Karnataka news paper

ಸುಕ್ರಜ್ಜಿಯ ಪದಗಳ ಹದದೊಳಗೆ.. ಸುಕ್ರಿ ಬೊಮ್ಮ ಗೌಡ ಜೊತೆ ಆಪ್ತ ಮಾತು– ವಿಶೇಷ ಲೇಖನ


(83 ವರ್ಷದ ಸುಕ್ರಜ್ಜಿ ಕಣ್ಣಲ್ಲಿ ಹೊಳಪು ತುಂಬಿಕೊಂಡು, ಧ್ವನಿಯಲ್ಲಿ ಜೋಷ್‌ ತುಂಬಿಕೊಂಡು ತಮ್ಮ ಹೋರಾಟದ ದಿನಗಳ ಕತೆ ಹೇಳುತ್ತಿದ್ದರೆ ನಾವು ಕಿವಿಯಾಗಿದ್ವಿ. ಮೈಯೆಲ್ಲ ಕಿವಿಯಾಗಿದ್ವಿ)

*****

‘ಎಂತ ಹೇಳ್ತಿ? ನಮ್ಮನೇಲಿ ಸಾವು… ಅವರ ಮನೇಲಿ, ಇವರ ಮನೇಲಿನೂ ಹಂಗೆ ಆಗಕೂಡದು. ನಾನು ಮಗನ್ನ ಕಳಕೊಂಡೆ. ಉಳಿದವರ ಮನೇಲೂ ಕಳಕೊಬೇಕಾ? ನನ್ನ ಸೊಸೆ ವಿಧವೆಯಾದ್ಲು. ಮೊಮ್ಮಕ್ಕಳು ಅಪ್ಪನ ಕಳಕೊಂಡ್ರು. ಕಣ್ಬಿಟ್ಟರೆ ಇವರ ಕಣ್ಣೀರು… ಇನ್ನಿಂಥ ಸಂಕಟ ಉಳಿದವರು ಅನುಭವಿಸಬಾರದು ಅಂತನಿಸಿತು. ಎದ್ನಿಂತೆ. ಕಳ್ಳಬಟ್ಟಿ ಸಾರಾಯಿ ಊರ ಸಮೀಪ ಬೇಡವೆಂದರೆ ಬೇಡ ಅಂತ ಹಟ ಹಿಡಿದೆ’

83 ವರ್ಷದ ಸುಕ್ರಜ್ಜಿ ಕಣ್ಣಲ್ಲಿ ಹೊಳಪು ತುಂಬಿಕೊಂಡು, ಧ್ವನಿಯಲ್ಲಿ ಜೋಷ್‌ ತುಂಬಿಕೊಂಡು ತಮ್ಮ ಹೋರಾಟದ ದಿನಗಳ ಕತೆ ಹೇಳುತ್ತಿದ್ದರೆ ನಾವು ಕಿವಿಯಾಗಿದ್ವಿ. ಮೈಯೆಲ್ಲ ಕಿವಿಯಾಗಿದ್ವಿ.

ಸುಕ್ರಿ ಬೊಮ್ಮಗೌಡ. ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯ ಬಡಿಗೇರಿಯಲ್ಲಿರುವ ಅವರ ಮನೆಗೆ ಹೋದಾಗ ಎದುರಾದದ್ದೇ ಬಾಗಿಲಿಗೆ ಇಳಿಬಿಟ್ಟಿದ್ದ ಮುತ್ತಿನ ಸರಗಳ ಸ್ವಾಗತ.

ಮಂಚದ ಮೇಲೆ ಹಗುರವಾಗಿ ಅಡ್ಡವಾಗಿದ್ದ ಸುಕ್ರಜ್ಜಿ, ಹುಬ್ಬಳ್ಳಿಯಿಂದ ಬಂದ್ವಿ ಅಂತ ಕೇಳುತ್ತಲೇ ಉಪಚರಿಸಿದರು. ಅವರ ಪಕ್ಕದಲ್ಲಿದ್ದ ನೆಬುಲೈಸರ್‌ನ ಮಾಸ್ಕ್‌ ಅನ್ನು ದಿಂಬಿನ ಪಕ್ಕ ಜರುಗಿಸಿದರು. ನಗುನಗುತ್ತಲೇ ಮಾತನಾಡಲು ಆರಂಭಿಸಿದರು.

ಪ್ರಯಾಣದಿಂದಾಗಿ ಸುಸ್ತಾದಂತಿದ್ದ ಮಗಳು ಅರ್ನಿ ಅಲ್ಲಿರುವ ಕುರ್ಚಿಗೆ ತಲೆಯಾನಿಸಿ ನಿದ್ದೆಗಿಳಿದಾಗ, ‘ಕಣ್ಣಾರಲೆ, ಬಾಲೆ, ಮಲಗಿ ನಿದ್ರಿಸು, ಬಾನಿನಡಿಯ ತಾರೆ, ಈ ಬಾಲೆ ಕಣ್ಮುಚ್ಚಿ ಮಲಗು’ ಅಂತ ಎರಡು ಸಾಲು ಹೆಣೆದು ಹಾಡಿಯೇ ಬಿಟ್ಟರು.

ಆ ಪದದೊಳಗಿನ ಹದವನ್ನು ಅರಿಯುವಾಗಲೇ, ತಮ್ಮ ಜೀವನಕ್ಕಿಳಿದರು. ಹೆಣ್ಮಕ್ಕಳ ಬದುಕು ಯಾವತ್ತಿದ್ದರೂ ಸಂಘರ್ಷದ್ದು.

ನನ್ನ ಯಜಮಾನರು ತೀರಿ ಹೋದಾಗ ನನ್ನ ಮಗ ಸಣ್ಣವಿದ್ದ. ನನ್ನ ಮಗ ತೀರಿದಾಗ, ಅವನ ಮಕ್ಕಳೂ ಸಣ್ಣವರು. ಇದಕ್ಕೆಲ್ಲ ಮೂಲ ಸಾರಾಯಿ ಅಂತಲೇ ಅದನ್ನು ನಿರ್ಮೂಲನೆ ಮಾಡಬೇಕು ಅಂತ ಹಟ ತೊಟ್ಟೆ.

ಹಗಲನ್ನಲಿಲ್ಲ, ರಾತ್ರಿಯೆನ್ನಲಿಲ್ಲ ಹೋರಾಟಕ್ಕೆ ನಿಂತೆ. ಜಗಳ ಮಾಡಿದೆ. ದೆಹಲಿಗೂ ಹೋಗಿಬಂದೆ. ಹೆಬ್ಬಾರ್‌ ಅವರು ನಮ್ಮೊಟ್ಟಿಗೆ ಹೋರಾಟಕ್ಕೆ ಇಳಿದ್ರು. ಒಂದು ಶಕ್ತಿ ಬಂತು. ಸಾರಾಯಿ ಮಾಡುವುದು, ಮಾರಾಟ ಮಾಡುವುದು ಎರಡೂ ನಿಂತು ಹೋಯಿತು.

ಸಾರಾಯಿ ಕುಡಿದವರೆಲ್ಲ ಮನೆಯ ಹೆಣ್ಣುಮಕ್ಕಳಿಗೆ ಹೊಡೀತಿದ್ರು, ಬಡೀತಿದ್ರು. ಬಾಯಲಿ ಅನ್ನಕಾಗ್ದು ಅಂತ ಬೈಗುಳ ಬೈತಿದ್ರು. ನೀವೆಲ್ಲ ಓದಿದೋರು, ಅವನ್ನೆಲ್ಲ ಕೇಳಿ ಗೊತ್ತಿದೆಯೋ ಇಲ್ವೊ? ಬಾಯ್ಬಿಟ್ಟರೆ ನಾವು ಬೈಗುಳ ತಿಂದು ಬದುಕುವಂತಾಗಿತ್ತು. ನಮ್ದು ಜೀವನ ಅಲ್ವಾ? ಜೀವ ಅಲ್ವಾ? ಹೆಣ್ಮಕ್ಕಳಿಗೆ ಮರ್ಯಾದಿ ಕೊಡಬೇಕು ಕಣವ್ವಾ. ಕೂಸಿನ್ನ ಹೆರಂಗಿಲ್ಲೇನು? ದೇವರ ಕೆಲಸ ಅಲ್ಲೇನದು? ಪೊರೆಯುವುದಿಲ್ಲೇನು? ಗದ್ದೆ, ಕಾನು, ಎರಡೂ ಕಡೆ ಹೋಗುದಿಲ್ಲೇನು? ಈ ಬುದ್ಧಿ ಹೇಳಬೇಕಿತ್ತು… ಅನ್ನುತ್ತಲೇ ಶಿವ, ಶಿವೆಯ ಹಾಡು ಹೇಳಿದರು. ⇒9ನೇ ಪುಟಕ್ಕೆ…

ಕ್ಯಾಮೆರಾ ಆಚೆ ಬಂದೊಡನೆ, ಮಣಿ ಸರ ಹಾಕಿಕೊಂಡರು. ಹಾಲಕ್ಕಿ ಹಾಡುಗಳನ್ನು ಸಂಗ್ರಹಿಸಿದ, ಆಕಾಶವಾಣಿಯಲ್ಲಿ ಹಾಡಿದ ಅನುಭವ ಹಂಚಿಕೊಂಡ್ರು. ಸುಕ್ರಜ್ಜಿ, ಹುಷಾರಿಲ್ದಾಗ ಎಂತ ಹಟ ಮಾಡಿ, ಆಸ್ಪತ್ರೆ ವಾಸ ಬ್ಯಾಡಂದ್ರಿ ಅಂತ ಕೇಳಿದೆವು.

‘ಹೋಗುವ ಟೈಮು ಬಂದ್ರೆ, ಒಂದರೆ ಗಳಿಗೆ ನಿಲ್ಲಕಾಗ್ದು. ಇರೂವರೆಗೂ ನಮ್ಮ ನಮ್ಮ ಕೆಲಸ ಮಾಡ್ಕೊಂಡು, ಹಾಡ್ಕೊಂಡು ಬದುಕಬೇಕು. ಇನ್ನೊಬ್ಬರ ಕೈ ಆಳಾಗಿ ಬದುಕಬಾರದು. ಅಲ್ಲೆಂತ ಮಾಡೂದು? ಮಲಗೂದೆಯಾ… ಹಂಗೆ ಮಲಗೂದು ಒಮ್ಮೆನೆ. ಇರುವವರೆಗೂ ಎಚ್ಚರವಾಗಿರಬೇಕು ಅಂತ್ಹೇಳಿ ಮಗುವಿನಂತೆ ನಕ್ಕರು.

ಕೋಳಿಮರಿ ಬೇಕೇನ.. ಹಾಡು ಕಲೀತಿಯೇನ? ಶಾಲೇಲಿ ಹಾಡು ಕಲಿಸ್ತಾರೇನ? ಅಂತೆಲ್ಲ ಅರ್ನಿಗೆ ಕೇಳಿದ್ರು. ಗದ್ದೇಲಿ ಕೆಲಸ ಮಾಡಬೇಕು. ಬೆಳೀಬೇಕು. ಕಾನೊಳಗೆ ಇರಬೇಕು ಎಲ್ಲ ಮುಗಿದಾಗ ಮಲಗಬೇಕು. ಅಲ್ಲಾ… ಅಂದ್ರು.

ಹಾಲಕ್ಕಿ ಸಮುದಾಯದ ಸಾಂಸ್ಕೃತಿಕ ಕೊಂಡಿ ಒಂದು ತನ್ನ ಬದುಕಿನ ಹದವನ್ನೆಲ್ಲ ಪದಕಟ್ಟಿ ಹಾಡು ಹಾಡಿ, ಇಳಿಸಂಜೆಯೊಳಗೂ ಎಚ್ಚರ ಇರುವ ಮಾತಾಡಿದಾಗ ಕಣ್ತುಂಬಿ ಬಂದಿದ್ದವು. ಮನೆಯಲ್ಲಿ ತೊಟ್ಟಿಲ ತುಂಬ ಗಂಧದ ಹೂವಿನ ಹಾರಗಳಿದ್ದವು. ಈ ಗಂಧದಂತಹ ಜೀವ, ತನ್ನ ಸುತ್ತ ಆ ಮಾಧುರ್ಯ ಹರಡಿತ್ತು.

ಬರುವಾಗ ಸುಕ್ರಜ್ಜಿಯ ಸರ, ಮಣಿಸಾಲು, ಆ ಮಣಿಸಾಲಿನೊಳಗಿರುವ ಹೋರಾಟದ ಕತೆಗಳು, ಸಂಘರ್ಷದ ಕವಿತೆಗಳು, ಸಮಾನತೆಯ ತತ್ವಗಳು ಎಲ್ಲವೂ ಒಂದಕ್ಕೊಂದು ಪೇರಿಸಿದಂತಿದ್ದವು. ಸುಕ್ರಜ್ಜಿ ನೂರು ದೀವಳಿಗೆಯ ದೀಪ ಬೆಳಗಲಿ. ಆ ಅರಿವಿನ ಕುಡಿ ಎಲ್ಲರೊಳಗೂ ಮೂಡಲಿ ಅಂತನಿಸಿದ್ದು ಸುಳ್ಳಲ್ಲ.

ಸುಕ್ರಿ ಬೊಮ್ಮ ಗೌಡ

ಸುಕ್ರಿ ಬೊಮ್ಮ ಗೌಡ ಹೆಸರಿನ ಹಾಲಕ್ಕಿ ಸಮಾಜದ ಸಾಂಸ್ಕೃತಿಕ ರಾಯಭಾರಿ ಸುಕ್ರಜ್ಜಿ ಅಂತಲೇ ಪರಿಚಿತ. ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ವಿಭಾಗದಲ್ಲಿ ಐದು ವರ್ಷ ಹಾಲಕ್ಕಿ ಸಮುದಾಯದ ಆಹಾರ, ಉಡುಪು, ಹಾಡು ಮುಂತಾದ ಸಾಂಸ್ಕೃತಿಕ ವಿಷಯಗಳನ್ನು ತಿಳಿಸಿಕೊಟ್ಟ ಅತಿಥಿ ಉ‍ಪನ್ಯಾಸಕಿ. ಧಾರವಾಡ ಆಕಾಶವಾಣಿ ಕೇಂದ್ರದಲ್ಲಿಯೂ ಇವರ ಧ್ವನಿ ಮುದ್ರಿಕೆಗಳಿವೆ. ಜನಪದ ಲೋಕವೂ ಹಾಲಕ್ಕಿ ಸಮುದಾಯದ ಹಾಡುಗಳನ್ನೆಲ್ಲ ಸಂಗ್ರಹಿಸಿ ಇರಿಸಿದೆ.

ಕರ್ನಾಟಕದ ಹಾಲಕ್ಕಿ ಸಮುದಾಯದ ಸಾಂಸ್ಕೃತಿಕ ದಾಖಲೀಕರಣಕ್ಕೆ ಮೂಲ ಸಂಪನ್ಮೂಲವ್ಯಕ್ತಿಯಂತಿರುವ ಈ ಹಿರಿಯ ಜೀವ, ಬಡಿಗೇರಿಯ ತನ್ನ ಮನೆಯಲ್ಲಿ ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ಸರಳವಾಗಿ ಬದುಕುತ್ತಿದ್ದಾರೆ. ಮಾತುಮಾತಿಗೆ ಹಾಡು ಹೇಳುತ್ತ, ನಗೆ ಹರಡುತ್ತಲೇ ಬದುಕಿನ ಸತ್ಯಗಳನ್ನು ಸತ್ವಗಳನ್ನೂ ಹೇಳುತ್ತಾರೆ.



Read more from source

[wpas_products keywords=”deal of the day sale today kitchen”]