ಹೈಲೈಟ್ಸ್:
- ತೆರಿಗೆ ಲೂಟಿ ಮಾಡಿರುವ ಹಗರಣದ ಬೇರುಗಳು ರಾಜ್ಯದ ಎಲ್ಲಆರ್‌ಟಿಒ ಕಚೇರಿಗಳಿಗೂ ಹರಡಿರುವ ಅನುಮಾನ
- ಐಷಾರಾಮಿ ಕಾರುಗಳಿಗೆ ಜೀವಿತಾವಧಿ ತೆರಿಗೆ ಕಟ್ಟದೆಯೇ ನೋಂದಣಿ
- ವಾಹನ ಮಾಲೀಕರಿಗೂ ತೆರಿಗೆ ಪಾವತಿಯ ನಕಲಿ ರಶೀದಿ ನೀಡಿ ವಂಚನೆ
ಬೆಂಗಳೂರು: ಸಾರಿಗೆ ಇಲಾಖೆಯ ಕೆಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಹಾಗೂ ಸಿಬ್ಬಂದಿ ಏಜೆಂಟರೊಂದಿಗೆ ಶಾಮೀಲಾಗಿ ಸರಕಾರಕ್ಕೆ ಕೋಟ್ಯಂತರ ತೆರಿಗೆ ವಂಚಿಸಿ ದುಡ್ಡು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ತೆರಿಗೆ ಪಾವತಿಸಿಕೊಳ್ಳದೆಯೇ ಐಷಾರಾಮಿ ಕಾರುಗಳ ನಕಲಿ ನೋಂದಣಿ ಮಾಡಿಕೊಟ್ಟು ಕಮಿಷನ್ ಲೂಟಿ ಮಾಡುತ್ತಿದ್ದಾರೆ. ಈ ರೀತಿ ಸಾವಿರಾರು ಕಾರುಗಳ ಅಕ್ರಮ ನೋಂದಣಿಯಾಗಿದೆ ಎನ್ನಲಾಗಿದೆ.
ರಾಜ್ಯ ಸರಕಾರಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಇಲಾಖೆಗಳಲ್ಲಿ ಸಾರಿಗೆ ಇಲಾಖೆ ಮುಂಚೂಣಿಯಲ್ಲಿದೆ. ಇಲ್ಲಿ ನಡೆದಿರುವ ಕರ್ಮಕಾಂಡಗಳು ಒಂದೊಂದಾಗಿ ಹೊರಬರುತ್ತಿವೆ. ಐಷಾರಾಮಿ ಕಾರುಗಳಿಗೆ ಜೀವಿತಾವಧಿ ತೆರಿಗೆ ಕಟ್ಟದೆಯೇ ನೋಂದಣಿ ಮಾಡಲಾಗುತ್ತಿದೆ. ವಾಹನ ಮಾಲೀಕರಿಗೂ ತೆರಿಗೆ ಪಾವತಿಯ ನಕಲಿ ರಶೀದಿ ನೀಡಿ ವಂಚಿಸಲಾಗಿದೆ.
ಈ ಅಕ್ರಮ ಮೊದಲಿಗೆ ಬಯಲಾಗಿದ್ದು ಕೋರಮಂಗಲ ಆರ್‌ಟಿಒ (ಕೆಎ 01) ಕಚೇರಿಯಲ್ಲಿ. ಆರಂಭದಲ್ಲಿ ಇಲ್ಲಿ 18 ಪ್ರಕರಣಗಳಷ್ಟೇ ಪತ್ತೆಯಾಗಿದ್ದವು. ಈ ಹಗರಣದ ಕುರಿತು ‘ವಿಜಯ ಕರ್ನಾಟಕ’ದಲ್ಲಿ ನ. 7ರಂದು ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಸಾರಿಗೆ ಇಲಾಖೆಯು, ಆಂತರಿಕ ತನಿಖೆ ಶುರು ಮಾಡಿತು. ಹೆಚ್ಚುವರಿ ಸಾರಿಗೆ ಆಯುಕ್ತ (ಕಾರ್ಯಾಚರಣೆ-ದಕ್ಷಿಣ) ನರೇಂದ್ರ ಹೋಳ್ಕರ್ ಅವರು ಕೋರಮಂಗಲ ಸೇರಿದಂತೆ ಇತರೆ ಆರ್‌ಟಿಒ ಅಧಿಕಾರಿಗಳಿಗೆ ವಾಹನಗಳ ನೋಂದಣಿ ಅಕ್ರಮದ ಕುರಿತು ವರದಿ ನೀಡುವಂತೆ ಸೂಚಿಸಿದ ಬಳಿಕ ಒಂದೊಂದೇ ಪ್ರಕರಣ ಬಯಲಿಗೆ ಬರುತ್ತಿದೆ.
ಐಷಾರಾಮಿ ಕಾರುಗಳನ್ನು ನೋಂದಣಿ ಮಾಡಿ ತೆರಿಗೆ ಲೂಟಿ ಮಾಡಿರುವ ಹಗರಣದ ಬೇರುಗಳು ರಾಜ್ಯದ ಎಲ್ಲಆರ್‌ಟಿಒ ಕಚೇರಿಗಳಿಗೂ ಹರಡಿರುವ ಅನುಮಾನ ಮೂಡಿದೆ. ಈ ಅಕ್ರಮವು ದೊಡ್ಡ ಸದ್ದು ಮಾಡುತ್ತಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ. ವಾಹನ ಮಾಲೀಕರಿಂದ ಪಡೆದ ತೆರಿಗೆ ಹಣವನ್ನು ಖಜಾನೆಗೆ ಭರಿಸದೆ ಲಪಟಾಯಿಸಿರುವ ಅಧಿಕಾರಿ, ಸಿಬ್ಬಂದಿ ವರ್ಗದಲ್ಲಿ ನಡುಕ ಹುಟ್ಟಿಸಿದೆ.
ಕೋರಮಂಗಲ 30, ಇಂದಿರಾನಗರದಲ್ಲಿ 60-70
ಜೀವಿತಾವಧಿ ತೆರಿಗೆ ಪಾವತಿಸಿಕೊಳ್ಳದೆಯೇ ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ 30 ಐಷಾರಾಮಿ ಕಾರುಗಳನ್ನು ನೋಂದಣಿ ಮಾಡಲಾಗಿದೆ. ಇಲ್ಲಿ ಇಂಥ ನೂರಾರು ವಾಹನಗಳಿವೆ. ಅದೇ ರೀತಿ ಇಂದಿರಾನಗರ ಆರ್‌ಟಿಒ ಕಚೇರಿಯಲ್ಲಿ 60ರಿಂದ 70 ವಾಹನಗಳನ್ನು ನೋಂದಣಿ ಮಾಡಿ, ತೆರಿಗೆ ವಂಚಿಸಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ ಎಲೆಕ್ಟ್ರಾನಿಕ್ ಸಿಟಿ, ಯಲಹಂಕ ಸೇರಿದಂತೆ ಹಲವೆಡೆ ಅಕ್ರಮಗಳು ನಡೆದಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಐಷಾರಾಮಿ ಕಾರುಗಳ ಮೌಲ್ಯ ಆಧರಿಸಿ ಜೀವಿತಾವಧಿ ತೆರಿಗೆ ವಿಧಿಸಲಾಗುತ್ತದೆ. ವಾಹನ ಮೌಲ್ಯದ ಮೇಲೆ ಶೇ. 18ರಷ್ಟು ತೆರಿಗೆ ಮತ್ತು ಶೇ. 11ರಷ್ಟು ಸೆಸ್ ಪಾವತಿಸಬೇಕಿದೆ. ಏಜೆಂಟರ ಜತೆ ಶಾಮೀಲಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇರೆ ಕಚೇರಿಯಲ್ಲಿ ನೋಂದಣಿಯಾಗಿರುವ ವಾಹನಗಳ ತೆರಿಗೆ ಪಾವತಿಯ ಚಲನ್ ಸಂಖ್ಯೆಯನ್ನು ವಾಹನ್-1 ತಂತ್ರಾಂಶದಲ್ಲಿ ನಮೂದಿಸಿ, ಹಲವು ವಾಹನಗಳನ್ನು ನೋಂದಣಿ ಮಾಡಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ಅನ್ಯ ರಾಜ್ಯಗಳ ಆರ್‌ಟಿಒ ಕಚೇರಿಗಳಲ್ಲಿ ಪಡೆದ ನಿರಾಕ್ಷೇಪಣಾ ಪತ್ರದ ಆಧಾರದ ಮೇಲೆ ವಾಹನಗಳನ್ನು ನೋಂದಣಿ ಮಾಡಿ ಅಕ್ರಮವೆಸಗಿದ್ದಾರೆ.
ನೋಟಿಸ್ ಜಾರಿಯಿಂದ ಮಾಲೀಕರು ಕಂಗಾಲು
ಕೆಲವೊಂದು ಆರ್‌ಟಿಒ ಕಚೇರಿಗಳು ಮಧ್ಯವರ್ತಿಗಳ ಅಡ್ಡೆಗಳಾಗಿವೆ. ಇವರ ಮೂಲಕ ಹೋದರಷ್ಟೇ ಕೆಲಸ ಸುಲಲಿತ. ಹೀಗಾಗಿಯೇ, ಬಹುತೇಕರು ವಾಹನ ನೋಂದಣಿ, ತೆರಿಗೆ ಪಾವತಿ, ಡಿಎಲ್ ನವೀಕರಣ ಸೇರಿದಂತೆ ಇತರೆ ಸೇವೆಗಳಿಗಾಗಿ ಏಜೆಂಟರ ಮೊರೆ ಹೋಗುವಂತಾಗಿದೆ. ಐಷಾರಾಮಿ ಕಾರುಗಳನ್ನು ಖರೀದಿಸಿ ಫ್ಯಾನ್ಸಿ ನಂಬರ್‌ಗಳನ್ನು ಪಡೆದ ಮಾಲೀಕರು ವಾಹನಗಳ ನೋಂದಣಿಗೆ ಮಧ್ಯವರ್ತಿಗಳಿಗೆ ತೆರಿಗೆ ಹಣ ಕೊಟ್ಟು, ಅವರ ವಂಚನೆಯ ಬಲೆಗೆ ಬಿದ್ದು ಪೇಚಿಗೆ ಸಿಲುಕಿ ಹಾಕಿಕೊಂಡಿದ್ದಾರೆ. ಇವರೊಂದಿಗೆ ಶಾಮೀಲಾಗಿರುವ ಆರ್‌ಟಿಒ ಅಧಿಕಾರಿಗಳು, ಸಿಬ್ಬಂದಿಯು ತೆರಿಗೆ ಕಟ್ಟಿಸಿಕೊಳ್ಳದೆಯೇ ವಾಹನಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಆನಂತರ ಎಲ್ಲರೂ ಆ ತೆರಿಗೆ ಹಣವನ್ನು ಹಂಚಿಕೊಂಡಿದ್ದಾರೆ.
ಸಾರಿಗೆ ಇಲಾಖೆಯು ಇದೀಗ ತೆರಿಗೆ ಪಾವತಿಸದೆ ನೋಂದಣಿಯಾಗಿರುವ ವಾಹನಗಳಿಗೆ ಸಂಬಂಧಪಟ್ಟ ಮಾಲೀಕರಿಗೆ ನೋಟಿಸ್ ಜಾರಿ ಮಾಡುತ್ತಿದೆ. ವಾಹನ ನೋಂದಣಿ ಸಂದರ್ಭದಲ್ಲಿ ತೆರಿಗೆ ಕಟ್ಟಿದ್ದಕ್ಕೆ ಪಡೆದ ರಶೀದಿ, ಆರ್‌ಸಿ ಕಾರ್ಡ್ ಸೇರಿದಂತೆ ಇತರೆ ದಾಖಲೆಗಳನ್ನು ಹೊಂದಿರುವ ಮಾಲೀಕರು ನೋಟಿಸ್‌ನಿಂದ ಕಂಗಾಲಾಗಿದ್ದಾರೆ. ತೆರಿಗೆ ಕಟ್ಟದ ಹಿನ್ನೆಲೆಯಲ್ಲಿ ನರೇಂದ್ರ ಹೋಳ್ಕರ್ ನೇತೃತ್ವದ ತಂಡವು ಇತ್ತೀಚೆಗೆ ಹೆಸರಘಟ್ಟ ಬಳಿ 9 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿತ್ತು. ಇದರಲ್ಲಿ ಬೆಂಜ್, ವೋಲ್ವೊ, ಆಡಿ ಸೇರಿದಂತೆ 6 ಕಾರುಗಳು ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿದ್ದವು. 6 ಕಾರುಗಳಿಂದ 1.47 ಕೋಟಿ ರೂ. ತೆರಿಗೆ ವಂಚನೆಯಾಗಿತ್ತು. ಈ ವಾಹನಗಳ ಮಾಲೀಕರು ಸಹ ಮಧ್ಯವರ್ತಿಯೊಬ್ಬನಿಗೆ ತೆರಿಗೆ ಹಣ ಪಾವತಿಸಿ ಮೋಸ ಹೋಗಿರುವುದು ಗೊತ್ತಾಗಿದೆ.
ರಾಗಿಣಿ ಸ್ನೇಹಿತ ರವಿಶಂಕರ್ ಮೇಲೆ ಗುಮಾನಿ
ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿ ಅವರ ಸ್ನೇಹಿತ ಬಿ.ಕೆ.ರವಿಶಂಕರ್ ಸಾರಿಗೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ (ಎಫ್‌ಡಿಎ) ಕಾರ್ಯ ನಿರ್ವಹಿಸುತ್ತಿದ್ದ. ಈತ ಕೋರಮಂಗಲ ಮತ್ತು ಜಯನಗರ ಆರ್‌ಟಿಒ ಕಚೇರಿಯಲ್ಲೂ ಕೆಲಸ ಮಾಡಿದ್ದ. ಅಕ್ರಮ ನೋಂದಣಿಯಲ್ಲಿ ಈತನ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮಾಲೀಕರಿಂದ ತೆರಿಗೆ ಹಣ ಪಡೆದು, ವಾಹನಗಳನ್ನು ನೋಂದಣಿ ಮಾಡಿಸಿಕೊಟ್ಟಿರುವ ಮಧ್ಯವರ್ತಿಗಳು ರವಿಶಂಕರ್‌ನತ್ತ ಬೊಟ್ಟು ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಆಡಿಯೊ ರೆಕಾರ್ಡ್ ‘ವಿಜಯ ಕರ್ನಾಟಕ’ಕ್ಕೆ ಲಭ್ಯವಾಗಿದೆ.
ತೆರಿಗೆ ಕಟ್ಟಿಸಿಕೊಳ್ಳದೆಯೇ ವಾಹನಗಳನ್ನು ನೋಂದಣಿ ಮಾಡಿಕೊಟ್ಟು ಅಕ್ರಮವೆಸಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೆಲ ಆರ್‌ಟಿಒ ಅಧಿಕಾರಿ, ಸಿಬ್ಬಂದಿಗಳು ಏಜೆಂಟರ ಜತೆ ಶಾಮೀಲಾಗಿ ಈ ಕೃತ್ಯ ಎಸಗಿರುವ ಅನುಮಾನವಿದೆ. ತೆರಿಗೆ ಪಾವತಿಸದೆಯೇ ಹೇಗೆ ವಾಹನಗಳನ್ನು ನೋಂದಣಿ ಮಾಡಿದರು ಎಂಬುದನ್ನು ಪತ್ತೆ ಮಾಡಲಾಗುವುದು. ಎಲ್ಲಆರ್‌ಟಿಒ ಕಚೇರಿಗಳಲ್ಲೂ ವಾಹನಗಳ ನೋಂದಣಿ ಮಾಹಿತಿ ಪಡೆದು ಪರಿಶೀಲಿಸಲಾಗುವುದು.
ಎನ್. ಶಿವಕುಮಾರ್, ಸಾರಿಗೆ ಇಲಾಖೆ ಆಯುಕ್ತ