ಹೈಲೈಟ್ಸ್:
- ಕೊರೊನಾ ಸೋಂಕಿಗೆ ಬಲಿಯಾದ ವ್ಯಕ್ತಿಗಳ ಕುಟುಂಬಸ್ಥರಿಗೆ ಸಿಗಬೇಕಾದ ಪರಿಹಾರಕ್ಕೆ ತಾಂತ್ರಿಕ ಸಮಸ್ಯೆ
- ಬಹುತೇಕ ಫಲಾನುಭವಿಗಳಿಗೆ 6 ತಿಂಗಳಾದರೂ ಪರಿಹಾರದ ಹಣ ತಲುಪಿಲ್ಲ
- ರಾಜ್ಯದಲ್ಲಿ ಸೋಂಕಿನ ಹರಡುವಿಕೆ ಪ್ರಮಾಣ ಇಳಿಮುಖವಾಗಿದ್ದರೂ ಸಾವು ಸಂಪೂರ್ಣ ಕಡಿಮೆಯಾಗಿಲ್ಲ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಬಲಿಯಾದ ವ್ಯಕ್ತಿಗಳ ಕುಟುಂಬಸ್ಥರಿಗೆ ಸಿಗಬೇಕಾದ ಪರಿಹಾರಕ್ಕೆ ತಾಂತ್ರಿಕ ಸಮಸ್ಯೆಗಳು ಕಗ್ಗಂಟಾಗಿ ಪರಿಣಮಿಸಿದ್ದು, ಬಹುತೇಕ ಫಲಾನುಭವಿಗಳಿಗೆ 6 ತಿಂಗಳಾದರೂ ಪರಿಹಾರದ ಹಣ ತಲುಪಿಲ್ಲ. ಆರೋಗ್ಯ, ಆಹಾರ, ಕಂದಾಯ ಇಲಾಖೆಗಳು ಜಂಟಿಯಾಗಿ ಸಿದ್ಧಪಡಿಸಿದ ಪಟ್ಟಿಗೆ ಜನರು ಸಲ್ಲಿಸಿದ ಅರ್ಜಿಗಳು ತಾಳೆಯಾಗಲು ನಾನಾ ಸಮಸ್ಯೆಗಳು ಎದುರಾಗುತ್ತಿವೆ.
ವಿಳಾಸ ಬದಲು, ಮರಣ ಪ್ರಮಾಣ ಪತ್ರ, ಆಧಾರ್ ಲಿಂಕ್ ಸೇರಿದಂತೆ ನಾನಾ ಸಮಸ್ಯೆಗಳಿಂದಾಗಿ ಪರಿಹಾರ ಹಣ ಪಡೆಯಲು ಫಲಾನುಭವಿ ಕುಟುಂಬಸ್ಥರು ತೀವ್ರ ಫಜೀತಿ ಎದುರಿಸಬೇಕಾಗಿದೆ. ಈ ಕಾರಣಗಳಿಂದಾಗಿ ಸರಕಾರ ಶೇ.50ರಷ್ಟು ಫಲಾನುಭವಿಗಳ ಖಾತೆಗೆ ಪರಿಹಾರ ಹಣ ತಲುಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಉಳಿದವರಿಗೆ ಪರಿಹಾರ ಸಿಗುವುದು ಯಾವಾಗ ಎನ್ನುವಂತಾಗಿದೆ.
ಕೊರೊನಾ 1 ಮತ್ತು 2ನೇ ಅಲೆಗಳಲ್ಲಿ ಮೃತಪಟ್ಟ ವ್ಯಕ್ತಿಗಳ ಬಿಪಿಎಲ್ ಕುಟುಂಬವೊಂದಕ್ಕೆ ರಾಜ್ಯ ಸರಕಾರದಿಂದ 1 ಲಕ್ಷ ರೂ., ಕೇಂದ್ರದಿಂದ 50 ಸಾವಿರ ಹಣ ಸೇರಿ 1.5 ಲಕ್ಷ ರೂ., ಉಳಿದಂತೆ ಎಪಿಎಲ್ ಕಾರ್ಡ್‌ದಾರರಿಗೆ ಕೇಂದ್ರ ಸರಕಾರದ 50 ಸಾವಿರ ರೂ.ಗಳನ್ನು ಪರಿಹಾರವನ್ನಾಗಿ ಘೋಷಿಸಲಾಗಿತ್ತು. ಆದರೆ, ಘೋಷಣೆಗೊಂಡು 6 ತಿಂಗಳಾದರು ಪರಿಹಾರದ ಹಣ ಮಾತ್ರ ಯಾರಿಗೂ ತಲುಪಿಲ್ಲ.
ಪ್ರಕ್ರಿಯೆ ಕಗ್ಗಂಟು
ಆರೋಗ್ಯ ಇಲಾಖೆಯಿಂದ ಎಸ್‌ಆರ್‌ಎಫ್‌ಐಡಿ, ಬಿಯು ಸಂಖ್ಯೆಗನುಗುಣವಾಗಿ ಸೋಂಕಿಗೆ ಬಲಿಯಾದ ವ್ಯಕ್ತಿಗಳ ವಿವರ ಪಡೆದ ಕಂದಾಯ ಇಲಾಖೆ ಆಹಾರ ಇಲಾಖೆಗೆ ರವಾನಿಸಿದೆ. ಈ ವಿವರಗಳಲ್ಲಿ ಬಿಪಿಎಲ್ ಕಾರ್ಡ್‌ದಾರರನ್ನು ಪ್ರತ್ಯೇಕಿಸುವ ಕೆಲಸವನ್ನು ಆಹಾರ ಇಲಾಖೆ ಮಾಡುತ್ತಿದೆ. ಆ ಬಳಿಕ ಕಂದಾಯ ಇಲಾಖೆ ಸಿಬ್ಬಂದಿ ಆಯಾ ತಹಸೀಲ್ದಾರರ ನೇತೃತ್ವದಲ್ಲಿ ಕಾರ್ಯನಿರ್ವಹಿಸಿ ಮೃತಪಟ್ಟ ಸೋಂಕಿತರ ಕುಟುಂಬಸ್ಥರ ಪರಿಶೀಲನೆ ನಡೆಸಿ ಪಟ್ಟಿ ಸಿದ್ಧಪಡಿಸಬೇಕಿತ್ತು. ಈ ನಡುವೆ ಜನರಿಂದ ಅರ್ಜಿಯನ್ನು ಸಂಗ್ರಹಿಸಿದ್ದು, ಒಟ್ಟಾರೆ ತಾಳೆ ನಡೆಸಿ ಅಂತಿಮ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಆದರೆ ಈ ಪಟ್ಟಿಯಲ್ಲೂ ಅನೇಕ ತಾಂತ್ರಿಕ ದೋಷಗಳಿದ್ದು, ಪರಿಹಾರ ವಿತರಣೆಗೆ ಅಡ್ಡಿಯುಂಟಾಗಿದೆ ಎನ್ನುತ್ತಿದ್ದಾರೆ ಅಧಿಕಾರಿಗಳು.
ಬಲಿಯಾಗುವುದು ನಿಂತಿಲ್ಲ
ರಾಜ್ಯದಲ್ಲಿ ಸೋಂಕಿನ ಹರಡುವಿಕೆ ಪ್ರಮಾಣ ಇಳಿಮುಖವಾಗಿದ್ದರೂ ಸಾವು ಸಂಪೂರ್ಣ ಕಡಿಮೆಯಾಗಿಲ್ಲ. ನಿತ್ಯ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಡಿ.7ರಂದು 6, ಡಿ.8ರಂದು 6, ಡಿ.9ರಂದು 4, ಡಿ.10ರಂದು 2, ಡಿ.11ರಂದು 2, ಡಿ.12ರಂದು 4 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಮಾನದಂಡಗಳ ಉರುಳು
ಕೊರೊನಾ ಸೋಂಕಿತರ ಪರಿಹಾರ ಪಡೆಯಲು ಮಾನದಂಡಗಳೇ ಅಡ್ಡಿಯಾಗಿವೆ. ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕಾದವರು ಸೋಂಕು ದೃಢವಾದ ಬಿಯು ನಂಬರ್, ವ್ಯಕ್ತಿಯ ಮರಣ ಪ್ರಮಾಣ ಪತ್ರ, ಆಧಾರ್ ಪ್ರತಿ, ಮೃತ ವ್ಯಕ್ತಿಯುಳ್ಳ ಬಿಪಿಎಲ್ ಕಾರ್ಡ್, ಗುರುತಿನ ಚೀಟಿ, ಅರ್ಜಿದಾರರ ಬ್ಯಾಂಕ್ ಖಾತೆ ವಿವರ, ಸ್ವಯಂ ಘೋಷಣಾ ಫಾರಂ-2 ನೀಡಬೇಕಾಗುತ್ತದೆ. ಆದರೆ, ಈ ದಾಖಲೆಗಳಲ್ಲಿ ಮರಣ ದೃಢೀಕರಣ ಪತ್ರ ಪಡೆಯುವುದೇ ಅನೇಕರಿಗೆ ದೊಡ್ಡ ಸವಾಲಾಗಿದೆ. ಸೋಂಕಿನ ನಡುವೆ ಅನೇಕ ಸಾವುಗಳಿಗೆ ಕೊರೊನಾ ಕಾರಣ ಎನ್ನುವ ಪ್ರಸ್ತಾಪವನ್ನೇ ಮಾಡದ ಉದಾಹರಣೆಗಳಿದ್ದು, ಕೆಲ ಕುಟುಂಬಗಳು ಪರಿಹಾರದಿಂದ ಹೊರಗುಳಿಯಲಿವೆ.