ಹೈಲೈಟ್ಸ್:
- ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 41,177 ಹುದ್ದೆಗಳು ಖಾಲಿ ಇವೆ ಎಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗರಿಷ್ಠ ಸಂಖ್ಯೆಯಲ್ಲಿ, ಅಂದರೆ 8,544 ಹುದ್ದೆಗಳು ಖಾಲಿ
- ಹುದ್ದೆಗಳು ಭರ್ತಿಗೊಳಿಸದಿರುವುದರಿಂದ ಬ್ಯಾಂಕ್‌ಗಳಲ್ಲಿ ಅವುಗಳ ಕರ್ತವ್ಯ ನಿರ್ವಹಣೆಗೆ ತೊಂದರೆ ಆಗಿಲ್ಲ ಎಂದ ಸಚಿವೆ
ಬ್ಯಾಂಕ್‌ಗಳ ಪೈಕಿ ಸರಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಗರಿಷ್ಠ ಸಂಖ್ಯೆಯಲ್ಲಿ, ಅಂದರೆ 8,544 ಹುದ್ದೆಗಳು ಖಾಲಿ ಇವೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಹುದ್ದೆಗಳು ಖಾಲಿ ಇರುವುದರ ಬಗ್ಗೆ ಹಾಗೂ ಸಿಬ್ಬಂದಿ ಕೊರತೆಯ ಪರಿಣಾಮ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸರಕಾರಕ್ಕೆ ಅರಿವಿದೆಯೇ ಎಂಬ ಪ್ರಶ್ನೆಗೆ ಲೋಕಸಭೆಯಲ್ಲಿ ಹಣಕಾಸು ಸಚಿವರು ಉತ್ತರಿಸಿದರು.
ಹುದ್ದೆಗಳು ಭರ್ತಿಗೊಳಿಸದಿರುವುದರಿಂದ ಬ್ಯಾಂಕ್‌ಗಳಲ್ಲಿ ಅವುಗಳ ಕರ್ತವ್ಯ ನಿರ್ವಹಣೆಗೆ ತೊಂದರೆ ಆಗಿಲ್ಲ ಎಂದು ತಿಳಿಸಿದ ಸಚಿವರು, ಈ ಕುರಿತ ಅಂಕಿ ಅಂಶಗಳನ್ನು ನೀಡಿದರು.
ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಕಳೆದ 6 ವರ್ಷಗಳಲ್ಲಿ ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕಿನಲ್ಲಿ ಒಂದು ಹೊರತುಪಡಿಸಿ ಯಾವುದೇ ಹುದ್ದೆಗಳನ್ನು ರದ್ದುಪಡಿಸಿಲ್ಲ. ಅಗತ್ಯಾನುಸಾರ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಒಟ್ಟು 12 ಸಾರ್ವಜನಿಕ ಬ್ಯಾಂಕ್‌ಗಳಿದ್ದು, ಅಧಿಕಾರಿ, ಕ್ಲರ್ಕ್, ಉಪ- ಸಿಬ್ಬಂದಿ ವಿಭಾಗದಲ್ಲಿ ಖಾಲಿಯಾಗಿರುವ ಹುದ್ದೆಗಳು ಇವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 6,743, ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾದಲ್ಲಿ 6,295, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 5,112 ಮತ್ತು ಬ್ಯಾಂಕ್ ಆಫ್ ಇಂಡಿಯಾದಲ್ಲಿ 4,848 ಹುದ್ದೆಗಳು ಖಾಲಿ ಇವೆ. ಎಸ್‌ಬಿಐನಲ್ಲಿ 3,423 ಅಧಿಕಾರಿಗಳ ಹಾಗೂ 5,121 ಕ್ಲರ್ಕ್‌ಗಳ ಹುದ್ದೆಗಳು ಖಾಲಿ ಇವೆ. ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್‌ನಲ್ಲಿಯೂ ಹುದ್ದೆಗಳು ಖಾಲಿ ಇವೆ.