ಹೈಲೈಟ್ಸ್:
- ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಗುರುವಾರ ಸಂಜೆ 5 ಗಂಟೆಗೆ ಅಪಘಾತ
- ಹಳಿ ತಪ್ಪಿ ಉರುಳಿ ಬಿದ್ದ ಬಿಕಾನೆರ್- ಗುವಾಹಟಿ ಎಕ್ಸ್‌ಪ್ರೆಸ್ ರೈಲಿನ 12 ಕೋಚ್
- ಭೀಕರ ಅಪಘಾತದಲ್ಲಿ ಕನಿಷ್ಠ 9 ಮಂದಿ ಸಾವು, 45 ಪ್ರಯಾಣಿಕರಿಗೆ ಗಾಯ
- ಮೃತಪಟ್ಟವರು, ಗಾಯಾಳುಗಳಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ
ಅಸ್ಸಾಂಗೆ ತೆರಳುತ್ತಿದ್ದ 12 ಕೋಚ್‌ಗಳ ರೈಲು, ಈಶಾನ್ಯ ಗಡಿನಾಡು ರೈಲ್ವೆ (ಎನ್‌ಎಫ್‌ಆರ್) ಅಲಿಪುರ್ದೌರ್ ವಿಭಾಗದ ದೊಮೊಹನಿ ಸಮೀಪ ಅಪಘಾತಕ್ಕೆ ಒಳಗಾಗಿದೆ. ಕೆಲವು ಕೋಚ್‌ಗಳು ಹಳಿ ತಪ್ಪಿದರೆ, ಇನ್ನು ಕೆಲವು ಕೋಚ್‌ಗಳು ಪಲ್ಟಿ ಹೊಡೆದು ಉರುಳಿವೆ. ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಗುವಾಹಟಿಯಲ್ಲಿ ರೈಲ್ವೆ ವಕ್ತಾರರೊಬ್ಬರು ತಿಳಿಸಿದ್ದಾರೆ.
ರೈಲ್ವೆ ವಲಯದ ಉನ್ನತೀಕರಣದ ಬಳಿಕ ರೈಲು ಅಪಘಾತಗಳ ಸಂಖ್ಯೆ ಗಮನಾರ್ಹ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಆದರೆ ಗುರುವಾರ ಸಂಭವಿಸಿದ ಅಪಘಾತವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಪಘಾತದ ಸ್ಥಳಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡುತ್ತಿದ್ದಾರೆ.
ಕನಿಷ್ಠ 50 ಗಾಯಾಳುಗಳನ್ನು ರಕ್ಷಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಮೂಲಗಳು ತಿಳಿಸಿವೆ. ಅವರಲ್ಲಿ 10 ಮಂದಿ ಬಹಳ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 24 ಮಂದಿಯನ್ನು ಜಲ್ಪೈಗುರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. 16 ಮಂದಿಯನ್ನು ಮೋಯ್ನಾಗುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಪ್ರಯಾಣಿಕರನ್ನು ಸಿಲುಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ.
ಹಳಿ ತಪ್ಪಿರುವ ಕೋಚ್‌ಗಳ ಅಡಿ ಇನ್ನೂ ಅನೇಕ ಪ್ರಯಾಣಿಕರು ಸಿಲುಕಿಕೊಂಡಿರುವ ಶಂಕೆ ಇದೆ. ಅಡ್ಡಾದಿಡ್ಡಿ ಬಿದ್ದಿರುವ ಕೋಚ್‌ಗಳನ್ನು ತೆರವುಗೊಳಿಸಲು ಗ್ಯಾಸ್ ಕಟರ್ ಸಾಧನಗಳನ್ನು ಬಳಸಲಾಗುತ್ತಿದೆ. ಈ ರೈಲು ಬುಧವಾರ ರಾತ್ರಿ ಬಿಕಾನೆರ್ ಜಂಕ್ಷನ್‌ನಿಂದ ಹೊರಟಿದ್ದು, ಶುಕ್ರವಾರ ಮುಂಜಾನೆ ಗುವಾಹಟಿ ತಲುಪಬೇಕಿತ್ತು. ಇದು 2.41 ಗಂಟೆ ತಡವಾಗಿ ಚಲಿಸುತ್ತಿತ್ತು. ರೈಲಿನಲ್ಲಿ ಸುಮಾರು 1,053 ಪ್ರಯಾಣಿಕರು ಇದ್ದರು.
‘ಪಶ್ಚಿಮ ಬಂಗಾಳದಲ್ಲಿ ನಡೆದ ರೈಲು ಅಪಘಾತದ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿದ್ದೇನೆ. ಮೃತಪಟ್ಟವರ ಕುಟುಂಬಕ್ಕೆ ನನ್ನ ಸಂತಾಪಗಳು. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೋವಿಡ್ ಕುರಿತಾದ ಸಭೆಯ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಅವರಿಗೆ ಘಟನೆಯ ಬಗ್ಗೆ ವಿವರ ನೀಡಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ ಮತ್ತು ಸಣ್ಣಪುಟ್ಟ ಗಾಯಾಳುಗಳಿಗೆ 25,000 ರೂ ಪರಿಹಾರ ನೀಡುವುದಾಗಿ ಸಚಿವ ಅಶ್ವಿನಿ ವೈಷ್ಣವ್ ಪ್ರಕಟಿಸಿದ್ದಾರೆ.
ಅಪಘಾತದಲ್ಲಿ ಯಾವುದೇ ಹಾನಿಯಾಗದೆ ಬಚಾವಾದ ಪ್ರಯಾಣಿಕರನ್ನು ರಾತ್ರಿ 9.30ಕ್ಕೆ ಮತ್ತೊಂದು ರೈಲಿನಲ್ಲಿ ಗುವಾಹಟಿಗೆ ಕರೆದೊಯ್ಯಲಾಗಿದೆ. ಕತ್ತಲು ಹಾಗೂ ದಟ್ಟವಾದ ಮಂಜಿನ ಕಾರಣ ರಾತ್ರಿ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿತ್ತು.
Read more
[wpas_products keywords=”deal of the day sale today offer all”]