Classroom
By ಸುಶಾಂತ ಕಾಳಗಿ
|
ನೀವೆಷ್ಟೇ ಸುರಕ್ಷಿತ ಕ್ರಮಗಳನ್ನು ಅನುಸರಿಸಿದರೂ, ಅದೆಷ್ಟೇ ಜಾಗರೂಕರಾಗಿದ್ದರೂ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸುವುದು ತಪ್ಪುವುದಿಲ್ಲ. ಕೆಲವೊಂದು ಅನಿರೀಕ್ಷಿತ ದುರ್ಘಟನೆಗಳಲ್ಲಿ ನಾವು ನಮ್ಮವರನ್ನು ಕಳೆದುಕೊಳ್ಳಬಹುದು, ಆಸ್ತಿ-ಪಾಸ್ತಿ ಕಳೆದುಕೊಳ್ಳಬಹುದು ಅಥವಾ ಆರೋಗ್ಯಕ್ಕೆ ಗಂಭೀರ ಹಾನಿಯಾಗಬಹುದು.
ಗೊತ್ತಿಲ್ಲದೆ ಸಂಭವಿಸುವ ವಾಹನ ಅಪಘಾತಗಳು, ಭೂಕಂಪ ಅಥವಾ ಮನೆಯಲ್ಲಿನ ಎಲ್ಪಿಜಿ ಸಿಲಿಂಡರ್ ಬ್ಲಾಸ್ಟ್ ಆಗುವ ಮೂಲಕ ದುರ್ಘಟನೆಗಳು ಎದುರಾಗಬಹುದು. ಆದರೆ ನಾವಿಲ್ಲಿ ನಿಮಗೆ ತಿಳಿಸಬೇಕೆಂದಿರುವ ವಿಷಯ ಏನೆಂದರೆ- ಮನೆಯಲ್ಲಿ ಬಳಸುವ ಎಲ್ಪಿಜಿ ಸಿಲಿಂಡರ್ ಬ್ಲಾಸ್ಟ್ ಆದಲ್ಲಿ ನೀವು 30 ಲಕ್ಷ ರೂಪಾಯಿಗಳವರೆಗೂ ವಿಮಾ ಪರಿಹಾರವನ್ನು ಕ್ಲೇಮ್ ಮಾಡಬಹುದು ಎಂಬ ಮಹತ್ವದ ವಿಷಯವನ್ನು.
ಸಿಲಿಂಡರ್ ಸ್ಫೋಟದಿಂದ ಸಂಭವಿಸಿದ ಸಾವು, ಆಸ್ತಿ-ಪಾಸ್ತಿ ಹಾನಿ ಅಥವಾ ಆರೋಗ್ಯ ಸಮಸ್ಯೆಗೆ ವಿಮಾ ಪರಿಹಾರ ಲಭ್ಯವಿದೆ. ಎಲ್ಪಿಜಿ ಸಿಲಿಂಡರ್ ಸ್ಫೋಟದ ಅನಾಹುತಕ್ಕೆ ವಿಮಾ ಪರಿಹಾರ ಯೋಜನೆ ಇರುವುದು ಸಹ ಬಹುತೇಕರಿಗೆ ಗೊತ್ತಿಲ್ಲ. ಅದೆಷ್ಟೋ ಸಿಲಿಂಡರ್ ಸ್ಫೋಟ ಪ್ರಕರಣಗಳಲ್ಲಿ ನೊಂದವರು ಈ ವಿಮೆಯನ್ನು ಕ್ಲೇಮ್ ಮಾಡುವುದೇ ಇಲ್ಲ. ಬಹುಶಃ ತಿಳುವಳಿಕೆಯ ಕೊರತೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಹೀಗಾಗಿಯೇ ಈ ವಿಷಯದ ಬಗ್ಗೆ ನಾವಿಲ್ಲಿ ನಿಮಗೆ ವಿವರವಾಗಿ ತಿಳಿಸುತ್ತಿದ್ದೇವೆ.

ತೈಲ ಉದ್ಯಮಗಳಿಗೆ ಸಾರ್ವಜನಿಕ ಹೊಣೆಗಾರಿಕೆ ನೀತಿ
ಈ ಎಲ್ಪಿಜಿ ಗ್ಯಾಸ್ ಇನ್ಶೂರೆನ್ಸ್ ಪಾಲಿಸಿಯು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು (OMC ಗಳು) ಮತ್ತು ಭಾರತದಾದ್ಯಂತ ವಿತರಕರು ಪಡೆಯುವ ಗುಂಪು ವಿಮಾ ರಕ್ಷಣೆಯಂತೆಯೇ ಇದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನಂಥ OMCಗಳು ಎಲ್ಪಿಜಿ ಸಂಬಂಧಿತ ಅಪಘಾತಗಳ ಸಂತ್ರಸ್ತರಿಗೆ ತಕ್ಷಣದ ಪರಿಹಾರವನ್ನು ಒದಗಿಸುವ ಸಲುವಾಗಿ ‘ತೈಲ ಉದ್ಯಮಗಳಿಗೆ ಸಾರ್ವಜನಿಕ ಹೊಣೆಗಾರಿಕೆ ನೀತಿ’ ಅಡಿಯಲ್ಲಿ ಸಮಗ್ರ ವಿಮಾ ಪಾಲಿಸಿಗಳನ್ನು ಖರೀದಿಸುತ್ತವೆ. ತೈಲ ಕಂಪನಿಗಳಲ್ಲಿ ನೋಂದಾಯಿಸಿದ ಎಲ್ಲಾ ಎಲ್ಪಿಜಿ ಗ್ರಾಹಕರಿಗೆ ಈ ವಿಮಾ ಯೋಜನೆ ಅನ್ವಯಿಸುತ್ತದೆ.
ಯಾರೆಲ್ಲ ಈ ವಿಮಾ ಯೋಜನೆಗೆ ಒಳಪಡುತ್ತಾರೆ?
ಎಲ್ಪಿಜಿ ಸಿಲಿಂಡರ್ ನಿಂದ ಪ್ರಾಥಮಿಕವಾಗಿ ಹುಟ್ಟಿಕೊಂಡ ಬೆಂಕಿ ಅನಾಹುತದಿಂದ ಸಂಭವಿಸುವ ಎಲ್ಲ ಹಾನಿಗಳಿಗೆ OMC ಗಳ ‘ಸಾರ್ವಜನಿಕ ಹೊಣೆಗಾರಿಕೆ ನೀತಿ’ ಯಡಿ ಪರಿಹಾರ ನೀಡಲಾಗುತ್ತದೆ. ಆದರೆ, ಬಾಹ್ಯ ಕಾರಣದಿಂದ ಹುಟ್ಟಿಕೊಂಡ ಬೆಂಕಿಯಿಂದಾಗಿ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ಹಾನಿಗೆ ಈ ವಿಮೆ ಅನ್ವಯಿಸುವುದಿಲ್ಲ. ಈ ವಿಮೆ ಯೋಜನೆಯಡಿ ನೀಡಲಾಗುವ ವಿಭಿನ್ನ ಪರಿಹಾರ ಯೋಜನೆಗಳು ಹೀಗಿವೆ:
1. ಮರಣ ಸಂಭವಿಸಿದಲ್ಲಿ ವೈಯಕ್ತಿಕ ಅಪಘಾತ ವಿಮೆಯಡಿ ಪ್ರತಿ ವ್ಯಕ್ತಿಗೆ 6 ಲಕ್ಷ ರೂಪಾಯಿ ಪರಿಹಾರ
2. ಪ್ರತಿಯೊಂದು ಘಟನೆಗೆ ಸಂಬಂಧಿಸಿದಂತೆ 30 ಲಕ್ಷ ರೂಪಾಯಿ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸುವಿಕೆ. ಇದು ಪ್ರತಿ ವ್ಯಕ್ತಿಗೆ 20 ಲಕ್ಷ ರೂಪಾಯಿಗೆ ಸೀಮಿತವಾಗಿರುತ್ತದೆ.
3. ಆಸ್ತಿ ಹಾನಿ ಸಂಭವಿಸಿದಲ್ಲಿ ಪ್ರತಿಯೊಂದು ಘಟನೆಗೆ 2 ಲಕ್ಷ ರೂಪಾಯಿಗಳವರೆಗೆ ಪರಿಹಾರ. ಗ್ಯಾಸ್ ಕನೆಕ್ಷನ್ ಪಡೆದಿರುವ ವಿಳಾಸದಲ್ಲಿ ಸಂಭವಿಸಿದ ಘಟನೆಗೆ ಮಾತ್ರ ಈ ಪರಿಹಾರ ಅನ್ವಯಿಸುತ್ತದೆ.
ಎಲ್ಪಿಜಿ ಬಳಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗೆಗಿನ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿರುವ ಕೈಪಿಡಿಯನ್ನು ಗ್ರಾಹಕರಿಗೆ ನೀಡಲಾಗಿರುತ್ತದೆ. ಸಾರ್ವಜನಿಕ ಹೊಣೆಗಾರಿಕೆ ನೀತಿಯಡಿಯ ವಿಮಾ ಯೋಜನೆಯ ಮಾಹಿತಿಯು ಆಯಾ ತೈಲ ಮಾರಾಟ ಕಂಪನಿಗಳ ವೆಬ್ ಸೈಟಿನಲ್ಲಿಯೂ ಲಭ್ಯವಿದೆ.
ಎಲ್ಪಿಜಿ ಅಪಘಾತ ವಿಮೆ ಕ್ಲೇಮ್ ಮಾಡುವುದು ಹೇಗೆ?
1. ದುರ್ಘಟನೆ ಸಂಭವಿಸಿದಾಗ ಆದಷ್ಟೂ ಬೇಗನೆ ಇದರ ಕುರಿತು ಸಂತ್ರಸ್ತರು ಅಥವಾ ಅವರ ಸಂಬಂಧಿಕರು ತೈಲ ಮಾರಾಟ ಕಂಪನಿಯ ಡೀಲರ್ ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕು.
2. ಇದರ ನಂತರ ಡೀಲರ್ ಸಂಬಂಧಿಸಿದ ತೈಲ ಮಾರಾಟ ಕಂಪನಿಗೆ ಮಾಹಿತಿ ರವಾನಿಸುತ್ತಾರೆ.
3. ಸಂತ್ರಸ್ತರು ಅಥವಾ ಅವರ ಹತ್ತಿರದ ಸಂಬಂಧಿಗಳನ್ನು ಸಂಪರ್ಕಿಸುವ ತೈಲ ಮಾರಾಟ ಕಂಪನಿಯು ವಿಮಾ ಪರಿಹಾರ ಮೊತ್ತವನ್ನು ನೀಡಲು ಪ್ರಕ್ರಿಯೆ ಆರಂಭಿಸುತ್ತದೆ.
4. ಈ ವಿಮಾ ಪರಿಹಾರ ಯೋಜನೆಗೆ ಹೆಚ್ಚುವರಿಯಾಗಿ ಪ್ರತಿಯೊಬ್ಬ ಡೀಲರ್ ಥರ್ಡ್ ಪಾರ್ಟಿ ಹೊಣೆಗಾರಿಕೆ ವಿಮಾ ಯೋಜನೆಯನ್ನು ಸಹ ಪಡೆದುಕೊಂಡಿರುತ್ತಾರೆ.
English summary
You Can Claim For Compensation If A Gas Cylinder Explodes: Details And Claim Process
You Can Claim For Compensation If A Gas Cylinder Explodes: Details And Claim Process – Here is a detailed guide in Kannada.
Story first published: Friday, January 14, 2022, 13:11 [IST]
Read more…
[wpas_products keywords=”deal of the day”]