Karnataka news paper

ಚಳಿಗಾಲದ ಅಧಿವೇಶನ: ಒಂಬತ್ತು ಮಸೂದೆ ಮಂಡನೆಗೆ ಸಹಮತ


ಬೆಳಗಾವಿ (ಸುವರ್ಣ ವಿಧಾನಸೌಧ): ಇದೇ 24ರವರೆಗೆ ನಡೆಯುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಒಂಬತ್ತು ಮಸೂದೆಗಳ ಮಂಡನೆಗೆ ಸೋಮವಾರ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ.

ಇನ್ನೂ ಎರಡು ಮಸೂದೆ ಮಂಡಿಸುವುದಾಗಿ ಸರ್ಕಾರ ಹೇಳಿದೆ. ಆದರೆ, ಮಸೂದೆಯ ವಿವರಗಳನ್ನು ಹಂಚಿಕೊಂಡಿಲ್ಲ. ಒಂಬತ್ತು ಮಸೂದೆಗಳ ವಿವರಗಳನ್ನು ಮಾತ್ರ ಸಭೆಯಲ್ಲಿ ಒದಗಿಸಲಾಯಿತು. ಉಳಿದ ಎರಡು ಮಸೂದೆಗಳ ವಿವರಗಳನ್ನು ನಂತರ ಒದಗಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಮತಾಂತರ ನಿಷೇಧ ಮಸೂದೆ ಮಂಡನೆ ಕುರಿತು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ರಹಸ್ಯವಾಗಿರಿಸಿರುವ ಎರಡು ಮಸೂದೆಗಳಲ್ಲಿ ಅದೂ ಸೇರಿರಬಹುದು ಎಂದು ವಿರೋಧ ಪಕ್ಷಗಳ ನಾಯಕರು ಅನುಮಾನಿಸಿದ್ದಾರೆ.

‘ಯಾವುದೇ ಮಸೂದೆ ಮಂಡಿಸುವುದಿದ್ದರೂ ಎರಡು ದಿನ ಮುಂಚಿತವಾಗಿ ಮಾಹಿತಿ ಹಂಚಿಕೊಳ್ಳಬೇಕು. ವಿರೋಧ ಪಕ್ಷಗಳ ಸದಸ್ಯರನ್ನು ಕತ್ತಲೆಯಲ್ಲಿಟ್ಟು ತರಾತುರಿಯಲ್ಲಿ ಯಾವುದೇ ಮಸೂದೆ ಮಂಡಿಸಬಾರದು. ಆ ರೀತಿ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ’ ಎಂಬುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

’ತರಾತುರಿಯಲ್ಲಿ ಮಸೂದೆಗಳನ್ನು ಮಂಡಿಸಬಾರದು. ಮಸೂದೆ ಪ್ರತಿಗಳನ್ನು ಮೊದಲೇ ಕೊಡಬೇಕು ಎಂದು ವಿರೋಧ ಪಕ್ಷದ ಸದಸ್ಯರು ಕೋರಿದ್ದಾರೆ‘ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ತಿಳಿಸಿದರು.

24ರವರೆಗೂ ಅಧಿವೇಶನ: ನಿಗದಿಯಂತೆ ಇದೇ 24ರವರೆಗೂ ವಿಧಾನಮಂಡಲ ಅಧಿವೇಶನ ನಡೆಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಒಮ್ಮತ ವ್ಯಕ್ತವಾಗಿದೆ.

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಜನವರಿ 1ರವರೆಗೂ ಕಲಾಪ ನಡೆಸಿ. ಹೊಸವರ್ಷದ ಸಂಭ್ರಮಾಚರಣೆಯನ್ನು ಇಲ್ಲಿಯೇ ಮುಗಿಸಿ ಹೋಗೋಣ‘ ಎಂದರು. ಆದರೆ, ಅದಕ್ಕೆ ಒಪ್ಪದ ಸರ್ಕಾರ, ನಿಗದಿತ ಸಮಯದವರೆಗೆ ನಡೆಸಲು ಅಭ್ಯಂತರ ಇಲ್ಲ ಎಂದು ಪ್ರತಿಪಾದಿಸಿತು ಎಂದು ಗೊತ್ತಾಗಿದೆ.

ಉತ್ತರ ಕರ್ನಾಟಕ ಚರ್ಚೆಗೆ ಆದ್ಯತೆ: ’ಉತ್ತರ ಕರ್ನಾಟಕದ ಯೋಜನೆಗಳನ್ನು ಹಾಗೂ ಸಮಸ್ಯೆಗಳನ್ನು ಸಾಮರಸ್ಯದಿಂದ ಚರ್ಚೆ ನಡೆಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ‘ ಎಂದು ಕಾಗೇರಿ ತಿಳಿಸಿದರು.



Read more from source