ಹೈಲೈಟ್ಸ್:
- ಕಾಮಗಾರಿಗೆ ಬೇಕು ಇನ್ನೊಂದು ವಾರ ಸಮಯ..?
- ಒಂದು ವಾರದಲ್ಲಿ ದುರಸ್ತಿಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು
- ದುರಸ್ತಿ ವಿಳಂಬದಿಂದ ವಾಹನ ಸವಾರರು ನಿತ್ಯವೂ ಹೈರಾಣು
101 ಮತ್ತು 102ನೇ ಪಿಲ್ಲರ್ ನಡುವೆ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮೇಲ್ಸೇತುವೆಯನ್ನು ಡಿಸೆಂಬರ್ 25ರಿಂದ ಬಂದ್ ಮಾಡಲಾಗಿದೆ. ಪ್ರಾಧಿಕಾರದ ಮೂಲಗಳ ಪ್ರಕಾರ, ದುರಸ್ತಿ ಕಾಮಗಾರಿ ಮುಗಿದಿದೆ. ಆದರೆ, ಉನ್ನತ ಅಧಿಕಾರಿಗಳ ಪರಿಶೀಲನೆಗಾಗಿ ಕಾಯುತ್ತಿದ್ದು, ಪರಿಶೀಲನೆ ಬಳಿಕವಷ್ಟೇ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ, ಸಂಚಾರ ಪೊಲೀಸ್ ಇಲಾಖೆ ಈ ಬಗ್ಗೆ ದೃಢಪಡಿಸಿಲ್ಲ.
‘ಟ್ರಾಫಿಕ್ ನಿರ್ವಹಣೆ ಸಮಸ್ಯೆಯಾಗುತ್ತಿರುವುದರಿಂದ ಶೀಘ್ರ ಕಾಮಗಾರಿ ಮುಗಿಸುವಂತೆ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ, ಯಾವಾಗ ಕಾಮಗಾರಿ ಮುಗಿಯಲಿದೆ ಎಂಬುದರ ಕುರಿತು ಇನ್ನೂ ಮಾಹಿತಿ ನೀಡಿಲ್ಲ’ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆದ್ದಾರಿ ನಿರ್ವಹಣೆ ಹೊಣೆ ಹೊತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮನವಿ ಮೇರೆಗೆ ಒಂದು ವಾರ ಹೆದ್ದಾರಿ ಬಂದ್ ಮಾಡುತ್ತಿರುವುದಾಗಿ ನಗರ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದರು. ವಾರ ಕಳೆದ ಬಳಿಕ ಇನ್ನಷ್ಟು ಸಮಯ ಬೇಕಾಗಬಹುದು ಎಂದು ಸಂಚಾರ ಪೊಲೀಸ್ ಇಲಾಖೆ ಟ್ವೀಟ್ ಮಾಡಿತ್ತು.
ವಾಹನ ಸವಾರರ ಪರದಾಟ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಫ್ಲೈ ಓವರ್ ಗೊರಗುಂಟೆ ಪಾಳ್ಯದಿಂದ ನಾಗಸಂದ್ರ ಪಾರ್ಲೆ ಜಿ ಕಂಪನಿವರೆಗೆ ಸಂಪರ್ಕಿಸುವ ಸುಲಭ ಮಾರ್ಗವಾಗಿದೆ. ಫ್ಲೈ ಓವರ್ ಮೂಲಕ ಸಾಗಿದಲ್ಲಿ ಸುಮಾರು 5 ಕಿ. ಮೀ. ದೂರವನ್ನು ಟ್ರಾಫಿಕ್ ದಟ್ಟಣೆ ಇಲ್ಲದ ಸಂದರ್ಭದಲ್ಲಿ 10 ನಿಮಿಷದಲ್ಲಿ ಕ್ರಮಿಸಬಹುದು. ಆದರೆ, ಇದೀಗ ದುರಸ್ತಿಗಾಗಿ ಫ್ಲೈ ಓವರ್ ಬಂದ್ ಮಾಡಿರುವುದರಿಂದ 2-3 ಗಂಟೆ ಬೇಕಾಗುತ್ತಿದೆ.
2010ರಲ್ಲಿ ನಿರ್ಮಾಣವಾದ ಈ ಫ್ಲೈಓವರ್ ಮೇಲೆ ನಿತ್ಯ ಸುಮಾರು 50,000 ದಿಂದ 60,000 ವಾಹನಗಳು ಸಂಚರಿಸುತ್ತವೆ. ಬೆಂಗಳೂರು ನಗರದಿಂದ 20 ಜಿಲ್ಲೆಗಳನ್ನು ಸಂಪರ್ಕಿಸುವ ಮಾರ್ಗ ಇದಾಗಿರುವುದರಿಂದ ವಾಹನಗಳ ಸಂಚಾರ ಹೆಚ್ಚಿರುತ್ತದೆ. ಪೀಕ್ ಅವರ್‌ಗಳಲ್ಲಂತೂ ವಿಪರೀತ ವಾಹನಗಳ ದಟ್ಟಣೆ ಇರುತ್ತದೆ. ಹೀಗಾಗಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಇನ್ನೂ ಮುಂದುವರಿದಿದೆ.
ಪರ್ಯಾಯ ಮಾರ್ಗ ಬಳಕೆಗೆ ಹಿಂದೇಟು
ಫ್ಲೈ ಓವರ್ ಕೆಳಗಿನ ರಸ್ತೆಯಲ್ಲಿ ಸಂಚಾರ ದಟ್ಟಣೆಯಾಗುವ ಹಿನ್ನೆಲೆಯಲ್ಲಿ ನೈಸ್ ರಸ್ತೆ ಮುಖಾಂತರ ಮಾಗಡಿ ರಸ್ತೆಯನ್ನು ಬಳಸಲು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಆದರೆ ಈ ಮಾರ್ಗದಲ್ಲಿ ಸಾಗಬೇಕಾದರೆ ಇನ್ನಷ್ಟು ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ ಮತ್ತು ಟೋಲ್ ಶುಲ್ಕ ಕಟ್ಟ ಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಸವಾರರು ಪರ್ಯಾಯ ಮಾರ್ಗದ ಬದಲಾಗಿ ಫ್ಲೈ ಓವರ್ ಕೆಳಗಿನ ರಸ್ತೆಯಲ್ಲೇ ಸಾಗಲು ಮುಂದಾಗುತ್ತಿದ್ದಾರೆ.
ಹೆಚ್ಚುವರಿ ಸಿಬ್ಬಂದಿ ನಿಯೋಜನೆ
ತುಮಕೂರು ರಸ್ತೆಯುದ್ದಕ್ಕೂ ಸಂಚಾರ ವ್ಯವಸ್ಥೆಯಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಪೀಣ್ಯ ಸಂಚಾರ ಪೊಲೀಸ್ ಠಾಣೆಯ 100 ಸಿಬ್ಬಂದಿ ಜೊತೆಗೆ ಅಕ್ಕ ಪಕ್ಕದ ಸಂಚಾರ ಠಾಣೆ ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ.
Read more
[wpas_products keywords=”deal of the day sale today offer all”]