Karnataka news paper

IND vs SA 3rd Test: ‘ಮಾಡು ಇಲ್ಲವೆ ಮಡಿ’ ಸ್ಥಿತಿಯಲ್ಲಿ ಟೀಮ್‌ ಇಂಡಿಯಾ!


ಹೈಲೈಟ್ಸ್‌:

  • ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿ.
  • ಕೇಪ್‌ ಟೌನ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಸೆಣಸುತ್ತಿರುವ ತಂಡಗಳು.
  • 212 ರನ್‌ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ 4ನೇ ದಿನ 111 ರನ್‌ ಅಗತ್ಯವಿದೆ.
  • ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 198 ರನ್‌ಗಳಿಗೆ ಸರ್ವಪತನ ಕಂಡಿದ್ದ ಟೀಮ್‌ ಇಂಡಿಯಾ.

ಕೇಪ್‌ ಟೌನ್(ದಕ್ಷಿಣ ಆಫ್ರಿಕಾ): ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ಅತ್ಯಂತ ನಿರ್ಣಾಯಕ ಘಟ್ಟ ತಲುಪಿದೆ. ಮೂರನೇ ದಿನದಾಂತ್ಯಕ್ಕೆ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೇಲುಗೈ ಸಾಧಿಸಿದ್ದು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.

ಗುರುವಾರ ಭಾರತ ನೀಡಿದ್ದ 212 ರನ್‌ ಗುರಿ ಹಿಂಬಾಲಿಸಿದ್ದ ದಕ್ಷಿಣ ಆಫ್ರಿಕಾ ತಂಡ ಸದ್ಯ 29.4 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 101 ರನ್‌ ಗಳಿಸಿದ್ದು, ಗೆಲುವಿಗೆ ಇನ್ನು ಕೇವಲ 111 ರನ್‌ ಅಗತ್ಯವಿದೆ. ಅಂದಹಾಗೆ ನಾಲ್ಕನೇ ದಿನ ಅರ್ಧಶತಕದಂಚಿನಲ್ಲಿರುವ ಕೀಗನ್‌ ಪೀಟರ್ಸನ್‌(48) ಹಾಗೂ ರಾಸಿ ವ್ಯಾನ್‌ ಡೆರ್‌ ಡುಸ್ಸೆನ್‌ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

ಹರಿಣಗಳ ನಾಡಿನಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಗೆಲುವಿನ ಹೋರಾಟದಲ್ಲಿರುವ ಭಾರತ ತಂಡಕ್ಕೆ ನಾಲ್ಕನೇ ದಿನ ಮೊದಲನೇ ಸೆಷನ್‌ ಅತ್ಯಂತ ನಿರ್ಣಾಯಕವಾಗಿದೆ. ಈಗಾಗಲೇ ಅಪಾಯಕಾರಿ ಬ್ಯಾಟ್ಸ್‌ಮನ್‌ ಡೀನ್‌ ಎಲ್ಗರ್‌ ವಿಕೆಟ್‌ ಕಿತ್ತಿರುವ ಭಾರತ ತಂಡ, ಇಂದು ಆದಷ್ಟು ಬೇಗ ಇನ್‌ ಫಾರ್ಮ್‌ ಕೀಗನ್‌ ಪೀಟರ್ಸನ್‌ ಹಾಗೂ ತೆಂಬಾ ಬವೂಮ ಅವರ ವಿಕೆಟ್‌ಗಳನ್ನು ಕಬಳಿಸಬೇಕಾದ ಅನಿವಾರ್ಯತೆ ಇದೆ.

ಭಾರತ Vs ದಕ್ಷಿಣ ಆಫ್ರಿಕಾ 3ನೇ ಟೆಸ್ಟ್‌ ಸ್ಕೋರ್‌ಕಾರ್ಡ್

ಒಂದು ವೇಳೆ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳನ್ನು ಬೇಗ ಔಟ್‌ ಮಾಡಿದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಔಟ್‌ ಆಫ್‌ ಫಾರ್ಮ್‌ ಇರುವ ಹಿನ್ನೆಲೆಯಲ್ಲಿ ಅವರನ್ನು ಬೇಗ ಪೆವಿಲಿಯನ್‌ಗೆ ಕಳುಹಿಸಬಹುದು. ಈ ಯೋಜನೆಯೊಂದಿಗೆ ಕೊಹ್ಲಿ ಪಡೆ ಇಂದು ಕಣಕ್ಕೆ ಇಳಿಯಲಿದೆ. ಈ ನಿಟ್ಟಿನಲ್ಲಿ ಮೊಹಮ್ಮದ್‌ ಶಮಿ, ಜಸ್‌ಪ್ರಿತ್ ಬುಮ್ರಾ, ಉಮೇಶ್‌ ಯಾದವ್‌ ಹಾಗೂ ಶಾರ್ದುಲ್‌ ಠಾಕೂರ್‌ ಅವರ ಮೇಲೆ ಸಾಕಷ್ಟು ಒತ್ತಡವಿದೆ. ಈ ನಾಲ್ವರ ಪೈಕಿ ಒಬ್ಬರು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿದರೆ ಭಾರತ ಗೆಲ್ಲುವ ಅವಕಾಶವಿರುತ್ತದೆ.

ಸಂಕ್ಷಿಪ್ತ ಸ್ಕೋರ್‌(ಮೂರನೇ ದಿನದಾಟದ ಅಂತ್ಯಕ್ಕೆ)
ಭಾರತ: ಪ್ರಥಮ ಇನಿಂಗ್ಸ್‌ನಲ್ಲಿ 77.3 ಓವರ್‌ಗಳಿಗೆ 223/10 (ವಿರಾಟ್ ಕೊಹ್ಲಿ 79, ಚೇತೇಶ್ವರ್‌ ಪೂಜಾರ 43, ರಿಷಭ್‌ ಪಂತ್‌ 27; ಕಗಿಸೊ ರಬಾಡ 73ಕ್ಕೆ 4, ಮಾರ್ಕೊ ಯೆನ್ಸನ್‌ 55 ಕ್ಕೆ 3, ಡುವಾನ್‌ ಒಲಿವಿಯರ್‌ 42 ಕ್ಕೆ 1, ಕೇಶವ್ ಮಹಾರಾಜ್‌ 14ಕ್ಕೆ 1, ಲುಂಗಿ ಎನ್ಗಿಡಿ 33ಕ್ಕೆ 1)

ದಕ್ಷಿಣ ಆಫ್ರಿಕಾ: ಪ್ರಥಮ ಇನಿಂಗ್ಸ್‌ 76.3 ಓವರ್‌ಗಳಿಗೆ 210/10 (ಕೀಗನ್‌ ಪೀಟರ್ಸನ್‌ 72, ಕೇಶವ್‌ ಮಹಾರಾಜ್‌ 25, ರಾಸಿ ವ್ಯಾನ್‌ ಡೆರ್‌ ಡುಸ್ಸೆನ್‌ 21, ತೆಂಬಾ ಬವೂಮ 28; ಜಸ್‌ಪ್ರಿತ್‌ ಬುಮ್ರಾ 42 ಕ್ಕೆ 5, ಉಮೇಶ್‌ ಯಾದವ್‌ 64 ಕ್ಕೆ 2, ಮೊಹಮ್ಮದ್‌ ಶಮಿ39 ಕ್ಕೆ 2, ಶಾರ್ದುಲ್ ಠಾಕೂರ್‌ 37ಕ್ಕೆ 1)

ಭಾರತ: ದ್ವಿತೀಯ ಇನಿಂಗ್ಸ್‌ 67.3 ಓವರ್‌ಗಳಿಗೆ 198/10 (ವಿರಾಟ್‌ ಕೊಹ್ಲಿ 29, ರಿಷಭ್ ಪಂತ್‌ 100*; ಕಗಿಸೊ ರಬಾಡ 53 ಕ್ಕೆ 3, ಮಾರ್ಕೊ ಯೆನ್ಸನ್‌ 36 ಕ್ಕೆ 4, ಲುಂಗಿ ಎನ್ಗಿಡಿ 23ಕ್ಕೆ 3)

ದಕ್ಷಿಣ ಆಫ್ರಿಕಾ:
ದ್ವಿತೀಯ ಇನಿಂಗ್ಸ್‌: 29.4 ಓವರ್‌ಗಳಿಗೆ 101/2 (ಕೀಗನ್‌ ಪೀಟರ್ಸನ್‌ 48*, ಡೀನ್‌ ಎಲ್ಗರ್‌ 30; ಮೊಹಮ್ಮದ್‌ ಶಮಿ 22 ಕ್ಕೆ 1, ಜಸ್‌ಪ್ರಿತ್‌ ಬುಮ್ರಾ 29ಕ್ಕೆ 1)

ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತ 198ಕ್ಕೆ ಆಲ್‌ಔಟ್‌: ಕೇಪ್‌ ಟೌನ್‌ನ ನ್ಯೂಲೆಂಡ್ಸ್‌ ಮೈದಾನದಲ್ಲಿ 70 ರನ್‌ ಮುನ್ನಡೆಯೊಂದಿಗೆ ಗುರುವಾರ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ರಿಷಭ್‌ ಪಂತ್‌(100*) ವೃತ್ತಿ ಜೀವನದ ನಾಲ್ಕನೇ ಶತಕ ಹೊರತಾಗಿಯೂ ಭಾರತ ತಂಡ ಮೂರನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ 67.3 ಓವರ್‌ಗಳಿಗೆ 198 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 212 ರನ್‌ ಗುರಿ ನೀಡಿತ್ತು.

ಪಂತ್‌ ನಾಲ್ಕನೇ ಶತಕ: ವಿರಾಟ್‌ ಕೊಹ್ಲಿ ವಿಕೆಟ್‌ ಒಪ್ಪಿಸಿದ ಬಳಿಕ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ರಿಷಭ್‌ ಪಂತ್‌ ಹರಿಣಗಳ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಂತರು. ಎದುರಿಸಿದ 139 ಎಸೆತಗಳಲ್ಲಿ ನಾಲ್ಕು ಭರ್ಜರಿ ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ ವೃತ್ತಿ ಜೀವನದ ನಾಲ್ಕನೇ ಶತಕ ಪೂರೈಸಿದ್ದರು. ಆದರೆ, ಮತ್ತೊಂದು ತುದಿಯಲ್ಲಿ ಯಾರೂ ಸಾಥ್‌ ನೀಡದ ಕಾರಣ ಅಜೇಯರಾಗಿಯೇ ಪಂತ್‌ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ್ದರು.

ಬುಮ್ರಾ5 ವಿಕೆಟ್‌ ಸಾಧನೆ: ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಜಸ್‌ಪ್ರಿತ್‌ ಬುಮ್ರಾ ಮಾರಕ ಬೌಲಿಂಗ್‌ ದಾಳಿ ನಡೆಸಿದ್ದರು. ಪಂದ್ಯದ ಆರಂಭಿಕ ದಿನವಾದ ಮಂಗಳವಾರ ನಾಯಕ ಡೀನ್‌ ಎಲ್ಗರ್‌ ವಿಕೆಟ್‌ ಕಿತ್ತಿದ್ದ ಬುಮ್ರಾ, ಬುಧವಾರ ಏಡೆನ್‌ ಮಾರ್ಕ್ರಮ್‌(8), ಕೀಗನ್‌ ಪೀಟರ್ಸನ್‌(72), ಮಾರ್ಕೊ ಯೆನ್ಸನ್‌(7) ಹಾಗೂ ಲುಂಗಿ ಎನ್ಗಿಡಿ(3) ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 210 ರನ್‌ಗಳಿಗೆ ಆಲ್‌ಔಟ್‌ ಮಾಡುವಲ್ಲಿ ಭಾರತಕ್ಕೆ ನೆರವಾಗಿದ್ದರು. ಹರಿಣಗಳ ಪರ ಕೀಗನ್‌ ಪೀಟರ್ಸನ್‌(72) ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದರು.

ವಿರಾಟ್‌ ಕೊಹ್ಲಿ ಅರ್ಧಶತಕ: ಮೊದಲನೇ ದಿನ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಆಕರ್ಷಕವಾಗಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡದ ಪರ ವಿರಾಟ್‌ ಕೊಹ್ಲಿ ಶಿಸ್ತುಬದ್ಧ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಎದುರಿಸಿದ್ದ 201 ಎಸೆತಗಳಲ್ಲಿ 79 ರನ್‌ ಗಳಿಸಿದ್ದರು. ಆ ಮೂಲಕ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 223 ರನ್‌ ದಾಖಲಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು.

ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್(ಪ), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್(ನಾಯಕ), ಏಡೆನ್ ಮಾರ್ಕ್ರಮ್, ಕೀಗನ್ ಪೀಟರ್ಸನ್, ರಾಸ್ಸೀ ವ್ಯಾನ್ ಡೆರ್ ಡುಸ್ಸೆನ್, ತೆಂಬಾ ಬವೂಮ, ಕೈಲ್‌ ವೆರಿನೆ (ವಿಕೆಟ್‌ ಕೀಪರ್‌), ಮಾರ್ಕೊ ಯೆನ್ಸೆನ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಡುವಾನ್‌ ಒಲಿವಿಯರ್, ಲುಂಗಿ ಎನ್ಗಿಡಿ.



Read more

[wpas_products keywords=”deal of the day gym”]