Online Desk
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ನಡೆದ ಕೋವಿಡ್-19 ಕುರಿತ ಪರಿಶೀಲನಾ ಸಭೆಯಲ್ಲಿ ಮಕ್ಕಳಿಗೆ ಪ್ರತ್ಯೇಕ ಔಷಧಿ ಕಿಟ್ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿತ ಮಕ್ಕಳ ಕುರಿತು ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು, ಪೋಷಕರಿಗೆ ಧೈರ್ಯ ಹೇಳಬೇಕು, ಔಷಧಿ ಕಿಟ್ ಗಳನ್ನು ನೀಡಬೇಕು, ಮಕ್ಕಳಿಗೆ ಪ್ರತ್ಯೇಕ ಔಷಧಿ ಕಿಟ್ ಸಿದ್ಧಪಡಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕು, ಆಕ್ಸಿಜನ್ ಘಟಕಗಳನ್ನು ಸಜ್ಜುಗೊಳಿಸಿ, ಸಿಬ್ಬಂದಿ ಇಂಧನ ಮೊದಲಾದವುಗಳನ್ನು ಸಿದ್ಧವಿಟ್ಟುಕೊಳ್ಳಬೇಕು, ಆಸ್ಪತ್ರೆಗಳಲ್ಲಿ ಜನರೇಟರುಗಳ ವ್ಯವಸ್ಥೆ ಮಾಡಿಕೊಳ್ಳಬೇಕು, ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಕುರಿತು ಹೆಚ್ಚಿನ ನಿಗಾ ವಹಿಸಬೇಕು, ಲಸಿಕೆ ಅಭಿಯಾನವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಲಹೆ ನೀಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ನಿಯಮಾವಳಿಗಳಂತೆ ಕೋವಿಡ್ ಮಾದರಿ ಪರೀಕ್ಷೆ ನಡೆಸಬೇಕು, ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಬೇಕು, 15 ರಿಂದ 18 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನ ಚುರುಕುಗೊಳಿಸಬೇಕು, ಹೋಮ್ ಐಸೋಲೇಷನ್ ಕಾಲ್ಸ್ ಹೆಚ್ಚಿಸಬೇಕು, ಸಹ ಅಸ್ವಸ್ಥತೆ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಅವಲೋಕಿಸಬೇಕು ಹಾಗೂ ವಿಶ್ವಾಸ ಮೂಡಿಸಬೇಕು ಎಂದು ಸಲಹೆ ನೀಡಲಾಯಿತು ಎಂದು ಅವರು ತಿಳಿಸಿದರು.
Read more
[wpas_products keywords=”deal of the day”]