Karnataka news paper

ಖಾಕಿ ವಶದಲ್ಲಿದ್ದ ಕದ್ದ ಅಕ್ಕಿ ಮೂಟೆ ನಾಪತ್ತೆ..! ಮಂಡ್ಯ ಪೊಲೀಸರ ವಿರುದ್ಧವೇ ಡಿಸಿಗೆ ತಹಸೀಲ್ದಾರ್‌ ದೂರು


ಹೈಲೈಟ್ಸ್‌:

  • ಪ್ರಕರಣ ಸಂಬಂಧ ಪಿಎಸೈ ಅಮಾನತು
  • ಅಕ್ರಮ ಪಡಿತರದ ನೂರು ಮೂಟೆ ಅಕ್ಕಿ ನಾಪತ್ತೆ
  • ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವೇಳೆ ವಶಪಡಿಸಿಕೊಂಡಿದ್ದ ಪಡಿತರ ಅಕ್ಕಿ ಚೀಲ

ಮಂಡ್ಯ: ಪೊಲೀಸರ ವಶದಲ್ಲಿದ್ದ ಅಕ್ರಮ ಪಡಿತರದ ನೂರು ಮೂಟೆ ಅಕ್ಕಿ ನಾಪತ್ತೆಯಾಗಿದ್ದು, ತಮಗೆ ಖಾಕಿ ಮೇಲೆಯೇ ಸಂಶಯ ಎಂದು ಮಂಡ್ಯ ತಹಸೀಲ್ದಾರ್‌ ಅವರು ಮಂಡ್ಯ ಪೂರ್ವ ಠಾಣೆಯ ಕೆಲವು ಪೊಲೀಸರ ವಿರುದ್ಧವೇ ದೂರು ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಒಬ್ಬರು ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ಸಂಶಯದ ಮುಳ್ಳು ಈಗ ಪೊಲೀಸರ ವಿರುದ್ಧವೇ ತಿರುಗಿದೆ.

ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವೇಳೆ ವಶಪಡಿಸಿಕೊಂಡಿದ್ದ ಪಡಿತರ ಅಕ್ಕಿ ಚೀಲಗಳಲ್ಲಿ 525ಕ್ಕೂ ಹೆಚ್ಚು ಅಕ್ಕಿ ಚೀಲಗಳು ನಾಪತ್ತೆಯಾಗಿದೆ ಎಂದು ಮಂಡ್ಯ ತಹಸೀಲ್ದಾರ್‌ ಚಂದ್ರಶೇಖರ್‌ ಶಂ.ಗಾಳಿ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ದೂರು ಇಂತಿದೆ: ಡಿಸೆಂಬರ್ 8 ರಂದು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿರುವ ಮಂಡ್ಯ ನಗರದ ಸ್ವರ್ಣಸಂದ್ರ ಕೈಗಾರಿಕಾ ಪ್ರದೇಶದ ಅಕ್ಕಿ ಗಿರಣಿ ಸಮೀಪ ಅಕ್ರಮವಾಗಿ ಪಡಿತರ ಅಕ್ಕಿ ತುಂಬಿದ ಕ್ಯಾಂಟರ್‌ ಇದೆ ಎಂದು ಪೊಲೀಸರಿಗೆ ಮಾಹಿತಿ ಬಂದಿದೆ. ತಕ್ಷಣ ಮಂಡ್ಯ ನಗರ ವೃತ್ತ ನಿರೀಕ್ಷಕ, ಪೂರ್ವ ಠಾಣೆ ಪಿಎಸ್‌ಐ, ಪೊಲೀಸ್‌ ಸಿಬ್ಬಂದಿ ಹಾಗೂ ಕಂದಾಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿದಾಗ, ಕ್ಯಾಂಟರ್‌ ಜತೆಗೆ ಅಂದಾಜು 525ಕ್ಕೂ ಹೆಚ್ಚು ಅಕ್ಕಿ ತುಂಬಿದ ಚೀಲಗಳು ಸಿಕ್ಕಿವೆ. ಇದನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ನಂತರ ಕ್ಯಾಂಟರ್‌ನ್ನು ಪೂರ್ವ ಪೊಲೀಸ್‌ ಠಾಣೆಯ ವಶಕ್ಕೆ ನೀಡಲಾಯಿತು. ಅಕ್ಕಿ ಗಿರಣಿಯ ಪ್ರವೇಶ ದ್ವಾರವನ್ನು ಪೊಲೀಸ್‌ ಸಿಬ್ಬಂದಿ ಬೀಗ ಹಾಕಿ ಕೀಲಿಕೈಗಳನ್ನು ತೆಗೆದುಕೊಂಡು ಹೋದರು. ಇದಲ್ಲದೆ ಭದ್ರತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಈ ವೇಳೆಯಲ್ಲಿ ಆಹಾರ ಶಾಖೆಯ ನಿರೀಕ್ಷಕ ಎಚ್‌. ಡಿ. ವಿಶ್ವನಾಥ್‌ ಸ್ಥಳದಲ್ಲಿ ಇರಬೇಕಿತ್ತು. ಆದರೆ ಅವರು ದೂರವಾಣಿ ಕರೆ ಮಾಡಿ ತಾನು ಮೈಸೂರಿನಲ್ಲಿದ್ದು, ಮರುದಿನ ಹಾಜರಾಗುವುದಾಗಿ ತಿಳಿಸಿದ್ದರು. ಅಂತೆಯೇ, ಮರುದಿನ ಭೇಟಿ ನೀಡಿದಾಗ ಅಕ್ಕಿ ಚೀಲಗಳು ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಇ.ಸಿ ಕಾಯಿದೆ ಭಾರತೀಯ ದಂಡ ಸಂಹಿತೆಯ ನಾನಾ ಸೆಕ್ಷನ್‌ ಅನ್ವಯ ಪ್ರಕರಣ ದಾಖಲಿಸಬೇಕು. ಹೆಚ್ಚುವರಿ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸುವಂತೆ ತಹಸೀಲ್ದಾರ್‌ ಚಂದ್ರಶೇಖರ್‌ ಶಂ.ಗಾಳಿ ದೂರಿನಲ್ಲಿ ಮನವಿ ಮಾಡಿದ್ದಾರೆ.

ಕೊಪ್ಪಳ: ಅಕ್ರಮ ಪಡಿತರ ಪ್ರಕರಣ, ಆಹಾರ ಇಲಾಖೆ ಹುಡುಕುತಿದೆ ಕಾರಣ
ಯಾರ‍ ವಿರುದ್ಧ ದೂರು?

ಮಂಡ್ಯ ನಗರ ವೃತ್ತ ನಿರೀಕ್ಷಕ ಸಂತೋಷ್‌, ಪೂರ್ವ ಠಾಣೆ ಪಿಎಸ್‌ಐ ರವಿಕುಮಾರ್‌, ಇಬ್ಬರು ಸಿಬ್ಬಂದಿ, ಅಕ್ಕಿ ಗಿರಣಿ ಮಾಲೀಕ ನಾಗರಾಜು, ಕ್ಯಾಂಟರ್‌ ಮಾಲೀಕ ಹಾಗೂ ಚಾಲಕನ ವಿರುದ್ಧ ಮಂಡ್ಯ ಡಿವೈಎಸ್ಪಿ ಮಂಜುನಾಥ್‌ ಅವರಿಗೆ ಡಿಸೆಂಬರ್ 9ರಂದು ದೂರು ನೀಡಿದ್ದಾರೆ. ಅಂತೆಯೇ ದೂರವಾಣಿ ಸಂಭಾಷಣೆ, ವಿಡಿಯೋ, ಫೋಟೋ, ಸಿಸಿ ಕ್ಯಾಮೆರಾದ ದೃಶ್ಯಗಳ ಸಾಕ್ಷ್ಯ ನೀಡಿದ್ದಾರೆ.

ಪೊಲೀಸ್‌ ವಾದವೇನು ?

ತಹಸೀಲ್ದಾರ್‌ ಅವರು ಜಿಲ್ಲಾಧಿಕಾರಿಗೆ ದೂರು ನೀಡುತ್ತಿದ್ದಂತೆಯೇ ಅಕ್ಕಿ ಗಿರಣಿಯಿಂದ ಬೇರೆಡೆಗೆ ಸಾಗಿಸಲಾಗಿದ್ದ 425 ಮೂಟೆ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗೋದಾಮಿನಲ್ಲಿದ್ದದು 425 ಮೂಟೆ ಅಕ್ಕಿಯೇ ಹೊರತು 525 ಅಲ್ಲ ಎಂದು ಪೊಲೀಸರು ವಾದಿಸುತ್ತಿದ್ದಾರೆ. ತಹಸೀಲ್ದಾರ್‌ ಅವರು ಸ್ಥಳ ಪರಿಶೀಲನೆ ನಡೆಸದೆ ಮಹಜರಿಗೆ ಸಹಿ ಹಾಕಿದ್ದಾರೆ. ಎಷ್ಟು ಮೂಟೆ ಅಕ್ಕಿ ಇತ್ತೆಂಬುದೇ ಅವರಿಗೆ ಗೊತ್ತಿಲ್ಲ ಎಂದು ಹೇಳಲಾರಂಭಿಸಿದ್ದಾರೆ.

ವಿಜಯಪುರ: 9 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ
ಗೋದಾಮಿನಲ್ಲಿ ಅಕ್ಕಿ ಮೂಟೆಗಳು ಇರಲಿಲ್ಲ

ತಹಸೀಲ್ದಾರ್‌ ದೂರಿಗೂ ಮುನ್ನವೇ ಆಹಾರ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ಸೌಮ್ಯ ಅವರು ವಶಪಡಿಸಿಕೊಳ್ಳಲಾದ ಅಕ್ರಮ ಪಡಿತರ ಅಕ್ಕಿ ಮೂಟೆಗಳು ಗೋದಾಮಿನಲ್ಲಿ ಇಲ್ಲದಿರುವ ಬಗ್ಗೆ ತನಿಖೆ ನಡೆಸಿ ಕ್ರಮ ವಹಿಸುವಂತೆ ಪೊಲೀಸರಿಗೆ ದೂರು ನೀಡಿದ್ದರು. ಈ ಆಧಾರದ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.

ಪಡಿತರ ಅಕ್ಕಿ ಚೀಲಗಳ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಸಬ್‌ಇನ್ಸ್‌ಪೆಕ್ಟರ್‌ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆಗಾಗಿ ಮಳವಳ್ಳಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಸುನೀಲ್‌ ಅವರನ್ನು ನೇಮಿಸಲಾಗಿದ್ದು, ನಾಗಮಂಗಲ ಡಿವೈಎಸ್‌ಪಿಗೆ ವಿಚಾರಣೆ ಜವಾಬ್ದಾರಿ ನೀಡಲಾಗಿದೆ ಎಂದು ಮಂಡ್ಯ ಎಸ್ಪಿ ಎನ್‌. ಯತೀಶ್‌ ತಿಳಿಸಿದ್ದಾರೆ.

ಹೊನ್ನಾವರದಲ್ಲಿ ಕಂಟೇನರ್‌ಗಳಲ್ಲಿ ಸಾಗಾಟವಾಗುತ್ತಿದ್ದ 500 ಕ್ವಿಂಟಲ್ ಪಡಿತರ ಅಕ್ಕಿ ವಶಕ್ಕೆ..!



Read more