Karnataka news paper

ಪಾನಿಪೂರಿ ತಿನ್ನಲು ಬಂದರೆಂದು ದಲಿತರ ಮನೆಗೆ ನುಗ್ಗಿ ಹಲ್ಲೆ! ಹೊರ ರಾಜ್ಯದಲ್ಲಲ್ಲ.. ನಮ್ಮದೇ ಮೈಸೂರಿನಲ್ಲಿ!


ಹೈಲೈಟ್ಸ್‌:

  • ಮೇಲ್ಜಾತಿಯವರ ಕೇರಿಗೆ ಪಾನಿಪೂರಿ ತಿನ್ನಲು ಬಂದಿದ್ದೇ ತಪ್ಪಾಯ್ತು!
  • ದಲಿತರ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಸವರ್ಣೀಯರು
  • ಬಿಹಾರ, ಉ.ಪ್ರ.ದ ಘಟನೆ ಇದಲ್ಲ, ನಮ್ಮ ರಾಜ್ಯದ ‘ಸಾಂಸ್ಕೃತಿಕ ನಗರಿ’ಯಲ್ಲಿ ನಡೆದ ಕೃತ್ಯ!
  • ಮೈಸೂರಿನ ಅರಸಿನಕೆರೆಯಲ್ಲಿ ನಡೆದಿದೆ ಅಮಾನವೀಯ ಕೃತ್ಯ

ಮೈಸೂರು: ಪಾನಿಪುರಿ ತಿನ್ನಲು ಮೇಲ್ಜಾತಿಯವರ ಕೇರಿಗೆ ಬಂದರು ಎಂದು ದಲಿತರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಅಮಾನವೀಯ ಘಟನೆ ‘ಸಾಂಸ್ಕೃತಿಕ ನಗರಿ’ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ದಲಿತರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಆರು ಮಂದಿ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದ ಮೂರ್ತಿ, ಸಚ್ಚಿನ್‌, ನವೀನ್‌, ಮಹದೇವಸ್ವಾಮಿ, ಚಂದನ್‌, ಸಂತೋಷ್‌ ಬಂಧಿತ ಆರೋಪಿಗಳಾಗಿದ್ದು, ಮೇಲ್ಜಾತಿಯ ಪುಂಡರಿಂದ ಹಲ್ಲೆಗೊಳಗಾಗಿರುವ ಸೌಭಾಗ್ಯ, ದಿಲೀಪ, ಚಂದನ, ಮಧುಕರ, ಪ್ರಸನ್ನ ಎಂಬುವವರು ಮೈಸೂರಿನ ಕೆಆರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆ: ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದ ದಿಲೀಪ, ಪ್ರಸನ್ನ ಮತ್ತು ಮಧುಕರ ಅವರು ಪಾನಿಪುರಿ ತಿನ್ನಲೆಂದು ಗುರುವಾರ ರಾತ್ರಿ 7.30ಕ್ಕೆ ಮೇಲ್ಜಾತಿಯವರೇ ಇರುವ ಬೀದಿಗೆ ತೆರಳಿದ್ದರು. ಅದನ್ನು ಆಕ್ಷೇಪಿಸಿದ್ದ ಮೂರ್ತಿ, ಸಚ್ಚಿನ್‌ ಎಂಬ ಪುಂಡರು ಇವರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಮುಖಂಡರ ಸಮ್ಮುಖದಲ್ಲಿ ಈ ಪ್ರಕರಣ ಹೊರಗೆ ಗೊತ್ತಾಗದಂತೆ ಮುಚ್ಚಿ ಹಾಕಲು ಸಂಧಾನವೂ ನಡೆದಿತ್ತು. ಆದರೆ ಶುಕ್ರವಾರ ಬೆಳಗ್ಗೆ ಆರೋಪಿಗಳಾದ ಮೂರ್ತಿ, ಸಚ್ಚಿನ್‌ ಎಂಬ ಇಬ್ಬರು ಪುಂಡರು ದಿಲೀಪ, ಪ್ರಸನ್ನ ಮತ್ತು ಮಧುಕರ ಅವರ ಮನೆಗೆ ನುಗ್ಗಿ ಮತ್ತೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಡೆಯಲು ಮುಂದಾದ ಸೌಭಾಗ್ಯ ಮತ್ತು ಚಂದನ ಅವರನ್ನೂ ಥಳಿಸಿದ್ದಾರೆ. ಘಟನೆ ಸಂಬಂಧ ಹಲ್ಲೆಗೊಳಗಾದವರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಜಾತಿ ನಿಂದನೆ, ಅವಾಚ್ಯ ಶಬ್ಧಗಳಿಂದ ನಿಂದನೆ, ಕೊಲೆ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲಿ ಕೊರಗ ಸಮುದಾಯದ ಮೆಹಂದಿ ಶಾಸ್ತ್ರದ ವೇಳೆ ಪೊಲೀಸ್ ದಾಳಿ: ಪಿಎಸ್‍ಐ ಸಹಿತ 6 ಸಿಬ್ಬಂದಿ ವಿರುದ್ಧ ಕ್ರಮ
ಉತ್ತರ ಪ್ರದೇಶ, ಬಿಹಾರ ಮುಂತಾದ ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ಇಂತಹ ಅಮಾನವೀಯ ಘಟನೆಗಳು ಕರ್ನಾಟಕದಲ್ಲಿ ಕಡಿಮೆ ಆಗಿದೆ ಎಂದು ಊಹಿಸಲಾಗಿತ್ತು. ಆದರೆ ಒಂದರ ಮೇಲೊಂದರಂತೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತೆ ಮತ್ತೆ ವರದಿಯಾಗುತ್ತಿದ್ದು, 2021ರ ಸಪ್ಟೆಂಬರ್‌ ತಿಂಗಳಿನಲ್ಲಿ ದಲಿತರ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ ಪ್ರಕರಣ, ಕಳೆದ ಡಿಸೆಂಬರ್‌ನಲ್ಲಿ ಕೆಆರ್‌ ಪೇಟೆಯಲ್ಲಿ ಹನುಮ ಜಯಂತಿ ದಿನ ದೇಗುಲ ಪ್ರವೇಶಿಸಿದ್ದಕ್ಕೆ ದಲಿತರ ಮೇಲೆ ಹಲ್ಲೆ, ಎರಡು ವಾರದ ಹಿಂದೆ ಉಡುಪಿಯಲ್ಲಿ ಮದುವೆಯಲ್ಲಿ ಡಿಜೆ ಹಾಕಿದ್ದಕ್ಕೆ ಕೊರಗ ಸಮುದಾಯದ ಮೇಲೆ ಹಲ್ಲೆ ಹೀಗೆ ಇಂತಹ ನೂರಾರು ಪ್ರಕರಣಗಳು ನಮ್ಮದೇ ರಾಜ್ಯದಲ್ಲಿ ಉದಾಹರಣೆಯಾಗಿ ಕಾಣಸಿಗುತ್ತವೆ.

ಇದೀಗ ಮೈಸೂರಿನಲ್ಲಿ ಮತ್ತೊಮ್ಮೆ ದಲಿತರ ಮೇಲೆ ಪಾನಿಪೂರಿ ತಿನ್ನುವ ಕಾರಣಕ್ಕೆ ಮೇಲ್ಜಾತಿಯ ಪುಂಡರು ಹಲ್ಲೆ ನಡೆಸಿದ ಘಟನೆ ವರದಿಯಾಗಿದ್ದು, ನಾವೆಲ್ಲ ಹಿಂದೂ ಒಂದು ಅನ್ನುವವರು ಇಂತಹ ಘಟನೆಗಳು ಆದಾಗ ಸುಮ್ಮನಾಗುತ್ತಾರೆ. ನಮ್ಮ ಕಷ್ಟವನ್ನು ಕೇಳೋರು ಯಾರೂ ಇಲ್ಲ ಎಂಬ ಮಾತುಗಳನ್ನು ಸ್ಥಳೀಯ ದಮನಿತ ಸಮುದಾಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.



Read more

[wpas_products keywords=”deal of the day sale today offer all”]