Karnataka news paper

‘ಇದು ನನ್ನ ಕೆಲಸವಲ್ಲ’ ಪೂಜಾರ, ರಹಾನೆ ಭವಿಷ್ಯದ ಬಗ್ಗೆ ಕೊಹ್ಲಿ ಮಾತು!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಅಂತ್ಯವಾಗಿದೆ.
  • ದಕ್ಷಿಣ ಆಫ್ರಿಕಾ ವಿರುದ್ಧ 1-2 ಅಂತರದಲ್ಲಿ ಟೆಸ್ಟ್‌ ಸರಣಿ ಸೋತ ಟೀಮ್‌ ಇಂಡಿಯಾ.
  • ಪೂಜಾರ ಹಾಗೂ ರಹಾನೆ ಸ್ಥಾನದ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹೊರಹಾಕಿದ ಕೊಹ್ಲಿ.

ಕೇಪ್‌ ಟೌನ್‌:ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರನ್ನು ತಂಡದಲ್ಲಿ ಉಳಿಸಿಕೊಳ್ಳವ ಅಥವಾ ಕೈ ಬಿಡುವ ಬಗ್ಗೆ ಮಾತನಾಡಲು ನಾನು ಇಲ್ಲಿ ಕುಳಿತುಕೊಂಡಿಲ್ಲ. ನೀವು ಆಯ್ಕೆದಾರರ ಬಳಿ ಮಾತನಾಡಬೇಕೆಂದು ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಇಲ್ಲಿನ ನ್ಯೂಲೆಂಡ್ಸ್‌ ಸ್ಟೇಡಿಯಂನಲ್ಲಿ ಶುಕ್ರವಾರ ಅಂತ್ಯವಾದ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಹರಿಣಗಳ ನಾಡಿನಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಗೆಲ್ಲುವ ಕನಸು ಭಗ್ನವಾಯಿತು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿರಾಟ್‌ ಕೊಹ್ಲಿ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಿದರು.

ಈ ವೇಳೆ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರ ಭವಿಷ್ಯದ ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್‌ ಕೊಹ್ಲಿ, “ಕಳೆದ ಎರಡು ಪಂದ್ಯಗಳಲ್ಲಿ ನಮ್ಮ ಬ್ಯಾಟಿಂಗ್‌ ಪ್ರದರ್ಶನ ಇಳಿದಿದೆ. ಟೆಸ್ಟ್‌ ಸರಣಿಯಲ್ಲಿ ಸೋಲಿಗೆ ಇದು ಪ್ರಮುಖ ಕಾರಣ. ಆದರೆ, ಹಿರಿಯ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರ ಭವಿಷ್ಯದ ಬಗ್ಗೆ ಮಾತನಾಡಲು ನಾನಿಲ್ಲಿ ಕುಳಿತಿಲ್ಲ. ಇದು ಆಯ್ಕೆದಾರರಿಗೆ ಬಿಟ್ಟ ಕೆಲಸ ಎಂದು,” ಹೇಳಿದರು.

‘ಆನ್‌ ಫೀಲ್ಡ್‌ನಲ್ಲಿ ಏನಾಗುತ್ತದೆ ಎಂಬುದು ಹೊರಗಿನವರಿಗೆ ಗೊತ್ತಿಲ್ಲ’, ಡಿಆರ್‌ಎಸ್‌ ಡ್ರಾಮಾ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ!

ಮೂರನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಪೂಜಾರ 43 ರನ್‌ ಗಳಿಸಿದ್ದರು. ಆದರೆ ದ್ವಿತೀಯ ಇನಿಂಗ್ಸ್‌ನಲ್ಲಿ ಇದೇ ಲಯ ಮುಂದುವರಿಸಲು ಸಾಧ್ಯವಾಗದೆ ಕೇವಲ 9 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದರು. ಮತ್ತೊಂದೆಡೆ ಅಜಿಂಕ್ಯ ರಹಾನೆ ಎರಡೂ ಇನಿಂಗ್ಸ್‌ಗಳಲ್ಲಿ ಮಕಾಡೆ ಮಲಗಿದರು. ಪ್ರಥಮ ಇನಿಂಗ್ಸ್‌ನಲ್ಲಿ 9 ರನ್‌ಗೆ ವಿಕೆಟ್‌ ಒಪ್ಪಿಸಿದ್ದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಒಂದೇ ಒಂದು ರನ್‌ಗೆ ಔಟ್‌ ಆಗಿದ್ದರು.

ಒಟ್ಟಾರೆ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅಜಿಂಕ್ಯ ರಹಾನೆ ಆಡಿದ ಆರು ಇನಿಂಗ್ಸ್‌ಗಳ ಪೈಕಿ 22.67ರ ಸರಾಸರಿಯಲ್ಲಿ ಕೇವಲ 136 ರನ್‌ ಗಳಿಸಿದ್ದಾರೆ. ಇನ್ನು ಚೇತೇಶ್ವರ್‌ ಪೂಜಾರ 6 ಇನಿಂಗ್ಸ್‌ಗಳಿಂದ 20.67ರ ಸರಾಸರಿಯಲ್ಲಿ ಕೇವಲ 124 ರನ್‌ ಗಳಿಸಿದ್ದಾರೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಜೊಹಾನ್ಸ್‌ಬರ್ಗ್‌ ಟೆಸ್ಟ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದರು. ಆದರೆ ಇನ್ನುಳಿದ ಐದು ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ.

ಪೀಟರ್ಸನ್‌ರ ಸುಲಭ ಕ್ಯಾಚ್‌ ಕೈ ಚೆಲ್ಲಿ ಟ್ರೋಲಾದ ಪೂಜಾರ! ವಿಡಿಯೋ

ಈ ಇಬ್ಬರೂ ಹಿರಿಯ ಬ್ಯಾಟ್ಸ್‌ಮನ್‌ಗಳ ಭವಿಷ್ಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ನನ್ನ ಕೆಲಸವಲ್ಲ. ಇದು ಆಯ್ಕೆದಾರರ ಕೆಲಸ ಎಂದು ಕೊಹ್ಲಿ ಹೇಳಿದರು.

“ಈ ಬಗ್ಗೆ ಆಯ್ಕೆದಾರರ ಮನಸಿನಲ್ಲಿ ಏನಿದೆ ಎಂಬುದನ್ನು ನೀವು ಬಹುಶಃ ಅವರನ್ನೇ ಕೇಳಬೇಕು. ಏಕೆಂದರೆ ಇದು ನನ್ನ ಕೆಲಸವಲ್ಲ. ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ಈ ಹಿಂದೆ ತಂಡಕ್ಕಾಗಿ ಸಾಕಷ್ಟು ಮಾಡಿದ್ದಾರೆ. ಹಾಗಾಗಿ ಅವರನ್ನು ಬೆಂಬಲಿಸುವುದನ್ನು ನಾವು ಮುಂದುವರಿಸುತ್ತೇವೆ, ಈ ಬಗ್ಗೆ ಈ ಹಿಂದೆಯೂ ಹೇಳಿದ್ದೇನೆ ಹಾಗೂ ಈಗಲೂ ಅದನ್ನೇ ಹೇಳುತ್ತೇನೆ,” ಎಂದರು.

‘ಡೀನ್‌ ಎಲ್ಗರ್‌ ನೋಡಿ ಕಲಿಯಿರಿ’ ಕೊಹ್ಲಿ ವಿರುದ್ಧ ಗಂಭೀರ್‌ ಕಿಡಿ!

“ಅಂದಹಾಗೆ ಎರಡನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಅವರು ನಿರ್ಣಾಯಕ ಅರ್ಧಶತಕ ಸಿಡಿಸಿದ್ದರು. ಆ ಮೂಲಕ ಎದುರಾಳಿ ತಂಡಕ್ಕೆ ಸ್ಪರ್ಧಾತ್ನಕ ಗುರಿ ನೀಡಲಾಗಿತ್ತು. ಇದೇ ರೀತಿಯ ಪ್ರದರ್ಶನವನ್ನು ತಂಡದ ಆಟಗಾರರಿಂದ ನಾವು ನಿರೀಕ್ಷೆ ಮಾಡುತ್ತೇವೆ. ಆದರೆ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳ ಭವಿಷ್ಯದ ಬಗ್ಗೆ ನಾನಿಲ್ಲಿ ಕುಳಿತುಕೊಂಡು ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಈ ಬಗ್ಗೆ ಆಯ್ಕೆದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ,” ಎಂದು ವಿರಾಟ್‌ ಕೊಹ್ಲಿ ಹೇಳಿದರು.

ಭಾರತ Vs ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌ ಸ್ಕೋರ್‌ಕಾರ್ಡ್



Read more

[wpas_products keywords=”deal of the day gym”]