
ದುಬೈ: ಅಬುಧಾಬಿಯಲ್ಲಿ ಸೋಮವಾರ ಮೂರು ತೈಲ ಟ್ಯಾಂಕರ್‌ಗಳ ಮೇಲೆ ಹಾಗೂ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ವಿಸ್ತರಣಾ ಪ್ರದೇಶವೊಂದರ ಮೇಲೆ ಶಂಕಿತ ಡ್ರೋನ್ ದಾಳಿ ನಡೆದ ಬಳಿಕ ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯರ ಸಹಿತ ಮೂವರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಇತರ ಆರು ಮಂದಿ ಗಾಯಗೊಂಡಿದ್ದಾರೆ. ಮೃತ ಇನ್ನೊಬ್ಬ ವ್ಯಕ್ತಿ ಪಾಕಿಸ್ತಾನಿ ಪ್ರಜೆ ಎಂದು ಹೇಳಲಾಗಿದೆ. ಮೃತ ಭಾರತೀಯರ ಗುರುತನ್ನು ಅಬುಧಾಬಿ ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಯಾರಿಂದ ಈ ದಾಳಿ ನಡೆದಿರಬಹುದು ಎಂಬ ಬಗ್ಗೆ ಅಬುಧಾಬಿ ಪೊಲೀಸರು ತಕ್ಷಣಕ್ಕೆ ಯಾರ ಮೇಲೆಯೂ ಶಂಕೆ ವ್ಯಕ್ತಪಡಿಸಿಲ್ಲ. ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ) ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಯೆಮನ್‌ನ ಹೂತಿ ಉಗ್ರರು ಹೇಳಿಕೊಂಡಿದ್ದಾರೆ. ಆದರೆ ಯುಎಇ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ.
ಗಂಭೀರ ಸ್ವರೂಪದ ದಾಳಿಯಲ್ಲ: ಘಟನಾ ಸ್ಥಳದಲ್ಲಿ ಡ್ರೋನ್‌ನ ಭಾಗವೆಂದು ಶಂಕಿಸಲಾದ ಎರಡು ಚಿಕ್ಕ ವಸ್ತುಗಳು ದೊರೆತಿವೆ. ಈ ದಾಳಿಯಿಂದ ಅಂತಹ ದೊಡ್ಡ ಹಾನಿಯೇನೂ ಆಗಿಲ್ಲ ಎಂದು ಅಬುಧಾಬಿ ಪೊಲೀಸರು ನಡೆಸಿದ ಪ್ರಾಥಮಿಕ ಹಂತದ ತನಿಖೆಯಿಂದ ಗೊತ್ತಾಗಿದೆ.
ವಿಶೇಷವೆಂದರೆ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ–ಇನ್ ಅವರು ಯುಎಇ ಗೆ ಭೇಟಿ ನೀಡಿರುವ ಸಂದರ್ಭದಲೇ ಈ ದಾಳಿ ನಡೆದಿದೆ. ದಕ್ಷಿಣ ಕೊರಿಯಾವು ತನ್ನ ಮಧ್ಯಮ ಶ್ರೇಣಿಯ ಭೂಮಿಯಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಯನ್ನು ಯುಎಇಗೆ ಮಾರಾಟ ಮಾಡಲಿದ್ದು, ಅದಕ್ಕಾಗಿ 3.5 ಶತಕೋಟಿ ಡಾಲರ್‌ಗಳ ಒಪ್ಪಂದಕ್ಕೆ ಬರಲಾಗಿದೆ.
2015ರಿಂದೀಚೆಗೆ ಯೆಮನ್‌ನಲ್ಲಿನ ಉಗ್ರರಿಂದ ಯುಎಇ ಮತ್ತು ಸೌದಿ ಅರೇಬಿಯಾಗಳಿಗೆ ಆಗಾಗ ಬೆದರಿಕೆ ಎದುರಾಗುತ್ತಲೇ ಇದೆ. ಆದರೆ ಈ ಎರಡು ಶ್ರೀಮಂತ ರಾಷ್ಟ್ರಗಳು ಇಂತಹ ದಾಳಿಗಳನ್ನು ಅಷ್ಟಾಗಿ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಅತ್ಯಂತ ಬಡತನದಿಂದ ಬೇಯುತ್ತಿರುವ ಯೆಮನ್‌ನಲ್ಲಿ ಮಾತ್ರ ಅಶಾಂತಿಯಿಂದ 1.30 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
Read more from source
[wpas_products keywords=”deals of the day offer today electronic”]