Karnataka news paper

ಮೆಗಾ ಆಕ್ಷನ್‌ನಲ್ಲಿ ಶ್ರೇಯಸ್‌ ಅಯ್ಯರ್‌ ಖರೀದಿಗೆ ಬಲೆ ಬೀಸಿರುವ ಆರ್‌ಸಿಬಿ!


ಹೈಲೈಟ್ಸ್‌:

  • ಮೆಗಾ ಆಕ್ಷನ್‌ಗೂ ಮುನ್ನ ಹೊಸ ತಂಡಗಳ ಪಾಲಾಗುವಲ್ಲಿ ಶ್ರೇಯಸ್‌ ವಿಫಲ.
  • ಹರಾಜಿನಲ್ಲಿ ಅಯ್ಯರ್‌ ಖರೀದಿಸಲು ಆರ್‌ಸಿಬಿ, ಕೆಕೆಆರ್‌ ಮತ್ತು ಪಂಜಾಬ್‌ ಮುಂದಿವೆ.
  • ಬೆಂಗಳೂರಿನಲ್ಲಿ ಫೆ.12-13ರಂದು ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆ.

ಬೆಂಗಳೂರು: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸತತವಾಗಿ ನಾಕ್‌ಔಟ್‌ ಹಂತಕ್ಕೆ ಮುನ್ನಡೆಸಿ ಸೈ ಎನಿಸಿಕೊಂಡಿದ್ದ ಯುವ ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ ಅವರಿಗೆ ಈ ಬಾರಿಯ ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಬೇಡಿಕೆಯಿದೆ.

ಐಪಿಎಲ್‌ 2022 ಟೂರ್ನಿ ಸಲುವಾಗಿವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕಾಯ್ದುಕೊಂಡ ಆಟಗಾರರಲ್ಲಿ ರಿಷಭ್‌ ಪಂತ್‌, ಪೃಥ್ವಿ ಶಾ, ಅಕ್ಷರ್‌ ಪಟೇಲ್‌ ಮತ್ತು ಎನ್ರಿಕ್‌ ನೊರ್ಕಿಯ ಇದ್ದಾರೆ. ರಿಷಭ್ ಪಂತ್‌ ತಂಡದ ನೂತನ ಕ್ಯಾಪ್ಟನ್‌ ಆಗಿರುವ ಕಾರಣ ಕ್ಯಾಪ್ಟನ್ಸಿ ಬಯಸಿ ಡೆಲ್ಲಿ ತಂಡದಿಂದ ಶ್ರೇಯಸ್‌ ಅಯ್ಯರ್‌ ಹೊರಬಂದಿದ್ದರು.

ಇನ್ನು ಹದಿನೈದನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಹೊಸ ಕ್ಯಾಪ್ಟನ್‌ ಸಲುವಾಗಿ ಹುಡುಕಾಟದಲ್ಲಿವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಕೋಲ್ಕತಾ ನೈಟ್‌ ರೈಡರ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಯುವ ಕ್ಯಾಪ್ಟನ್‌ ಶ್ರೇಯಸ್‌ ಅಯ್ಯರ್‌ ಖರೀದಿಗೆ ಬಲೆ ಬೀಸಿವೆ.

‘ಪ್ಲಾನ್‌ ಬಿ’, ಶ್ರೀಲಂಕಾ ಅಥವಾ ದ. ಆಫ್ರಿಕಾದಲ್ಲಿ ಐಪಿಎಲ್‌ 2022 ಆಯೋಜನೆ!

ಅಂದಹಾಗೆ ಮೆಗಾ ಆಕ್ಷನ್‌ಗೂ ಮೊದಲೇ ಶ್ರೇಯಸ್‌ ಅಯ್ಯರ್‌ ಹೊಸ ಫ್ರಾಂಚೈಸಿಗಳಾದ ಲಖನೌ ಅಥವಾ ಅಹ್ಮದಾಬಾದ್‌ ತಂಡಗಳನ್ನು ಸೇರುವ ಸಾಧ್ಯತೆ ಇತ್ತು. ಆದರೆ, ಹೊಸ ತಂಡಗಳು ಶ್ರೇಯಸ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಹಿಂದೇಟಾಕಿರುವುದು ನಾಯಕನ ಹುಡುಕಾಟದಲ್ಲಿರುವ ಆರ್‌ಸಿಬಿ ತಂಡಕ್ಕೆ ದೊಡ್ಡ ವರದಾನದಂತ್ತಾಗಿದೆ. ಐಪಿಎಲ್‌ 2021 ಟೂರ್ನಿಗೂ ಮುನ್ನ ವಿರಾಟ್‌ ಕೊಹ್ಲಿ ಆರ್‌ಸಿಬಿ ತಂಡದ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದರು.

“ವಿರಾಟ್‌ ಕೊಹ್ಲಿ ನಾಯಕತ್ವ ಬಿಟ್ಟ ಬಳಿಕ ಆರ್‌ಸಿಬಿ ತಂಡ ಶ್ರೇಯಸ್‌ ಅಯ್ಯರ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಲೆಕ್ಕಾಚಾರ ಹೊಂದಿದೆ. ಹೀಗಾಗಿ ಮುಂಬೈ ಮೂಲದ ಆಟಗಾರನ ಖರೀದಿಗೆ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಹಣದ ಹೊಳೆ ಹರಿಸುವ ಸಾಧ್ಯತೆ ಇದೆ,” ಎಂದು ಬೆಳವಣಿಗೆಗೆ ಹತ್ತಿರದ ಮೂಲಗಳು ಮಾಹಿತಿ ಹೊರಹಾಕಿವೆ.

ಐಪಿಎಲ್‌ 2022: ಅಹ್ಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್‌!

ವರದಿಗಳ ಪ್ರಕಾರ ಈಗಾಗಲೇ ತಮ್ಮ ಹಾಲಿ ಕ್ಯಾಪ್ಟನ್ಸ್‌ ಸೇವೆ ಕಳೆದುಕೊಂಡಿರುವ ಕೆಕೆಆರ್‌ (ಐಯಾನ್ ಮಾರ್ಗನ್‌) ಮತ್ತು ಪಂಜಾಬ್‌ ಕಿಂಗ್ಸ್‌ (ಕೆಎಲ್‌ ರಾಹುಲ್‌) ಕೂಡ ಹೊಸ ಕ್ಯಾಪ್ಟನ್‌ ಸಲುವಾಗಿ ಹುಡುಕಾಟದಲ್ಲಿವೆ. ಲಖನೌ ಮತ್ತು ಅಹ್ಮದಾಬಾದ್‌ ತಂಡಗಳು ಶ್ರೇಯಸ್‌ ಜೊತೆಗೆ ಒಪ್ಪಂದ ಮಾಡಿಕೊಳ್ಳದೇ ಇರುವ ಹಿನ್ನೆಲೆಯಲ್ಲಿ ಕೆಕೆಆರ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳ ಆಸಕ್ತಿ ಹೆಚ್ಚಾಗಿದೆ.

“ಕೋಲ್ಕತಾ ನೈಟ್‌ ರೈಡರ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಕೂಡ ಆಟಗಾರರ ಹರಾಜಿನಲ್ಲಿ ಶ್ರೇಯಸ್‌ ಖರೀದಿಗೆ ಪೈಪೋಟಿ ನಡೆಸಲಿವೆ,” ಎಂದು ಮೂಲಗಳು ಹೇಳಿವೆ. ವರದಿಗಳ ಪ್ರಕಾರ ಅಹ್ಮದಾಬಾದ್‌ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ಮತ್ತು ಲಖನೌ ತಂಡಕ್ಕೆ ಕೆಎಲ್‌ ರಾಹುಲ್‌ ಕ್ಯಾಪ್ಟನ್‌ ಆಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಐಪಿಎಲ್‌ 2022 ಟೂರ್ನಿ ಸಲುವಾಗಿ ಮೆಗಾ ಆಕ್ಷನ್‌ (ಬೃಹತ್‌ ಮಟ್ಟದ ಆಟಗಾರರ ಹರಾಜು ಪ್ರಕ್ರಿಯೆ) ಬೆಂಗಳೂರಿನಲ್ಲಿ ಫೆಬ್ರವರಿ 12-13ರಂದು ಜರುಗಲಿದೆ.



Read more

[wpas_products keywords=”deal of the day gym”]