Karnataka news paper

ಕನ್ನಡ ಕಡ್ಡಾಯ ಬಲವಂತ ಬೇಡ; ಸರಕಾರ, ವಿಶ್ವವಿದ್ಯಾಲಯಗಳಿಗೆ ಹೈಕೋರ್ಟ್‌ ನಿರ್ದೇಶನ


ಹೈಲೈಟ್ಸ್‌:

  • ಪದವಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ಹೊರಡಿಸಲಾಗಿರುವ ಆದೇಶ ಜಾರಿ ಸಂಬಂಧ ಹೈಕೋರ್ಟ್‌ ನಿರ್ದೇಶನ
  • ಕನ್ನಡ ಕಡ್ಡಾಯ ಸಂಬಂಧ ಸದ್ಯಕ್ಕೆ ವಿದ್ಯಾರ್ಥಿಗಳ ಮೇಲೆ ಯಾವುದೇ ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್‌
  • ರಾಜ್ಯ ಸರಕಾರ ಹಾಗೂ ಎಲ್ಲ ವಿಶ್ವವಿದ್ಯಾಲಯಗಳಿಗೆ ಹೈಕೋರ್ಟ್‌ನಿಂದ ನಿರ್ದೇಶನ

ಬೆಂಗಳೂರು: ಪದವಿ ಶಿಕ್ಷಣ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ಹೊರಡಿಸಲಾಗಿರುವ ಆದೇಶ ಜಾರಿ ಕುರಿತು ಸದ್ಯಕ್ಕೆ ವಿದ್ಯಾರ್ಥಿಗಳ ಮೇಲೆ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಹೈಕೋರ್ಟ್‌ ಸೋಮವಾರ ರಾಜ್ಯ ಸರಕಾರ ಹಾಗೂ ಎಲ್ಲ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಿದೆ.

ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ ಮತ್ತಿತರರು ಸರಕಾರದ ಆದೇಶ ರದ್ದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೇಂದ್ರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ. ನರಗುಂದ್‌ “ಕಳೆದ ವಿಚಾರಣೆ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗಾಗಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಬಹುದೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಂದ್ರವನ್ನು ಕೇಳಲಾಗಿತ್ತು. ಪ್ರಕರಣದ ಬಗ್ಗೆ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಒದಗಿಸಲು ಕೊಂಚ ಕಾಲಾವಕಾಶ ನೀಡಬೇಕು,” ಎಂದು ಕೋರಿದರು.

ಪದವಿ ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಕೇಂದ್ರದ ನಿಲುವೇನು ಎಂದು ಕೇಳಿದೆ ಹೈಕೋರ್ಟ್..
ಆನಂತರ ಬಸವನಗುಡಿ ವಿಜಯಾ ಕಾಲೇಜಿನ 6 ಪದವಿ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ವಕೀಲ ಶ್ರೀಧರ್‌ ಪ್ರಭು “ಕನ್ನಡ ಕಡ್ಡಾಯ ಆದೇಶ ಪ್ರಶ್ನಿಸಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠದಿಂದ ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಗಿದೆ. ಮೊದಲ ವರ್ಷ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಸಂಸ್ಕೃತ ಹಾಗೂ ಆಂಗ್ಲ ಭಾಷೆ ಆಯ್ದುಕೊಳ್ಳಲು ಬಯಸಿದ್ದಾರೆ. ಆದರೆ, ಸರಕಾರದ ಆದೇಶದಂತೆ ಕಡ್ಡಾಯವಾಗಿ ಕನ್ನಡ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ,” ಎಂದು ತಿಳಿಸಿದರು.

ವಿವಿಗಳು ಕಾಲೇಜುಗಳಿಗೆ ವಿವಿಧ ಕೋರ್ಸ್‌ಗಳ ಪ್ರವೇಶ ಅಂತಿಮಗೊಳಿಸಲು ವಿದ್ಯಾರ್ಥಿಗಳ ದಾಖಲಾತಿ ಪತ್ರಗಳನ್ನು ಕಳುಹಿಸುವಂತೆ ಸೂಚಿಸುತ್ತಿವೆ. ಆದ್ದರಿಂದ, ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಸಂಸ್ಕೃತ ಭಾರತಿ ಟ್ರಸ್ಟ್‌ ಪರ ವಾದಿಸಿದ ಹಿರಿಯ ವಕೀಲ ಎಸ್‌.ಎಸ್‌. ನಾಗಾನಂದ್‌ ”ಕನ್ನಡವಲ್ಲದೆ ಇತರ ಭಾಷೆ ಆಯ್ದುಕೊಂಡಿರುವ ವಿದ್ಯಾರ್ಥಿಗಳ ದಾಖಲೆ ಪತ್ರಗಳನ್ನು ಕಾಲೇಜುಗಳು ವಿಶ್ವವಿದ್ಯಾಲಯಗಳಿಗೆ ಕಳುಹಿಸಿಕೊಡದೆ ತಡೆ ಹಿಡಿಯುತ್ತಿವೆ,” ಎಂದು ವಿವರಿಸಿದರು.

ವಾದ ಆಲಿಸಿದ ಪೀಠವು ಕೇಂದ್ರದಿಂದ ಮಾಹಿತಿ ಪಡೆದು ಕೋರ್ಟ್‌ಗೆ ತಿಳಿಸಲು ಎಎಸ್‌ಜಿಗೆ ಕಾಲಾವಕಾಶ ನೀಡಿ ವಿಚಾರಣೆಯನ್ನು ಡಿಸೆಂಬರ್‌ 16ಕ್ಕೆ ಮುಂದೂಡಿತಲ್ಲದೆ, ಅರ್ಜಿಯ ಮುಂದಿನ ವಿಚಾರಣೆವರೆಗೆ ಕನ್ನಡ ಕಡ್ಡಾಯ ವಿಚಾರದಲ್ಲಿ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ಸರಕಾರ ಹಾಗೂ ವಿಶ್ವವಿದ್ಯಾಲಯಗಳಿಗೆ ಸೂಚಿಸಿತು.



Read more