ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ನೋಡೋಕೆ ಒಳ್ಳೆಯ ಆಸ್ಪತ್ರೆ ಕಟ್ಟಡವಿದ್ದರೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ನುರಿತ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ನಿತ್ಯ ರೋಗಿಗಳು ಬಲಿಯಾಗುತ್ತಿದ್ದಾರೆ. ತುರ್ತು ಚಿಕಿತ್ಸೆ ಅನಿವಾರ್ಯವಿರುವ ರೋಗಿಯನ್ನು ಐಸಿಯು ಇಲ್ಲ ಎಂಬ ಕಾರಣಕ್ಕೆ ಜನರಲ್ ವಾರ್ಡ್‌ಗೆ ಹಾಕಲಾಗುತ್ತಿದೆ. ನರಸಂಬಂಧಿ ರೋಗಕ್ಕೆ ತುತ್ತಾಗ ರೋಗಿಗಳಿಗೆ ಪರಿಣತ ವೈದ್ಯರು ಇಲ್ಲಿಲ್ಲ. ಈ ಕಾರಣದಿಂದಾಗಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಮಡಿಕೇರಿ ನಿವಾಸಿ ಮಧುಸೂದನ್.
ಹಾಳಾದ ಎಂಆರ್‌ಐ ಸ್ಕ್ಯಾನಿಂಗ್
ಬಡ ರೋಗಿಗಳಿಗೆ ವರದಾನವಾಗಲಿ ಎಂದು ಸರಕಾರ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಎಂಆರ್‌ಐ ಯಂತ್ರ ನೀಡಿದ್ದರೆ, ಅದು ಕೆಟ್ಟು ಹೋಗಿ ಬಡ ರೋಗಿಗಳಿಗೆ ಸಿಗುತ್ತಿಲ್ಲ. ಇದರಿಂದಾಗಿ ತುರ್ತು ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳು ಖಾಸಗಿ ಆಸ್ಪತ್ರೆಗೆ ತೆರಳಿ ದುಬಾರಿ ಹಣ ಪಾವತಿಸಿ ಎಂಆರ್‌ಐ ಸ್ಕ್ಯಾನ್ ಮಾಡಬೇಕಾಗಿದೆ. ಕೈಯಲ್ಲಿ ದುಡ್ಡಿಲ್ಲದೆ ಕಂಗಾಲಾಗಿರುವ ಬಡ ರೋಗಿಗಳು ಸುಮಾರು ಒಂದು ವಾರದಿಂದ ಎಂಆರ್ ಐ ಸ್ಕ್ಯಾನ್ ದುರಸ್ತಿಗಾಗಿ ಕಾಯುತ್ತಿದ್ದಾರೆ.
ಖಾಸಗಿ ಆಸ್ಪತ್ರೆಗೆ ಶಿಫಾರಸಿ ಹಿಂದೇಟು
ನರ ಸಂಬಂಧಿ ರೋಗಕ್ಕೆ ಪರಿಣತ ರೋಗಿಗಳು ಇಲ್ಲದಿದ್ದಾಗ ಆಯುಷ್ಮಾನ್ ಕಾರ್ಡ್ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ರೆಫರೆನ್ಸ್‌ಗೆ ಅವಕಾಶವಿದೆ. ಆದರೆ ಬಡವರು ಅಂಗಲಾಚಿದರೂ ಈ ಲೆಟರ್ ನೀಡದೆ ಸತಾಯಿಸಲಾಗುತ್ತಿದೆ.
ಮೆಡಿಕಲ್ ಸ್ಟೂಡೆಂಟ್‌ಗಳ ಕಾರುಬಾರು
ಐಸಿಯುವಿನಲ್ಲಿ ಸಂಪೂರ್ಣ ಮೆಡಿಕಲ್ ಸ್ಟೂಡೆಂಟ್‌ಗಳೇ ತುಂಬಿ ಹೋಗಿದ್ದು, ಇದೊಂದು ಪ್ರಯೋಗಾಲಯದಂತಾಗಿದೆ. ಈ ವಿದ್ಯಾರ್ಥಿಗಳು ರೋಗಿಗಳ ಬಳಿ ವಿವರಗಳನ್ನು ಕೇಳುತ್ತಾರೆಯೇ ಹೊರತು ಚಿಕಿತ್ಸೆ ಬಗ್ಗೆ ಅವರಲ್ಲಿ ಮಾಹಿತಿಯಿಲ್ಲ. ಜ.12ರಂದು ಮಡಿಕೇರಿಯ ಚಂದ್ರ ಎಂಬವರಿಗೆ ಅನಾರೋಗ್ಯವುಂಟಾಗಿ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸುತ್ತಾರೆ. ಆ ಆಸ್ಪತ್ರೆಯಲ್ಲಿ ರೋಗಿಯನ್ನು ಪರೀಕ್ಷಿಸಿ, ಸಿ.ಟಿ.ಸ್ಕ್ಯಾನ್ ರಿಪೋರ್ಟ್ ನೋಡಿದ ವೈದ್ಯರು ಈ ರೋಗಿಗೆ ಎಂಆರ್‌ಐ ಸ್ಕ್ಯಾನ್ ಮಾಡಿ ತುರ್ತು ಚಿಕಿತ್ಸೆ ನೀಡಬೇಕಾಗುತ್ತದೆ.
ನಮ್ಮ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಇಲ್ಲ ನೀವು ಮಂಗಳೂರಿನ ಜಿಲ್ಲಾ ಆಸ್ಪತ್ರೆ ವೆನ್ಲಾಕ್ ಗೆ ಹೋಗಿ ಎಂದು ಬರೆದು ಕೊಡುತ್ತಾರೆ. ಈ ಹಿನ್ನಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ಇದೇ ಜನವರಿ 12ರಂದು ರಾತ್ರಿ 8 ಗಂಟೆಗೆ ದಾಖಲಾಗುತ್ತಾರೆ. ರೋಗಿಯ ಅನಾರೋಗ್ಯದ ಬಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನೀಡಿದ ಸಿಟಿ ಸ್ಕ್ಯಾನ್ ನ ವರದಿ ಮತ್ತು ಸುಳ್ಯದ ಆಸ್ಪತ್ರೆಯ ವೈದ್ಯರು ಬರೆದು ಕೊಟ್ಟಿರುವ ವರದಿಗಳನ್ನು ವೆನ್ಲಾಕ್ ಆಸ್ಪತ್ರೆಯ ವೈದ್ಯರಿಗೆ ತೋರಿಸಲಾಗಿಗುತ್ತದೆ. ಐಸಿಯು ಬೆಡ್ ಇಲ್ಲದ ಕಾರಣ ಆ ರೋಗಿಯನ್ನು ಜನರಲ್ ವಾರ್ಡ್ ನಲ್ಲಿ ದಾಖಲಿಸಿಕೊಳ್ಳುತ್ತಾರೆ. ಯಾವುದೇ ಪರಿಣತ ವೈದ್ಯರು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡದ ಕಾರಣ ಜ. 13ರಂದು ರೋಗಿ ಸಾವನ್ನಪ್ಪುತ್ತಾರೆ.
ನನ್ನ ಮಾವ ಸಾವನ್ನಪ್ಪಲು ವೆನ್ಲಾಕ್ ಆಸ್ಪತ್ರೆಯ ವೈದ್ಯರೇ ಕಾರಣ. ಅವರಿಗೆ ಸರಿಯಾದ ಚಿಕಿತ್ಸೆ ಅಥವಾ ಇಲ್ಲಿ ಐಸಿಯು ಇಲ್ಲ, ವೈದ್ಯರಿಲ್ಲ ಎಂದು ಹೇಳಿದ್ದರೆ ನಾವು ಬೇರೆ ಕಡೆಗೆ ಕರೆದುಕೊಂಡು ಹೋಗುತ್ತಿದ್ದೆವು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಯುಷ್ಮಾನ್ ಶಿಫಾರಸ್ಸು ಪತ್ರ ಕೊಡಿ ಎಂದು ಇಲ್ಲಿದ್ದ ವೈದ್ಯರು, ಸಿಬ್ಬಂದಿಗಳ ಬಳಿ ಗೋಗರೆದರೂ ಅವರು ಕೊಡಲಿಲ್ಲ. ಇನ್ನು ಮುಂದೆ ಯಾವ ರೋಗಿಗಳಿಗೂ ಈ ರೀತಿ ಆಗಬಾರದು.
ಕಾಂತ, ಸಾವನ್ನಪ್ಪಿದ ರೋಗಿಯ ಅಳಿಯ
Read more
[wpas_products keywords=”deal of the day sale today offer all”]