ಹೈಲೈಟ್ಸ್:
- ಠೇವಣಿ ವಿಮೆಯನ್ನು 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಸಿದ ಸರಕಾರ
- ಜನರಿಗೆ ಬ್ಯಾಂಕಿಂಗ್ ಈಗ ಹೆಚ್ಚು ಸುರಕ್ಷಿತವಾಗಿದೆ ಎಂದ ಪ್ರಧಾನಿ ನರೇಂದ್ರ ಮೋದಿ
- ಬ್ಯಾಂಕ್‌ಗಳು ಮೋರಟೋರಿಯಂಗೆ ಒಳಗಾದರೆ ಈಗ 90 ದಿನಗಳೊಳಗೆ 5 ಲಕ್ಷ ರೂ. ತನಕ ಹಣ ಹಿಂತೆಗೆತ ಸಾಧ್ಯವಾಗಲಿದೆ ಎಂದ ಪ್ರಧಾನಿ
ಇದು ಠೇವಣಿದಾರರಿಗೆ ರಕ್ಷಣೆಯನ್ನು ಮಾತ್ರವಲ್ಲದೆ, ಬ್ಯಾಂಕಿಂಗ್ ವ್ಯವಸ್ಥೆಯು ಹಿಂದಿಗಿಂತ ಹೆಚ್ಚು ಸುರಕ್ಷಿತವೆನಿಸಿದೆ. ಬ್ಯಾಂಕ್‌ಗಳು ದೇಶದ ಅಭ್ಯುದಯಗಳಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದೇ ಸಂದರ್ಭ ಠೇವಣಿದಾರರ ಠೇವಣಿಗಳ ಸಂರಕ್ಷಣೆ ಕೂಡ ಅಷ್ಟೇ ಮುಖ್ಯ ಎಂದು ಪ್ರಧಾನ ಮಂತ್ರಿ ತಿಳಿಸಿದರು.
ಠೇವಣಿ ವಿಮೆಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಕೆಯ ಯೋಜನೆಗೆ ಚಾಲನೆ ನೀಡಿದ ಅವರು, 27 ವರ್ಷಗಳ ನಂತರ ಈ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಈ ಹಿಂದೆ ಬ್ಯಾಂಕ್‌ಗಳು ಮೋರಟೋರಿಯಂಗೆ ಒಳಗಾದ ನಂತರ ಠೇವಣಿದಾರರಿಗೆ ವರ್ಷಗಟ್ಟಲೆ ಅವರ ಠೇವಣಿ ಹಣ ಹಂಪಡೆಯಲು ಆಗುತ್ತಿರಲಿಲ್ಲ. ಆದರೆ ಈಗ 90 ದಿನಗಳೊಳಗೆ 5 ಲಕ್ಷ ರೂ. ತನಕ ಹಣ ಹಿಂತೆಗೆತ ಸಾಧ್ಯವಾಗಲಿದೆ ಎಂದರು. ಈ ಯೋಜನೆಯ ಮೂಲಕ ಸರಕಾರ ಠೇವಣಿದಾರರ ಹಿತಾಸಕ್ತಿಗೆ ಆದ್ಯತೆ ನೀಡಿದಂತಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ತಿಳಿಸಿದರು.
ಠೇವಣಿದಾರರಿಗೆ ಆರ್‌ಬಿಐ ಎಚ್ಚರಿಕೆ
ಅಧಿಕ ಆದಾಯ ಗಳಿಸುವ ಆಸೆಯಿಂದ ಹೂಡಿಕೆ ಮಾಡುವ ಠೇವಣಿದಾರರು ಅದರ ಹಿಂದಿರುವ ಅಪಾಯದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಗವರ್ನರ್ ಶಕ್ತಿಕಾಂತ ದಾಸ್ ಎಚ್ಚರಿಸಿದರು. ಭಾರತದ ಬ್ಯಾಂಕಿಂಗ್ ವಲಯವು ಸಂಘಟಿತವಾಗಿ ಕಾರ್ಯನಿರ್ವಹಿಸಿದರೆ ದೇಶವು ವಿಶ್ವ ಆರ್ಥಿಕತೆಯ ಚಾಲಕ ಶಕ್ತಿಯಾಗಲಿದೆ ಎಂದರು.
ಆರ್‌ಬಿಐ ಬ್ಯಾಂಕ್‌ಗಳಿಗೆ ಕಾರ್ಪೊರೇಟ್ ಆಡಳಿತದ ಮಾರ್ಗದರ್ಶಿಯನ್ನು ಬಲಪಡಿಸಿದೆ. ಬ್ಯಾಂಕಿಂಗ್ ವಲಯದ ಸುಧಾರಣೆಗೆ ಇದು ಅವಶ್ಯಕವಾಗಿದೆ ಎಂದಿದ್ದಾರೆ.