Karnataka news paper

ನಾರಾಯಣ ಗುರು ಸ್ತಬ್ದಚಿತ್ರ ನಿರಾಕರಣೆ: ಕರಾವಳಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ


ಹೈಲೈಟ್ಸ್‌:

  • ಕೇರಳ ಸರ್ಕಾರದ ನಾರಾಯಣ ಗುರು ಸ್ತಬ್ದಚಿತ್ರದ ಪ್ರಸ್ತಾಪವನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ
  • ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕರಾವಳಿಯಲ್ಲೂ ವ್ಯಾಪಕ ಆಕ್ರೋಶ
  • ನಾರಾಯಣ ಗುರು ಚಿತ್ರ ತಿರಸ್ಕರಿಸಿ ಶಂಕರಾಚಾರ್ಯ ಟ್ಯಾಬ್ಲೋ ಸೂಚಿಸಿದ್ದಕ್ಕೆ ವಿರೋಧ
  • ಬಿಲ್ಲವ ಮುಖಂಡರು ಸೇರಿದಂತೆ ಅನೇಕ ಸಂಘಟನೆಗಳಿಂದ ಕೇಂದ್ರದ ನಡೆಗೆ ಅಸಮಾಧಾನ

ಮಂಗಳೂರು: ಹೊಸದಿಲ್ಲಿಯಲ್ಲಿ ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ಸರ್ಕಾರದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ನಿರಾಕರಣೆ ಮಾಡಿರುವುದರ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ನಾನಾ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ನರೇಂದ್ರ ಮೋದಿ ಸರ್ಕಾರ ತನ್ನ ನಿರ್ಧಾರವನ್ನು ಪುನರ್‌ ಪರಿಶೀಲಿಸುವಂತೆ ಆಗ್ರಹಿಸಿವೆ.

ಮಹಾಮಂಡಲ ಖಂಡನೆ: ನಾರಾಯಣ ಗುರುಗಳು ಮೇಲು ಕೀಳು ಎನ್ನುವ ಜಾತಿ ಭೇದ ಹಾಗೂ ಮತ ದ್ವೇಷ ಇರುವ ಸಮಾಜದಲ್ಲಿ ಸರ್ವ ಸಮಾನತೆಯ ಜ್ಞಾನದ ಬೆಳಕಾಗಿ ಅವತರಿಸಿ ಒಂದೇ ಜಾತಿ ಒಂದೇ ಧರ್ಮ ಒಂದೇ ದೇವರು ಎನ್ನುವ ತತ್ವವನ್ನು ಜಗಕ್ಕೆ ಸಾರಿದ ಪರಮ ಗುರುಗಳು. ಕೋಟ್ಯಂತರ ಗುರುದೇವರ ಅನುಯಾಯಿಗಳ ಭಕ್ತಿ ಮತ್ತು ಭಾವನೆಗಳಿಗೆ ಅಗೌರವ ತೋರಿಸಿರುವುದು ವಿಷಾದನೀಯ ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ. ರಾಜಶೇಖರ್‌ ಕೋಟ್ಯಾನ್‌ ಹೇಳಿದ್ದಾರೆ.

ಸನಾತನ ಪರಂಪರೆಗೆ ಅಗೌರವ: ಕೇಂದ್ರ ಸರಕಾರವು ನಾರಾಯಣ ಗುರು ಪ್ರತಿಕೃತಿ ತಿರಸ್ಕರಿಸಿ ಆದಿಶಂಕರಾಚಾರ್ಯರ ಪ್ರತಿಕೃತಿ ಇಡಬೇಕೆಂದು ಸೂಚಿಸಿರುವುದು ಭಾರತದ ಮಹಾನ್‌ ಸಂತರನ್ನು ಕೂಡ ಜಾತೀಯ ತಾರತಮ್ಯದಿಂದ ನೋಡಿದಂತಾಗುತ್ತದೆ ಹಾಗೂ ಭಾರತೀಯ ಸನಾತನ ಪರಂಪರೆಗೆ ನಾವು ಅಗೌರವ ಮಾಡಿದಂತಾಗುತ್ತದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್‌ ಆರ್‌. ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರುಗಳ ಟ್ಯಾಬ್ಲೋ ತಿರಸ್ಕರಿಸಿದ ಕೇಂದ್ರ! ವ್ಯಾಪಕ ಆಕ್ರೋಶ
ಅಪಪ್ರಚಾರ ಸಲ್ಲದು: ಕೇಂದ್ರ ಸರಕಾರ ನಾರಾಯಣ ಗುರು ಪ್ರತಿಕೃತಿ ತಿರಸ್ಕಾರ ಮಾಡಿರುವುದು ಕೋಟ್ಯಂತರ ಗುರುಭಕ್ತರ ಭಾವನೆಗಳಿಗೆ ನೋವುಂಟು ಮಾಡುತ್ತದೆ. ಜಾತಿವಾದಿ ಮತಾಂಧ ಮನಸ್ಥಿತಿಯ ಅಜ್ಞಾನಿಗಳು ದುರುದ್ದೇಶದಿಂದ ಗುರುದೇವರಿಗೆ ಮಾಡಿರುವ ಅಪಚಾರವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ಹೇಳಿದ್ದಾರೆ.

ಯುವವಾಹಿನಿ ಖಂಡನೆ: ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನ ತಿರಸ್ಕರಿಸಿದ್ದು ಸರಿಯಲ್ಲ. ಕೇಂದ್ರ ಸರಕಾರ ಪುನರ್‌ಪರಿಶೀಲಿಸಿ ಅವಕಾಶ ನೀಡಬೇಕೆಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಹೇಳಿದ್ದಾರೆ.

ವಿಚಾರ ವೇದಿಕೆ ಖಂಡನೆ: ದೇಶ ಕಂಡ ಅತ್ಯಂತ ಶ್ರೇಷ್ಠ ದಾರ್ಶನಿಕ, ಸಾಮಾಜಿಕ ಹರಿಕಾರ, ಮಹಾತ್ಮಾ ಗಾಂಧೀಜಿ, ಡಾ ಬಿಆರ್ ಅಂಬೇಡ್ಕರ್ ಅವರಿಂದಲೂ ಪ್ರಶಂಸಿಲ್ಪಟ್ಟ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಪ್ರದರ್ಶಿಸಲು ಕೇರಳ ಸರ್ಕಾರದ ಅನುಮತಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತೇನೆ ಎಂದು ನಾರಾಯಣ ಗುರು ವಿಚಾರ ವೇದಿಕೆ ಮುಖಂಡ ಸತ್ಯಜಿತ್‌ ಸುರತ್ಕಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಾರಾಯಣ ಗುರುಗಳಿಗೆ ಮಾಡಿದ ಅಪಮಾನ ಮಾತ್ರವಲ್ಲ, ಸಂತ ಪರಂಪರೆಗೆ ಮಾಡಿದ ಅಪಮಾನ, ಹಿಂದುಳಿದ ವರ್ಗದ ಸ್ವಾಭಿಮಾನಕ್ಕೆ ಮಾಡಿದ ಅಪಮಾನ. ಕೇಂದ್ರ ಸರ್ಕಾರ ತಕ್ಷಣ ಈ ತಪ್ಪನ್ನು ಸರಿಪಡಿಸಬೇಕು. ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಮಾಡಿದವರು ಕೇವಲ ಮೇಲ್ವರ್ಗದವರನ್ನು ಮಾತ್ರ ಸಂತೈಸುವುದಲ್ಲ, ಹಿಂದುಳಿದ ವರ್ಗದ ಸಂತರಿಗೂ ಗೌರವ ಕೊಡುವುದನ್ನು ಕಲಿಯಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಅಲ್ಲದೇ, ಕೇಂದ್ರ ಸರಕಾರ ಕೂಡಲೇ ನಾರಾಯಣ ಗುರುಗಳ ಪ್ರತಿಕೃತಿಗೆ ಅವಕಾಶ ನೀಡದಿದ್ದಲ್ಲಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಾರಾಯಣ ಗುರು ವಿಚಾರ ವೇದಿಕೆ ಘಟಕಗಳು ಪ್ರತಿಭಟನೆ ನಡೆಸಲಿವೆ ಎಂದು ಅವರು ಎಚ್ಚರಿಸಿದ್ದಾರೆ.



Read more

[wpas_products keywords=”deal of the day sale today offer all”]