Karnataka news paper

ಇಂಗ್ಲೆಂಡ್‌ ಹುಟ್ಟಡಗಿಸಿ ‘ದಿ ಆ್ಯಷಸ್‌’ ಟ್ರೋಫಿ ಗೆದ್ದ ಆಸ್ಟ್ರೇಲಿಯಾ!


ಹೈಲೈಟ್ಸ್‌:

  • ಪ್ರವಾಸಿ ಇಂಗ್ಲೆಂಡ್‌ ಎದುರು ದಿ ಆ್ಯಷಸ್‌ ಟೆಸ್ಟ್‌ ಸರಣಿ ಗೆದ್ದ ಆಸ್ಟ್ರೇಲಿಯಾ.
  • ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸೀಸ್‌ಗೆ 4-0 ಅಂತರದ ಭರ್ಜರಿ ಜಯ.
  • ಕಾಂಗರೂ ಪಡೆಗೆ ಅಂತಿಮ ಟೆಸ್ಟ್‌ ಪಂದ್ಯದಲ್ಲಿ 146 ರನ್‌ಗಳ ಭರ್ಜರಿ ಗೆಲುವು.

ಹೊಬಾರ್ಟ್‌: ದಿ ಆ್ಯಷಸ್‌ ಟೆಸ್ಟ್‌ ಕ್ರಿಕೆಟ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರಾಬಲ್ಯ ಮುಂದುವರಿದಿದೆ. ಪ್ರವಾಸಿ ಇಂಗ್ಲೆಂಡ್‌ ಎದುರು ಐದನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ 146 ರನ್‌ಗಳ ಭರ್ಜರಿ ಜಯ ದಾಖಲಿಸಿದ ಕಾಂಗರೂ ಪಡೆ 5 ಟೆಸ್ಟ್‌ಗಳ ಸರಣಿಯನ್ನು 4-0 ಅಂತರದಲ್ಲಿ ಗೆದ್ದುಕೊಂಡಿತು.

ಇಲ್ಲಿನ ಬೆಲಿರೀವ್‌ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ಅಂತ್ಯಗೊಂಡ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ತನ್ನ ಎರಡನೇ ಇನಿಂಗ್ಸ್‌ನಲ್ಲೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. 271 ರನ್‌ಗಳ ಗುರಿ ಬೆನ್ನತ್ತಿದ್ದ ಜೋ ರೂಟ್‌ ಬಳಗ 38.5 ಓವರ್‌ಗಳಲ್ಲಿ 124 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಯಿತು. ಓಪನರ್‌ಗಳಾದ ರೋರಿ ಬರ್ನ್ಸ್‌ (26) ಮತ್ತು ಝಾಕ್‌ ಕ್ರಾವ್ಲೀ (36) ಹೊರತಾಗಿ ಉಳಿದ ಯಾವ ಬ್ಯಾಟ್ಸ್‌ಮನ್‌ಗಳಿಂದಲೂ ಪ್ರತಿರೋಧ ವ್ಯಕ್ತವಾಗಲಿಲ್ಲ.

ಪ್ಯಾಟ್‌ ಕಮಿನ್ಸ್‌ (42ಕ್ಕೆ 3), ಸ್ಕಾಟ್‌ ಬೋಲೆಂಡ್‌ (18ಕ್ಕೆ 3), ಕ್ಯಾಮರೂನ್‌ ಗ್ರೀನ್‌ (21ಕ್ಕೆ 3) ಮತ್ತು ಮಿಚೆಲ್‌ ಸ್ಟಾರ್ಕ್‌ (30ಕ್ಕೆ 1) ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಇಂಗ್ಲೆಂಡ್‌ ಮತ್ತೊಂದು ಅಲ್ಪ ಮೊತ್ತಕ್ಕೆ ಗಂಟೂಮೂಟೆ ಕಟ್ಟಿತು.

ಆಫ್ರಿಕಾ ವಿರುದ್ಧ ಭಾರತದ ಟೆಸ್ಟ್‌ ಸರಣಿ ಸೋಲಿಗೆ 5 ಪ್ರಮುಖ ಕಾರಣಗಳು!

ಮಾರ್ಕ್‌ ವುಡ್‌ ಮಿಂಚಿನ ದಾಳಿ
ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 155 ರನ್‌ಗಳ ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಇಂಗ್ಲೆಂಡ್‌ ಯಶಸ್ವಿಯಾಗಿತ್ತು. ವೇಗಿ ಮಾರ್ಕ್‌ ವುಡ್‌ ತಮ್ಮ ಶ್ರೇಷ್ಠ ಬೌಲಿಂಗ್‌ ದಾಳಿ ಸಂಘಟಿಸಿ 37ಕ್ಕೆ 6 ವಿಕೆಟ್‌ ಉರುಳಿಸಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ಸ್ಟುವರ್ಟ್‌ ಬ್ರಾಡ್‌ 51ಕ್ಕೆ 3 ವಿಕೆಟ್‌ ಸಂಪಾದಿಸಿದರು. ಆಸ್ಟ್ರೇಲಿಯಾ ಪರ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಕೇರಿ (49) ಗರಿಷ್ಠ ರನ್‌ ಸ್ಕೋರರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 303 ರನ್‌ಗಳಿಗೆ ಆಲ್‌ಔಟ್‌ (ಟ್ರಾವಿಸ್‌ ಹೆಡ್‌ 101, ಕ್ಯಾಮರೂನ್‌ಗ್ರೀನ್‌ 74; ಸ್ಟುವರ್ಟ್‌ ಬ್ರಾಡ್‌ 59ಕ್ಕೆ 3).
ಇಂಗ್ಲೆಂಡ್‌: ಪ್ರಥಮ ಇನಿಂಗ್ಸ್‌ 188 ರನ್‌ಗಳಿಗೆ ಆಲ್‌ಔಟ್‌ (ಕ್ರಿಸ್‌ ವೋಕ್ಸ್‌ 36; ಪ್ಯಾಟ್‌ ಕಮಿನ್ಸ್‌ 45ಕ್ಕೆ 4).
ಆಸ್ಟ್ರೇಲಿಯಾ: ಎರಡನೇ ಇನಿಂಗ್ಸ್‌ 155ಕ್ಕೆ ಆಲ್‌ಔಟ್‌ (ಅಲೆಕ್ಸ್‌ ಕೇರಿ 49; ಮಾರ್ಕ್‌ ವುಡ್‌ 37ಕ್ಕೆ 6).
ಇಂಗ್ಲೆಂಡ್‌: ದ್ವಿತೀಯ ಇನಿಂಗ್ಸ್‌ 124 ರನ್‌ಗಳಿಗೆ ಆಲ್‌ಔಟ್‌ (ಝಾಕ್‌ ಕ್ರಾವ್ಲೀ 36; ಸ್ಕಾಟ್‌ ಬೋಲೆಂಡ್‌ 18ಕ್ಕೆ 3, ಕ್ಯಾಮೆರೂನ್‌ ಗ್ರೀನ್‌ 21ಕ್ಕೆ 3).
ಪಂದ್ಯ ಮತ್ತು ಸರಣಿ ಶ್ರೇಷ್ಠ: ಟ್ರಾವಿಸ್‌ ಹೆಡ್‌

ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌, ಎರಡು ಶತಕಗಳನ್ನು ಒಳಗೊಂಡ 357 ರನ್‌ಗಳನ್ನು ಬಾರಿಸಿ ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದರು.

ಭಾರತ ಟೆಸ್ಟ್‌ ತಂಡದ ನಾಯಕತ್ವ ತ್ಯಜಿಸಿ ಶಾಕ್‌ ನೀಡಿದ ಕೊಹ್ಲಿ!

5-0 ಗೆಲುವು ಕೈಚೆಲ್ಲಿದ ಆಸೀಸ್‌
ಬ್ರಿಸ್ಬೇನ್‌, ಅಡಿಲೇಡ್‌, ಮೆಲ್ಬೋರ್ನ್‌ ಮತ್ತು ಹೊಬಾರ್ಟ್‌ ಟೆಸ್ಟ್‌ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಜಯ ದಾಖಲಿಸಿತು. ಆದರೆ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ನ ಕೊನೆಯ ವಿಕೆಟ್‌ ಪಡೆಯಲು ಸಾಧ್ಯವಾಗದೇ ಹೋದ ಕಾರಣ 5-0 ಅಂತರದಲ್ಲಿ ಸರಣಿ ಗೆಲ್ಲುವ ಅವಕಾಶ ಕೈ ಚೆಲ್ಲಿತು. ಇಂಗ್ಲೆಂಡ್‌ ಆತಿಥ್ಯದಲ್ಲಿ ನಡೆದ ಕಳೆದ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಇತ್ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಿ 2-2 ಅಂತರದ ಸಮಬಲ ಸಾಧಿಸಿದ್ದವು.



Read more

[wpas_products keywords=”deal of the day gym”]