.

ಅಂದುಕೊಂಡಂತೆ ಈ ಪ್ರಕ್ರಿಯೆ ನಡೆದಿದ್ದರೆ ಈ ಹೊತ್ತಿಗೆ ಬೊಮ್ಮಾಯಿ ಸಂಪುಟಕ್ಕೆ ಹೊಸ ಸ್ಪರ್ಶ ಸಿಕ್ಕಿರುತ್ತಿತ್ತು. ಆದರೆ, ನಾನಾ ಕಾರಣದಿಂದ ಈ ನಿಟ್ಟಿನಲ್ಲಿ ಮುಂದುವರಿಯಲು ಸಾಧ್ಯವಾಗಿಲ್ಲ. ಈ ತಿಂಗಳ ಪ್ರಾರಂಭದಲ್ಲಿ ರಾಜ್ಯ ಬಿಜೆಪಿ ಚಿಂತನ ಬೈಠಕ್‌ ನಡೆಯಬೇಕಿತ್ತು. ನಂದಿ ಬೆಟ್ಟದ ಬಳಿಯ ರೆಸಾರ್ಟ್‌ನಲ್ಲಿ ಈ ಸಭೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದರ ನಡುವೆ ರಾಜ್ಯದಲ್ಲಿ ಕೋವಿಡ್‌ ಕರ್ಫ್ಯೂ ಜಾರಿಯಾಯಿತು. ಜತೆಗೆ ವರಿಷ್ಠರೂ ಈ ಸಭೆಗೆ ಬರಲು ಸಮಯ ನಿಗದಿ ಮಾಡಲಿಲ್ಲ. ಹಾಗಾಗಿ ಬಹು ನಿರೀಕ್ಷಿತ ಚಿಂತನ ಬೈಠಕ್‌ ಕೂಡ ಮುಂದೂಡಿಕೆಯಾಗಿದೆ. ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಚರ್ಚಿಸುವುದು ಸೇರಿದಂತೆ ಉತ್ತಮ ಆಡಳಿತ ನೀಡುವ ಬಗ್ಗೆ ಸಲಹೆ, ಸೂಚನೆ ಕೊಡಲು ಈ ಸಭೆ ಆಯೋಜಿಸಲಾಗಿತ್ತು. ಮುಂಬರುವ ದಿನಗಳಲ್ಲಿ ಮತ್ತೆ ಈ ಕುರಿತ ಸಭೆ ನಿಗದಿಯಾಗಲಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.
ಸಂಪುಟ ಸರ್ಕಸ್: ಸಚಿವ ಸ್ಥಾನಕ್ಕಾಗಿ ರಮೇಶ್ ಜಾರಕಿಹೊಳಿ ಲಾಬಿ?
ಸಂಪುಟ ಲೆಕ್ಕಾಚಾರ
ಮುಂದಿನ ವಿಧಾನಸಭೆ ಚುನಾವಣೆಗೆ ಮೊದಲು ಬಿಬಿಎಂಪಿ, ಜಿಲ್ಲಾ-ತಾಲೂಕು ಪಂಚಾಯಿತಿ ಚುನಾವಣೆಗಳಿವೆ. ಹಾಗಾಗಿ ಇದು ಚುನಾವಣಾ ವರ್ಷ. ಇಂಥ ಸಂದರ್ಭದಲ್ಲಿ ಕೆಲವು ಸಚಿವರನ್ನು ಸಂಪುಟದಿಂದ ಬಿಡುಗಡೆಗೊಳಿಸಿ ಪಕ್ಷದ ಸಂಘಟನೆಗೆ ನಿಯೋಜಿಸುವುದು ಒಂದು ಲೆಕ್ಕಾಚಾರ. ಇಂತಹ ನಾಯಕರ ಅನುಭವ ಬಳಸಿಕೊಂಡು ಕೆಳಹಂತದ ಚುನಾವಣೆಯಲ್ಲಿ ಹೋರಾಡಬಹುದು. ಅದರಿಂದ ಯಶಸ್ಸು ದೊರಕಿದರೆ ಸಾರ್ವತ್ರಿಕ ಚುನಾವಣೆಯಲ್ಲೂಅನುಕೂಲವಾಗಲಿದೆ ಎಂದು ಭಾವಿಸಲಾಗಿದೆ.

ಮತ್ತೊಂದೆಡೆ ಹೊಸ ಉತ್ಸಾಹಿಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿದರೆ ಅಂಥವರು ಮೈಚಳಿ ಬಿಟ್ಟು ಕೆಲಸ ಮಾಡುತ್ತಾರೆ. ಹೊಸದಾಗಿ ಸಚಿವರಾಗುವವರಿಗೆ 1 ವರ್ಷದಷ್ಟು ಅವಧಿ ಮಾತ್ರ ಇರುತ್ತದೆ. ಹಾಗಾಗಿ ಅವರು ಮೊದಲ ದಿನದಿಂದಲೇ ಚುರುಕಾಗಿ ಕೆಲಸ ಮಾಡುವುದು ಅನಿವಾರ್ಯವಾಗುತ್ತದೆ. ಅದರಿಂದ ಸರಕಾರದ ವರ್ಚಸ್ಸು ಹೆಚ್ಚಲಿದೆ ಎನ್ನುವುದು ಇನ್ನೊಂದು ಲೆಕ್ಕಾಚಾರ.



Read more

[wpas_products keywords=”deal of the day sale today offer all”]