Karnataka news paper

2021ರಲ್ಲಿ ₹179 ಕೋಟಿ ಆದಾಯ, ನಾಯಕಲ್ಲದಿದ್ದರೂ ಜಾಹೀರಾತು ಮಾರುಕಟ್ಟೆಗೆ ಕೊಹ್ಲಿಯೇ ಕಿಂಗ್‌!



ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಬ್ರ್ಯಾಂಡ್ ಅಂಬಾಸಿಡರ್‌ ವಿರಾಟ್ ಕೊಹ್ಲಿ, ರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕನ ಸ್ಥಾನಕ್ಕೆ ಶನಿವಾರ ಅಚ್ಚರಿಯ ರಾಜೀನಾಮೆ ನೀಡಿದ್ದಾರೆ. ಹೀಗಿದ್ದೂ ಇದರಿಂದ ಅವರು ಪ್ರಮೋಟ್‌ ಮಾಡುತ್ತಿರುವ ಬ್ರ್ಯಾಂಡ್‌ಗಳ ಸಂಖ್ಯೆ ಮತ್ತು ಅವರು ಪಡೆಯುತ್ತಿರುವ ಸಂಭಾವನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎನ್ನುತ್ತಿದ್ದಾರೆ ಜಾಹೀರಾತು ಮಾರುಕಟ್ಟೆಯ ತಜ್ಞರು.

“ವಿರಾಟ್ ಜೊತೆ ದೀರ್ಘಾವಧಿಯ ಪಾಲುದಾರಿಕೆಯಲ್ಲಿರಲು ಪೂಮಾ ಸಂತೋಷಪಡುತ್ತದೆ. ಅವರು ನಾಯಕತ್ವದ ಅತ್ಯುತ್ತಮ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ; ಅವರು ನಾಯಕ ಮತ್ತು ಅಥ್ಲೀಟ್ ಆಗಿ ಅಸಾಧಾರಣ ಪ್ರದರ್ಶನಕಾರರಾಗಿದ್ದಾರೆ,” ಎನ್ನುತ್ತಾರೆ ಪೂಮಾ ಇಂಡಿಯಾ ಮತ್ತು ಆಗ್ನೇಯ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಅಭಿಷೇಕ್ ಗಂಗೂಲಿ. ಜರ್ಮನ್‌ ಮೂಲದ ಸ್ಪೋರ್ಟ್ಸ್ ಬ್ರ್ಯಾಂಡ್ ಜತೆ 2017ರಲ್ಲಿ ಎಂಟು ವರ್ಷಗಳ ಅವಧಿಗೆ 110 ಕೋಟಿ ರೂ. ಒಪ್ಪಂದಕ್ಕೆ ಕೊಹ್ಲಿ ಸಹಿ ಹಾಕಿದ್ದರು. ಈ ಒಪ್ಪಂದ ಈಗಲೂ ಜಾರಿಯಲ್ಲಿದೆ.

2021ರಲ್ಲಿ ಕೊಹ್ಲಿ ಸುಮಾರು 30 ಬ್ರ್ಯಾಂಡ್‌ಗಳ ಜತೆ ಗುರುತಿಸಿಕೊಂಡಿದ್ದು ಅವರ ವಾರ್ಷಿಕ ಗಳಿಕೆ 178.77 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕ್ರೀಡಾ ಉತ್ಪನ್ನಗಳ ಬ್ರ್ಯಾಂಡ್‌ ಪೂಮಾ, ದ್ವಿಚಕ್ರ ಉತ್ಪಾದಕ ಕಂಪನಿ ಹೀರೋ, , ಆಡಿ ಕಾರುಗಳು, ಮಿಂತ್ರಾ, ಅಮೆರಿಕನ್‌ ಟೂರಿಸ್ಟರ್‌, ವಿವೋ ಸ್ಮಾರ್ಟ್‌ಫೋನ್‌, ಹೈಪರೈಸ್‌ ಇವುಗಳಲ್ಲಿ ಪ್ರಮುಖ ಬ್ರ್ಯಾಂಡ್‌ಗಳಾಗಿವೆ. ಇದರ ಜತೆಗೆ ಅವರು ಜವಳಿ ಮತ್ತು ಪರಿಕರಗಳ ಬ್ರ್ಯಾಂಡ್ ವ್ರೊಗ್ನ್‌ನಲ್ಲಿ ಪಾಲನ್ನೂ ಹೊಂದಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಬೃಹತ್‌ ಸಂಖ್ಯೆಯ ಫಾಲೋವರ್‌ಗಳೇ ಆಸ್ತಿ!
“ಬ್ರ್ಯಾಂಡ್‌ಗಳು ಫಾರ್ಮ್‌ಗಾಗಿ ಹುಡುಕುತ್ತಿರುತ್ತವೆ. ಎಲ್ಲಿಯವರೆಗೆ ಕೊಹ್ಲಿ ಮೈದಾನದಲ್ಲಿ ಸಕ್ರಿಯವಾಗಿರುತ್ತಾರೋ, ಪ್ರದರ್ಶನ ನೀಡುತ್ತಿರುತ್ತಾರೋ, ಅಲ್ಲಿಯವರೆಗೆ ಬ್ರ್ಯಾಂಡ್‌ಗಳು ಅವರೊಂದಿಗೆ ಇರುತ್ತವೆ” ಎನ್ನುತ್ತಾರೆ ಸಾಮಾಜಿಕ ನಿರೂಪಕ ಸಂತೋಷ್ ದೇಸಾಯಿ. ಹಿಂದಿನ ನಾಯಕ ಎಂಎಸ್ ಧೋನಿಯೊಂದಿಗೆ ಹೋಲಿಕೆ ಮಾಡಿರುವ ಅವರು, “ಧೋನಿ ಈಗಲೂ ಜಾಹೀರಾತಿನಾದ್ಯಂತ ಗೋಚರಿಸುತ್ತಿದ್ದಾರೆ. ಹಾಗೆಯೇ ಕೊಹ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ,” ಎಂದಿದ್ದಾರೆ. ಅಷ್ಟಲ್ಲದೆ ಆಟಗಾರನಾಗಿ ಕೊಹ್ಲಿ ಹೊಂದಿರುವ ಎತ್ತರವನ್ನು ಸರಿಗಟ್ಟಲು ಈಗಿನ ಕ್ರಿಕೆಟ್ ತಂಡದಲ್ಲಿ ಯಾರೂ ಇಲ್ಲ ಎನ್ನುವುದು ಅವರ ಅಂಬೋಣ.

ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾದ ಐಪಿಎಲ್‌13 ಮತ್ತು ಐಪಿಎಲ್‌14ನ್ನು ಆಧರಿಸಿದ ಟ್ಯಾಮ್‌ ಸ್ಪೋರ್ಟ್ಸ್ ಸೆಲೆಬ್ರಿಟಿ ಎಂಡೋರ್ಸ್‌ಮೆಂಟ್‌ ವರದಿಯ ಪ್ರಕಾರ, ಎರಡೂ ಪಂದ್ಯಾವಳಿಗಳಲ್ಲಿ ಧೋನಿ ಮತ್ತು ಕೊಹ್ಲಿ ಅಗ್ರ ಸೆಲೆಬ್ರಿಟಿಗಳಾಗಿದ್ದರು. ಧೋನಿ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ ಎರಡನೇ ಸ್ಥಾನದಲ್ಲಿದ್ದರು.

ಸ್ಪೋರ್ಟ್ಸ್ ಮಾರ್ಕೆಟಿಂಗ್ ಬ್ಯುಸಿನೆಸ್‌ನ ಉನ್ನತ ಅಧಿಕಾರಿಗಳ ಪ್ರಕಾರ, ಕೊಹ್ಲಿ ಕನಿಷ್ಠ ನಾಲ್ಕೈದು ವರ್ಷಗಳ ಕಾಲ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್ ಜಾಗದಲ್ಲಿ ಇತರರಿಗಿಂತ ಮುಂದಿರುತ್ತಾರೆ.

ಕೊಹ್ಲಿ ಜತೆ ಹಾಗೂ ಈ ಹಿಂದೆ ಎಂಎಸ್‌ ಧೋನಿಗಾಗಿ ಕೆಲವು ಬ್ರ್ಯಾಂಡ್‌ಗಳ ಒಪ್ಪಂದಗಳಲ್ಲಿ ಕೆಲಸ ಮಾಡಿರುವ ಸ್ಪೋರ್ಟ್ಸ್ ಮಾರ್ಕೆಟಿಂಗ್ ಕಂಪನಿ 27th Sports (ಟ್ವೆಂಟಿಸೆವೆಂತ್‌ ಸ್ಪೋರ್ಟ್ಸ್‌) ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗೀತ್ ಶಿರೋಡ್ಕರ್ ಪ್ರಕಾರ, ಸದ್ಯಕ್ಕಂತೂ ಕೊಹ್ಲಿಯ ಬ್ರ್ಯಾಂಡ್ ಮೌಲ್ಯದಲ್ಲಿ ಯಾವುದೇ ಇಳಿಕೆ ಇರುವುದಿಲ್ಲ. “ವಿರಾಟ್ ಅವರ ವ್ಯಕ್ತಿತ್ವವು ಕ್ರಿಕೆಟ್ ಅನ್ನು ಮೀರಿದೆ ಮತ್ತು ಅವರ ಬೃಹತ್ ಸಾಮಾಜಿಕ ಮಾಧ್ಯಮಗಳ ಫಾಲೋವರ್‌ಗಳೇ ಅವರ ಆಸ್ತಿಯಾಗಿದ್ದಾರೆ,” ಎಂದು ಹೇಳಿದ್ದಾರೆ. . “ಇಂದು, ಬ್ರ್ಯಾಂಡ್‌ಗಳು ಕೇವಲ ನಾಯಕತ್ವದ ಟ್ಯಾಗ್‌ ಬದಲು ಡಿಜಿಟಲ್ ಜಗತ್ತಿನಲ್ಲಿ ಅವರ ಪ್ರಭಾವವನ್ನು ನೋಡಿ ರಾಯಭಾರಿಯನ್ನು ಹೆಚ್ಚು ಗೌರವಿಸುತ್ತವೆ,” ಎಂದು ವಿವರಿಸುತ್ತಾರೆ ಅವರು.

ಕೊಹ್ಲಿಯನ್ನು ಪ್ರತಿನಿಧಿಸುವ ಕಾರ್ನೆರ್‌ಸ್ಟೋನ್‌ ಸ್ಪೋರ್ಟ್‌ ಆಂಡ್‌ ಎಂಟರ್‌ಟೈನ್‌ಮೆಂಟ್‌ ಸಹ ಸಂಸ್ಥಾಪಕ ಬಂಟಿ ಸಜ್ದೇಹ್‌ ಮತ್ತು ಕೊಹ್ಲಿ ಪ್ರತಿನಿಧಿಸುವ ಪ್ರಮುಖ ಕಂಪನಿಗಳಾದ ಮಿಂತ್ರಾ ಮತ್ತು ಹೈಪರೈಸ್‌ ಈ ಬಗ್ಗೆ ಕಳುಹಿಸಿದ್ದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆದರೆ ಕೆಲವು ತಜ್ಞರ ವಾದವೇ ಬೇರೆ
ನಾಯಕತ್ವದಿಂದ ಅವರ ನಿರ್ಗಮನವು ಬ್ರ್ಯಾಂಡ್ ಮೌಲ್ಯದ ಮೇಲೆ ಹಂತಹಂತವಾಗಿ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಇನ್ನು ಕೆಲವು ಉನ್ನತ ಅಧಿಕಾರಿಗಳು. “ಕೊಹ್ಲಿ ಕೆಳಗಿಳಿಯುವುದರಿಂದ ಖಂಡಿತವಾಗಿಯೂ ಅವರ ಬ್ರ್ಯಾಂಡ್‌ ಎಂಡೋರ್ಸ್‌ಮೆಂಟ್‌ ಮೇಲೆ ಮತ್ತು ಬೆಲೆ ಎರಡರ ಮೇಲೆಯೂ ಹಂತಹಂತವಾಗಿ ಪರಿಣಾಮ ಬೀರುತ್ತದೆ, ತಕ್ಷಣವೇ ಅಲ್ಲ” ಎಂದು ಜಾಹೀರಾತು ಏಜೆನ್ಸಿ ರಿಡಿಫ್ಯೂಷನ್‌ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ. “ಐತಿಹಾಸಿಕವಾಗಿ, ಭಾರತೀಯ ಕ್ರಿಕೆಟ್‌ನಲ್ಲಿ ಬ್ರ್ಯಾಂಡ್‌ ಎಂಡೋರ್ಸ್‌ಮೆಂಟ್‌ ಸಿಂಹ ಪಾಲು ಯಾವಾಗಲೂ ನಾಯಕನ ಪಾಲಾಗಿದೆ. ಒಂದೋ ಕೊಹ್ಲಿ ಅನುಮೋದಿಸುವ ಬ್ರ್ಯಾಂಡ್‌ಗಳ ಸಂಖ್ಯೆ ಕಡಿಮೆಯಾಗಲಿದೆ ಅಥವಾ ಅವರು ವಿಧಿಸುವ ಶುಲ್ಕಗಳು ಕಡಿಮೆಯಾಗುತ್ತವೆ.”

ಬ್ರ್ಯಾಂಡ್‌ ಪ್ರಮೋಷನ್‌ಗಾಗಿ ಕೊಹ್ಲಿ ದಿನಕ್ಕೆ 7.5 ರಿಂದ 10 ಕೋಟಿ ರೂಪಾಯಿಗಳನ್ನು ಚಾರ್ಜ್‌ ಮಾಡುತ್ತಾರೆ ಎಂದು ಹೇಳಲಾಗಿದೆ.

ಹಾಪರ್ ಇನ್‌ಸ್ಟಾಗ್ರಾಮ್ ರಿಚ್‌ಲಿಸ್ಟ್ 2021ರ ಪ್ರಕಾರ, ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ ಕೊಹ್ಲಿ 5 ಕೋಟಿ ರೂ. ಪಡೆಯುತ್ತಾರೆ. ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 179 ಮಿಲಿಯನ್ (17.9 ಕೋಟಿ) ಮತ್ತು ಟ್ವಿಟರ್‌ನಲ್ಲಿ 46 ಮಿಲಿಯನ್ (4.6 ಕೋಟಿ) ಫಾಲೋವರ್ಸ್‌ ಹೊಂದಿದ್ದಾರೆ. ಸತತ ನಾಲ್ಕು ವರ್ಷಗಳಿಂದ ಅವರು ಭಾರತದ ಅತ್ಯಮೂಲ್ಯ ಸೆಲೆಬ್ರಿಟಿಯಾಗಿದ್ದಾರೆ.

ಡಫ್ & ಫೆಲ್ಪ್ಸ್ ಸೆಲೆಬ್ರಿಟಿ ಬ್ರ್ಯಾಂಡ್ ಮೌಲ್ಯಮಾಪನ ಅಧ್ಯಯನದ ಪ್ರಕಾರ 2020ರಲ್ಲಿ ಕೊಹ್ಲಿಯ ಬ್ರ್ಯಾಂಡ್ ಮೌಲ್ಯ 237.7 ಮಿಲಿಯನ್ ಡಾಲರ್‌ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ನಂ. 1 ಸ್ಥಾನದಲ್ಲಿ ಕೊಹ್ಲಿ ಇದ್ದರೆ, ನಂತರ ಸ್ಥಾನದಲ್ಲಿರುವ ನಟ ಅಕ್ಷಯ್ ಕುಮಾರ್ 118.9 ಮಿಲಿಯನ್ ಡಾಲರ್‌ ಮತ್ತು ರಣವೀರ್ ಸಿಂಗ್ 102.9 ಮಿಲಿಯನ್ ಡಾಲರ್‌ ಬ್ರ್ಯಾಂಡ್‌ ಮೌಲ್ಯ ಹೊಂದಿದ್ದಾರೆ.

ಮೌಲ್ಯವು ಎಂಡೋರ್ಸ್‌ಮೆಂಟ್‌ ಪೋರ್ಟ್‌ಫೋಲಿಯೊಗಳು ಮತ್ತು ವ್ಯಕ್ತಿಗಳ ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ಆಧರಿಸಿದೆ.

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Read more…

[wpas_products keywords=”deal of the day”]