Karnataka news paper

ಗಡಿಪಾರು ನಿರ್ಧಾರ ಎತ್ತಿಹಿಡಿದ ಕೋರ್ಟ್: ನೊವಾಕ್ ಜೊಕೊವಿಚ್‌ಗೆ ಹಿನ್ನಡೆ


ಸಿಡ್ನಿ: ಎರಡನೇ ಬಾರಿಗೆ ತಮ್ಮ ವೀಸಾವನ್ನು ಹಿಂತೆಗೆದುಕೊಂಡ ನಂತರ ಜಗತ್ತಿನ ನಂ. 1 ಟೆನಿಸ್‌ ಆಟಗಾರ ನೊವಾಕ್ ಜೊಕೊವಿಚ್ ಮತ್ತೆ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದರು.

ಆದರೆ, ಈ ಬಗ್ಗೆ ಇಂದು ತೀರ್ಪು ನೀಡಿರುವ ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ಆಸ್ಟ್ರೇಲಿಯಾ ಸರ್ಕಾರದ ಗಡಿಪಾರು ನಿರ್ಧಾರವನ್ನು ಎತ್ತಿ ಹಿಡಿದಿದೆ.

ನೊವಾಕ್ ಆಸ್ಟ್ರೇಲಿಯಾ ಓಪನ್‌ನಲ್ಲಿ ಸ್ಪರ್ಧಿಸುವ ಅವಕಾಶವನ್ನು ಉಳಿಸಿಕೊಳ್ಳುವ ಕೊನೆಯ ಪ್ರಯತ್ನದಲ್ಲಿ ತೊಡಗಿದ್ದರು. ಆದರೆ, ಈಗ ಬಂದಿರುವ ಕೋರ್ಟ್‌ ಆದೇಶದಿಂದ ಅವರಿಗೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿರುವ ಪುರಾವೆಗಳನ್ನು ನೀಡದ ಹಿನ್ನೆಲೆಯಲ್ಲಿ ಜೊಕೊವಿಚ್ ವೀಸಾ ರದ್ದಾಗಿದ್ದು, ಲಸಿಕೆ ಪಡೆಯದ ಅವರು ಸಮುದಾಯಕ್ಕೆ ಅಪಾಯವನ್ನು ತಂದೊಡ್ಡಬಹುದು ಎಂಬ ಕಾರಣವನ್ನು ಆಸ್ಟ್ರೇಲಿಯಾ ಸರ್ಕಾರ ನೀಡಿದೆ.

ಜೊಕೊವಿಚ್ ಅವರನ್ನು ಗಡಿ ಕಾವಲು ಪಡೆಗಳು ಶನಿವಾರ ಮಧ್ಯಾಹ್ನ 2 ಗಂಟೆಯವರೆಗೆ ಅವರ ವಕೀಲರ ಕಚೇರಿಯಲ್ಲಿ ಇರಿಸಿಕೊಳ್ಳಲು ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.

ಒಬ್ಬ ನ್ಯಾಯಾಧೀಶರ ಬದಲಿಗೆ ಪೂರ್ಣ ನ್ಯಾಯಾಧೀಶರ ಸಮಿತಿಯು ಪ್ರಕರಣದ ವಿಚಾರಣೆ ನಡೆಸುವಂತೆ ಜೊಕೊವಿಚ್ ಅವರ ಕಾನೂನು ತಂಡವು ಮನವಿ ಮಾಡಿತ್ತು. ಆದರೆ, ವಲಸೆ ಸಚಿವರ ಪರ ವಕೀಲರು ಈ ಪ್ರಸ್ತಾವನೆಯನ್ನು ವಿರೋಧಿಸಿದ್ದರು.

ಶುಕ್ರವಾರ, ಫೆಡರಲ್ ಸರ್ಕ್ಯೂಟ್ ಮತ್ತು ಫ್ಯಾಮಿಲಿ ಕೋರ್ಟ್‌ನ ನ್ಯಾಯಾಧೀಶ ಆಂಥೋನಿ ಕೆಲ್ಲಿ ಅವರು ಜೊಕೊವಿಚ್ ಅವರ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಅವರನ್ನು ಗಡೀಪಾರು ಮಾಡದಂತೆ ಸರ್ಕಾರಕ್ಕೆ ಆದೇಶಿಸಿದ್ದರು. ಇದಕ್ಕೂ ಕೆಲ ಗಂಟೆಗಳ ಹಿಂದಷ್ಟೆ, ವಲಸೆ ಸಚಿವ ಅಲೆಕ್ಸ್ ಹಾಕ್ ಅವರು ‘ಆರೋಗ್ಯ ಮತ್ತು ಸುವ್ಯವಸ್ಥೆ’ಆಧಾರದ ಮೇಲೆ ಜೊಕೊವಿಚ್ ಅವರ ವೀಸಾವನ್ನು ಹಿಂತೆಗೆದುಕೊಂಡಿದ್ದರು. ಈ ಕ್ರಮವು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದರು.

ಈ ಮಧ್ಯೆ, ಸೋಮವಾರ ಬೆಳಿಗ್ಗೆ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿ ಪ್ರಾರಂಭವಾಗುತ್ತದೆ. ಜೊಕೊವಿಚ್ ಅವರು ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ದಾಖಲೆಯ ಒಂಬತ್ತು ಬಾರಿ ಗೆದ್ದಿದ್ದಾರೆ.



Read more from source

[wpas_products keywords=”deals of the day offer today electronic”]