Karnataka news paper

ಪ್ಯಾರಾ ಥ್ರೋಬಾಲ್ ಪಟುಗಳಿಗೆ ಮೈಸೂರು ನಗರದಲ್ಲಿ ತರಬೇತಿ


ಹೈಲೈಟ್ಸ್‌:

  • ರಾಷ್ಟ್ರಮಟ್ಟದ ಪ್ಯಾರಾ ಥ್ರೋ ಬಾಲ್ ಟೂರ್ನಿ ತಮಿಳುನಾಡಿನ ಈರೋಡ್‌ನಲ್ಲಿ ನಡೆಯಲಿದೆ.
  • ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ಪ್ಯಾರಾ ಥ್ರೋಬಾಲ್ ಪಟುಗಳನ್ನು ಗುರುತಿಸಲಾಗಿದೆ.
  • ಮಹಿಳೆ ಮತ್ತು ಪುರುಷರ ತಲಾ ಮೂರು ತಂಡ ರಚಿಸಿ 48 ಮಂದಿಗೆ ತರಬೇತಿ ನೀಡಲಾಗುತ್ತಿದೆ.

ಎಂ. ನಂಜುಂಡಸ್ವಾಮಿ ಮೈಸೂರು: ಪ್ಯಾರಾ ಒಲಿಂಪಿಕ್ಸ್‌ಗೆ ಥ್ರೋಬಾಲ್ ಸೇರ್ಪಡೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಪ್ಯಾರಾ ಥ್ರೋಬಾಲ್ ಫೆಡರೇಷನ್ ಆಫ್‌ ಇಂಡಿಯಾ ಅಸ್ತಿತ್ವಕ್ಕೆ ಬಂದಿದ್ದು, ಪ್ಯಾರಾ ಥ್ರೋಬಾಲ್ ಪಟುಗಳನ್ನು ಸ್ಪರ್ಧೆಗೆ ಅಣಿಗೊಳಿಸಲಾಗುತ್ತಿದೆ.

ಶಿವಮೊಗ್ಗ, ಮೈಸೂರು, ದಾವಣಗೆರೆ, ಹಾವೇರಿ, ಬಾಗಲಕೋಟೆ, ಬೆಳಗಾವಿ, ರಾಯಚೂರು, ವಿಜಯಪುರ, ಹೊಸಪೇಟೆಯಿಂದ ಪ್ಯಾರಾ ಥ್ರೋಬಾಲ್ ಪಟುಗಳನ್ನು ಗುರುತಿಸಲಾಗಿದೆ. ಸಿಟ್ಟಿಂಗ್, ಸ್ಟ್ಯಾಡಿಂಗ್ ಮತ್ತು ವ್ಹೀಲ್‌ಚೇರ್ ಥ್ರೋ ಬಾಲ್ ಎಂಬ ಮೂರು ವಿಭಾಗದಲ್ಲಿ ಮಹಿಳೆ ಮತ್ತು ಪುರುಷರ ತಲಾ ಮೂರು ತಂಡ ರಚಿಸಿ 48 ಮಂದಿಗೆ ತರಬೇತಿ ನೀಡಲಾಗುತ್ತಿದೆ.

ಪ್ಯಾರಾ ಒಲಿಂಪಿಕ್ಸ್‌ಗೆಪ್ಯಾರಾ ಥ್ರೋ ಬಾಲ್ ಸೇರಿಸಬೇಕೆಂಬ ಅಂತಾರಾಷ್ಟ್ರೀಯ ವಿಶೇಷಚೇತನ ಕ್ರೀಡಾಪಟುಗಳ ಕೂಗಿಗೆ ಕರ್ನಾಟಕದ ವಿಶೇಷಚೇತನ ಕ್ರೀಡಾಪಟು ಗಳು ದನಿಗೂಡಿಸಿದ್ದರು. ಹೀಗಾಗಿ ಪ್ಯಾರಾ ಒಲಿಂಪಿಕ್ ಕಮಿಟಿ ಆ್ ಇಂಡಿಯಾ ಸಂಸ್ಥಾಪಕ, ಅರ್ಜನ ಪ್ರಶಸ್ತಿ ಪುರಸ್ಕೃತ ಎಂ. ಮಹಾದೇವ ಅವರ ಮಾರ್ಗದರ್ಶನದಲ್ಲಿ ಮೈಸೂರಿನವರೇ ಆದ ರಾಮಚಂದ್ರ, ಆರ್.ಮಂಜುನಾಥ್, ಗಣೇಶ್ ಈಶ್ವರ್ ಭಟ್ ಸೇರಿ ಪ್ಯಾರಾ ಥ್ರೋಬಾಲ್ ಫೆಡರೇಷನ್ ಆ್ ಇಂಡಿಯಾ ಸಂಸ್ಥೆ ಆರಂಭಿಸಿದ್ದಾರೆ. ಇದಕ್ಕೆ ನೆರೆ ರಾಜ್ಯದ ವಿಶೇಷಚೇತನ ಕ್ರೀಡಾ ಸಂಘಟನೆಗಳು ಅನುಮೋದಿಸಿವೆ.

ಕಾಡಂಚಿನ ಹುಡುಗರ ತ್ರಿವಿಕ್ರಮ ಸಾಧನೆ: ವಾಲಿಬಾಲ್‌ನಲ್ಲಿ ಸತತ 2ನೇ ಬಾರಿ ಚಾಂಪಿಯನ್‌

“ಸದ್ಯಕ್ಕೆ ದೇಶದಲ್ಲಿ ಇದೊಂದೇ ನೋಂದಾಯಿತ ಪ್ಯಾರಾ ಥ್ರೋ ಬಾಲ್ ಸಂಘಟನೆಯಾಗಿದೆ. ತೆಲಂಗಾಣ, ಉತ್ತರಾಖಾಂಡ, ಗುಜರಾತ್, ಹರಿಯಾಣ ಮತ್ತು ತಮಿಳುನಾಡಿನ ಪ್ಯಾರಾ ಥ್ರೋ ಬಾಲ್ ತಂಡಗಳು ಮಾನ್ಯತೆಗಾಗಿ ಫೆಡರೇಷನ್‌ಗೆ ಅರ್ಜಿ ಸಲ್ಲಿಸಿವೆ. ಮೈಸೂರಿನಲ್ಲಿ ತರಬೇತಿ ಶುರುವಾದಂತೆ ಈ ರಾಜ್ಯಗಳಲ್ಲಿಯೂ ಪ್ಯಾರಾ ಒಲಿಂಪಿಕ್ಸ್ ಕನಸಿನೊಂದಿಗೆ ತರಬೇತಿ ಆರಂಭವಾಗಿದೆ. ಈ ರಾಜ್ಯಗಳೆಲ್ಲ ಸೇರಿ ರಾಷ್ಟ್ರಮಟ್ಟದ ಪ್ಯಾರಾ ಥ್ರೋ ಬಾಲ್ ಪಂದ್ಯಾವಳಿ ಸಂಘಟಿಸುತ್ತಿವೆ,” ಎಂದು ಫೆಡರೇಷನ್ ಗೌರವಾಧ್ಯಕ್ಷ ಕೂಡ ಆದ ಎಂ. ಮಹಾದೇವ ತಿಳಿಸಿದ್ದಾರೆ.

ರಾಷ್ಟ್ರಮಟ್ಟದ ಪ್ಯಾರಾ ಥ್ರೋ ಬಾಲ್ ಪಂದ್ಯಾವಳಿ ಅತಿಥ್ಯವನ್ನು ತಮಿಳುನಾಡಿನ ತಂಡ ವಹಿಸಿಕೊಂಡಿದ್ದು, ಫೆಬ್ರವರಿಯಲ್ಲಿ ಈರೋಡ್‌ನಲ್ಲಿ ಪಂದ್ಯ ನಡೆಯಲಿದೆ.

ಆರ್ಥಿಕ ಬಲ ತುಂಬಲು ಮನವಿ
ದೂರದೃಷ್ಟಿ, ಛಲ ಮತ್ತು ಆತ್ಮಬಲ ಹೊಂದಿರುವ ಫೆಡರೇಷನ್‌ಗೆ ಆರ್ಥಿಕ ಬಲ ತುಂಬಬೇಕಿದೆ. ದೈಹಿಕ ನ್ಯೂನತೆ ಮೆಟ್ಟಿನಿಂತು ಆತ್ಮಬಲವನ್ನೇ ನಂಬಿ ಕಣಕ್ಕಿಳಿಯವ ವಿಶೇಷ ಕ್ರೀಡಾಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯವಿದೆ. ಕ್ರೀಡಾ ಸಚಿವರು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಕ್ರೀಡಾಭಿಮಾನಿಗಳು ನೆರವಿಗೆ ಬರಬೇಕೆಂದು ಫೆಡರೇಷನ್ ಮನವಿ ಮಾಡಿದೆ.

ಸ್ಟೇಟ್ ಬಾಸ್ಕೆಟ್‌ಬಾಲ್‌: ಬ್ಯಾಂಕ್‌ ಆಫ್ ಬರೋಡಾ ಚಾಂಪಿಯನ್!

“ಮೊದಲ ಹಂತದಲ್ಲಿ ಸಹಾಯಕ್ಕೆ ಧಾವಿಸಿರುವ ಸುತ್ತೂರು ಮಠದ ಜೆಎಸ್‌ಎಸ್ ವಿಶೇಷ ಚೇತನರ ಪಾಲಿಟ್ನೆಕ್ ಕಾಲೇಜು 48 ಮಂದಿ ಪ್ಯಾರಾ ಥ್ರೋ ಬಾಲ್ ಪಟುಗಳಿಗೆ ಉಚಿತವಾಗಿ ಊಟ, ವಸತಿ ಸೇರಿ ತರಬೇತಿ ಮತ್ತು ಅಭ್ಯಾಸಕ್ಕೆ ಕ್ರೀಡಾಂಗಣ ಒದಗಿಸಿದೆ. ಇಷ್ಟು ಮಂದಿಗೆ ವೀಲ್ಹ್‌ ಚೇರ್ ನೀಡಲು ರೋಟರಿ ವೆಸ್ಟ್ ಸಂಸ್ಥೆ ಮುಂದೆ ಬಂದಿದೆ. ಕ್ರೀಡಾ ಪಟುಗಳಿಗೆ ಸಮವಸ, ಕ್ರೀಡಾ ಪರಿಕರ, ಸಾರಿಗೆ ವೆಚ್ಚ ಮತ್ತು ತಂಡದ ನಿರ್ವಹಣೆಗೆ ಕ್ರೀಡಾಸಕ್ತರು ಯಾವ ರೀತಿಯಲ್ಲಾದರೂ ಪ್ರೋತ್ಸಾಹಿಸಬಹುದು,” ಎಂದು ಫೆಡರೇಷನ್‌ನ ಅಧ್ಯಕ್ಷ ರಾಮಚಂದ್ರ ಮತ್ತು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮನವಿ
ಮಾಡಿದ್ದಾರೆ.

  • ಪ್ಯಾರಾ ಏಷಿಯನ್ ಗೇಮ್, ಪ್ಯಾರಾ ಒಲಿಂಪಿಕ್ಸ್‌ಗೆ ರಾಜ್ಯದ ಪ್ಯಾರಾ ಥ್ರೋ ಬಾಲ್ ತಂಡ ಅಣಿಗೊಳಿಸುವುದು ಹಾಗೂ ದೇಶದಲ್ಲಿ ಪ್ಯಾರಾ ಥ್ರೋ ಬಾಲ್ ಬೆಳೆಸುವ ಉದ್ದೇಶದಿಂದ ಸಮಾನ ಮನಸ್ಕ ವಿಶೇಷಚೇತನರು ಸೇರಿ ಪ್ಯಾರಾ ಥ್ರೋ ಬಾಲ್ ಫೆಡರೇಷನ್ ಆ್ ಇಂಡಿಯಾ ಆರಂಭಿಸಿದ್ದೇವೆ. ಕ್ರೀಡಾಭಿಮಾನಿಗಳು ಪೋಷಿಸಬೇಕೆಂದು ಮನವಿ ಮಾಡುತ್ತೇವೆ.

– ರಾಮಚಂದ್ರ, ಫೆಡರೇಷನ್ ಅಧ್ಯಕ್ಷ.

  • ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತ ಪ್ರತಿನಿಧಿಸಲಿರುವ ಪ್ಯಾರಾ ಥ್ರೋ ಬಾಲ್ ತಂಡಕ್ಕೆ ಮೈಸೂರು ಭಾಗದ ಕನಿಷ್ಠ 4 ಮಂದಿ ಆಯ್ಕೆಯಾಗಬೇಕೆಂಬುದು ನಮ್ಮ ಇರಾದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುತ್ತಿದ್ದೇವೆ.

– ಆರ್.ಮಂಜುನಾಥ್, ಫೆಡರೇಷನ್ ಪ್ರಧಾನ ಕಾರ್ಯದರ್ಶಿ

  • ಸರಕಾರದಿಂದ ಸಲವತ್ತು ಪಡೆಯಬೇಕಾದರೆ ಮಾನ್ಯತೆ ಪಡೆದಿರಬೇಕು. ಇದಕ್ಕಾಗಿ ಪ್ಯಾರಾ ಥ್ರೋ ಬಾಲ್ ಫೆಡರೇಷನ್ ಆಫ್‌ ಇಂಡಿಯಾ ಅರ್ಜಿ ಸಲ್ಲಿಸಿದ್ದು, ಮಾನ್ಯತೆ ಕೊಡಿಸುವ ಪ್ರಯತ್ನದಲ್ಲಿದ್ದೇವೆ.

– ಎಂ.ಮಹಾದೇವ ಸಂಸ್ಥಾಪಕ, ಪ್ಯಾರಾ ಒಲಿಂಪಿಕ್ ಕಮಿಟಿ ಆಫ್‌ ಇಂಡಿಯಾ.



Read more

[wpas_products keywords=”deal of the day gym”]